ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು, ನೌಕರರ ಸಮಸ್ಯೆ ಮೊದ್ಲು ಬಗೆಹರಿಸ್ರಿ: ಅಧಿಕಾರಿಗಳಿಗೆ ಪಾಲಿಕೆ ಸದಸ್ಯರ ಆಗ್ರಹ

Last Updated 21 ಜೂನ್ 2022, 4:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅವಳಿನಗರದಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗೈತಿ. ಮೊದ್ಲು ಜಲಮಂಡಳಿ ಹೊರಗುತ್ತಿಗೆ ನೌಕರರ ಸಮಸ್ಯೆ ಬಗೆಹರಿಸಿ, ನೀರು ಕೊಡ್ರಿ. ಆಮೇಲೆ 24x7 ನೀರು ಕಾಮಗಾರಿ ಆರಂಭಿಸ್ರಿ...’

ನಿರಂತರ ನೀರು ಸರಬರಾಜು ಕಾಮಗಾರಿ ಅನುಷ್ಠಾನ ಹೊಣೆ ಹೊತ್ತಿರುವ ಎಲ್ ಅಂಡ್ ಟಿ ಸಂಸ್ಥೆಯು, ಮಹಾನಗರ ಪಾಲಿಕೆ ಸದಸ್ಯರಿಗೆ ನಗರದ ನವೀನ್ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಯೋಜನಾ ಪರಿಚಯ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರು ಸಂಸ್ಥೆಯ ಅಧಿಕಾರಿಗಳು ಮತ್ತು ಪಾಲಿಕೆ ಆಯುಕ್ತರಿಗೆ ಆಗ್ರಹಿಸಿದ್ದು ಹೀಗೆ.

ತಮ್ಮ ವಾರ್ಡ್‌ನ ನೀರಿನ ಸಮಸ್ಯೆಯನ್ನು ಪ್ರಸ್ತಾಪಿಸಿದ ಸದಸ್ಯರು, ಹಲವೆಡೆ ಹದಿನೈದು ದಿನಕ್ಕೊಮ್ಮೆ ನೀರು ಬರುತ್ತಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳನ್ನು ಕೇಳಿದರೆ, ಸಂಸ್ಥೆಯತ್ತ ಬೆರಳು ತೋರಿಸುತ್ತಾರೆ. ನಿಮಗೆ ಕರೆ ಮಾಡಿದರೆ, ಸ್ವೀಕರಿಸುವುದೇ ಇಲ್ಲ ಎಂದು ದೂರಿದರು.

ಹಲವು ಅಡೆತಡೆ: ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಮಾತನಾಡಿ, ‘ಹಲವೆಡೆ ನೀರಿನ ಸಮಸ್ಯೆ ಇರುವುದರಿಂದ ಮತ್ತು ಯೋಜನೆ ಜಾರಿಗೆ ಆರಂಭದಲ್ಲೇ ಅಡೆತಡೆಗಳು ಎದುರಾಗಿವೆ. ಇದುವರೆಗೆ ಅವುಗಳನ್ನು ಪರಿಹರಿಸಲು ನಾನೊಬ್ಬನೆ ಒದ್ದಾಡುತ್ತಿದ್ದೆ. ಇದೀಗ, ಚುನಾಯಿತ ಜನಪ್ರತಿನಿಧಿಗಳು ಇರುವುದರಿಂದ ನನ್ನ ಭಾರವನ್ನು ಸ್ವಲ್ಪ ಕಮ್ಮಿಯಾಗಲಿದೆ ಎಂದು ಭಾವಿಸಿರುವೆ’ ಎಂದರು.

‘₹1206 ಕೋಟಿ ಮೊತ್ತದ ಯೋಜನೆಯಲ್ಲಿ ವಿಶ್ವಬ್ಯಾಂಕ್ ಶೇ 67, ಪಾಲಿಕೆ ಶೇ 27 ಹಾಗೂ ರಾಜ್ಯ ಸರ್ಕಾರ ಶೇ 6ರಷ್ಟು ವೆಚ್ಚ ಭರಿಸುತ್ತಿವೆ. ಸದ್ಯ ಯೋಜನೆಯ ಡೆಮೊ ವಲಯದ 11 ವಾರ್ಡ್‌ಗಳಲ್ಲಿ ನಿರಂತರ ನೀರು ಸಿಗುತ್ತಿದ್ದರೆ, ಪಿ1 ಮತ್ತು ಪಿ2 ವಲಯದ ವಾರ್ಡ್‌ಗಳಲ್ಲಿ ನಿತ್ಯ ನಿಗದಿತ ಅವಧಿಯಲ್ಲಷ್ಟೇ ನೀರು ಬರುತ್ತಿದೆ. ನೀರಸಾಗರದಿಂದ ನೀರು ಪೂರೈಕೆಯಾಗುವ ಹಳೇ ಹುಬ್ಬಳ್ಳಿ ಹಾಗೂ ನವನಗರ ಸುತ್ತಮುತ್ತ ನೀರಿನ ಸಮಸ್ಯೆ ವಿಪರೀತವಾಗಿದೆ. ಇದನ್ನು ತಕ್ಷಣ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ಉಪ ಮೇಯರ್ ಉಮಾ ಮುಕುಂದ, ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ, ಎಲ್ ಆ್ಯಂಡ್ ಟಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಶಶಿಕುಮಾರ್ ಇದ್ದರು.

ಸದಸ್ಯರಿಗೆ ಸಂಸ್ಥೆ ಮನವಿ
ಯೋಜನೆ ಕುರಿತು ವಿವರಿಸಿದ ಎಲ್ ಅಂಡ್‌ ಟಿ ಸಂಸ್ಥೆಯ ಗ್ರಾಹಕ ಸೇವಾ ವ್ಯವಸ್ಥಾಪಕಿ ಶಿಲ್ಪಾ ಜೋಶಿ, ‘ಜಲಮಂಡಳಿಯ 583 ಹೊರಗುತ್ತಿಗೆ ನೌಕರರು ಇದುವರೆಗೆ ನಮ್ಮಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲ. ಹಾಗಾಗಿ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ತೊಂದರೆಯಾಗುತ್ತಿದೆ. ಪಾಲಿಕೆ ಸದಸ್ಯರೇ ಈ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು’ ಎಂದು ಮನವಿ ಮಾಡಿದರು. ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಕೂಡ ಈ ಕುರಿತು ಗಮನ ಸೆಳೆದರು.

ಅದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಈರೇಶ ಅಂಚಟಗೇರಿ, ‘ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು‌ ಕೆಲಸ ಮಾಡಿಸಲು ಪ್ರಯತ್ನಿಸೋಣ. ಆಗದಿದ್ದರೆ, ಪರ್ಯಾಯ ವ್ಯವಸ್ಥೆ ಕುರಿತು ನಿರ್ಧರಿಸೋಣ’ ಎಂದರು. ಅದಕ್ಕೆ ಸದಸ್ಯ ಸಂದೀಲ್ ಕುಮಾರ್, ‘ಮೈಸೂರು ಮಾದರಿಯಲ್ಲಿ ಪಾಲಿಕೆಯೇ ನೌಕರರಿಗೆ ವೇತನ ನೀಡಲು ಏನು ಸಮಸ್ಯೆ? ಆ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಲಿ’ ಎಂದರು.

ಸದಸ್ಯ ವೀರಣ್ಣ ಸವಡಿ ಮಾತನಾಡಿ, ‘ನೀರು ಮತ್ತು ನೌಕರರ ಸಮಸ್ಯೆ ಕುರಿತ ಚರ್ಚೆಗೆ ವಿಶೇಷ ಸಾಮಾನ್ಯ ಸಭೆ ಕರೆದು ಸಮಸ್ಯೆಗಳನ್ನು ಆಲಿಸಬೇಕು’ ಎಂದು ಮೇಯರ್‌ಗೆ ಮನವಿ ಮಾಡಿದರು. ಅದಕ್ಕೆ ಉಳಿದ ಸದಸ್ಯರು ದನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT