ಕಲಘಟಗಿ: ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮಾರ್ಕೆಟಿಂಗ್ ಸೊಸೈಟಿಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಸೋಯಾಬಿನ್ ಕಾಳು ಖರೀದಿ ಕೇಂದ್ರ ಆರಂಭಿಸಿದ್ದು ತಾಲ್ಲೂಕಿನ ರೈತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥಗೌಡ ಮುರಳ್ಳಿ ತಿಳಿಸಿದರು.
ಪಟ್ಟಣದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಲ್ಲಿ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ನ್ಯಾಫೆಡ್ ಸಂಸ್ಥೆಯ ಪರವಾಗಿ 2024-25ನೇ ಸಾಲಿನ ತೆರೆಲಾಗಿದ್ದ ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬಿನ್ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸೊಸೈಟಿ ವ್ಯವಸ್ಥಾಪಕ ಬಸವನಗೌಡ್ರ ಮುದಿಗೌಡ್ರ ಮಾತನಾಡಿ, ‘ಬೆಂಬಲ ಬೆಲೆ ಪ್ರತಿ ಕ್ವಿಂಟಲ್ ಗೆ ₹4,892ರಂತೆ ಒಬ್ಬ ರೈತನಿಂದ ಪ್ರತಿ ಎಕರೆಗೆ 5 ಕ್ವಿಂಟಲ್‌ನಂತೆ ಗರಿಷ್ಠ 20 ಕ್ವಿಂಟಲ್ ಮಾತ್ರ ಖರೀದಿಸಲಾಗುವುದು’ ಎಂದರು.
ಈಗಾಗಲೇ ನೋಂದಣಿ ಕಾರ್ಯ ಆರಂಭವಾಗಿದ್ದು ರೈತರು ಹೆಚ್ಚಿನ ಮಾಹಿತಿಗಾಗಿ 8722006738 ಸಂಪರ್ಕಿಸಲು ಕೊರಲಾಗಿದೆ ಎಂದರು.
ಮಾರ್ಕೆಟಿಂಗ್ ಸೊಸೈಟಿ ಉಪಾಧ್ಯಕ್ಷ ದ್ಯಾಮಣ್ಣ ಬಡಿಗೇರ ನಿರ್ದೇಶಕರಾದ ವೃಷಭ ಬೇಂದ್ರೆ ಪಟ್ಟಣಶೆಟ್ಟಿ, ಕಲ್ಲಪ್ಪ ಅರಶಿಣಗೇರಿ, ನಿಂಬಣ್ಣ ಕುಬ್ಯಾಳ, ಯಲ್ಲಪ್ಪ ಚೌರಗಿ, ಮಹೇಶ ಅಲಗೂರ, ಕಲ್ಮೇಶ ಹಣಮಣ್ಣವರ ಇದ್ದರು.