ಶುಕ್ರವಾರ, ಅಕ್ಟೋಬರ್ 18, 2019
23 °C
ಸಂವಿಧಾನದ 370ನೇ ವಿಧಿ ಮತ್ತು 35ಎ ಕಲಂ ರದ್ದತಿ ಕುರಿತು ಜನಜಾಗೃತಿ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪ

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ: ನೆಹರೂ ನೀಚ ಕೃತ್ಯ

Published:
Updated:
Prajavani

ಧಾರವಾಡ: ‘ಅಖಂಡ ಭಾರತದ ಏಕತೆಗೆ ತೊಡಕಾಗಿದ್ದ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಟ್ಟಿದ್ದು ಜವಾಹರಲಾಲ್‌ ನೆಹರೂ ಅವರ ನೀಚ ಕೃತ್ಯ’ ಎಂದು ಬಂದರು, ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪ ಮಾಡಿದರು.

ರಾಷ್ಟ್ರೀಯ ಐಕ್ಯತೆ ಅಭಿಯಾನದ ಅಡಿಯಲ್ಲಿ ಬಿಜೆಪಿ ಶಹರ ಹಾಗೂ ಗ್ರಾಮೀಣ ಘಟಕ ಆಯೋಜಿಸಿದ್ದ ಒಂದು ರಾಷ್ಟ್ರ ಒಂದು ಸಂವಿಧಾನ ಜನ ಜಾಗೃತಿ ಕಾರ್ಯಕ್ರಮದಲ್ಲಿ ಗುರುವಾರ ಪಾಲ್ಗೊಂಡು ಮಾತನಾಡಿದರು.

‘ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ನಾವೆಲ್ಲರೂ ಒಂದು ಎಂಬ ಪರಿಕಲ್ಪನೆಗೆ 370ನೇ ವಿಧಿ ಅಡ್ಡಿಯಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಚಾಣಾಕ್ಷ ಹಾಗೂ ದಿಟ್ಟ ನಿರ್ಧಾರದಿಂದಾಗಿ ಕಾಶ್ಮೀರಕ್ಕೆ ನೀಡಲಾಗಿದ್ದ ಅತಾರ್ಕಿಕ ವಿಶೇಷ ಸ್ಥಾನಮಾನ ರದ್ದಾಗಿದೆ. ಸಮರ್ಥ, ಸಮಗ್ರ, ಸಮೃದ್ಧ ಹಾಗೂ ಸ್ವಾಭಿಮಾನಿ ಭಾರತ ನಮ್ಮದಾಗಿದೆ’ ಎಂದರು.

‘ನೆಹರೂ ಮಾಡಿದ ಕೃತ್ಯದಿಂದಾಗಿ ಕಾಶ್ಮೀರದಲ್ಲಿ 2 ರಾಷ್ಟ್ರದ ಆಡಳಿತ, 2 ಸಂವಿಧಾನ, 2 ಕಾನೂನು ಇತ್ತು. ಇದನ್ನು ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ವಿರೋಧಿಸಿದ್ದರು ಹಾಗೂ 370ನೇ ವಿಧಿ ರದ್ದತಿಗೆ ಜನಾಂದೋಲನ ನಡೆಸಿದ್ದರು. ಈ ಹೋರಾಟಕ್ಕಾಗಿಯೇ ಪ್ರಾಣ ತೆತ್ತ ಮೊದಲ ಭಾರತೀಯರಾದ ಇವರ ಆತ್ಮಕ್ಕೆ ಮೋದಿ ಹಾಗೂ ಶಾ ಜೋಡಿ ಶಾಂತಿ ದೊರಕಿಸಿಕೊಟ್ಟಿದೆ’ ಎಂದು ಪೂಜಾರಿ ಹೇಳಿದರು.

‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು 370ನೇ ವಿಧಿ ರದ್ದತಿ ಪಕ್ಷದ ಉದ್ದೇಶವಾಗಿತ್ತು. ಈ ಹಾದಿಯಲ್ಲೇ ಇನ್ನೂ ಹಲವು ಕ್ರಮಗಳನ್ನು ಜಾರಿಗೆ ತರಲಿದೆ. ಹೀಗಾಗಿ ಮುಂದಿನ ದಿನಗಳು ಉತ್ತಮವಾಗಿರಲಿವೆ. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಪರಿಕಲ್ಪನೆಯಲ್ಲಿ ಎಲ್ಲರೂ ಕೆಲಸ ಮಾಡಬೇಕು’ ಎಂದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ಮ.ನಾಗರಾಜ ಮಾತನಾಡಿ, ‘ಸಾಂಸ್ಕೃತಿಕವಾಗಿ ನಾನು ಮುಸಲ್ಮಾನ, ಆದರೆ ಆಕಸ್ಮಿಕವಾಗಿ ಹಿಂದೂ ಎಂಬ ನೆಹರೂ ಹೇಳಿಕೆ ದುರದೃಷ್ಟಕರ. ಸರ್ಧಾರ್ ವಲ್ಲಭಾಬಾಯಿ ಪಟೇಲ್ ಅವರನ್ನು ಅಧಿಕಾರದಿಂದ ದೂರವಿಟ್ಟರು. ಒಂದೊಮ್ಮೆ ಪಟೇಲ್‌ಗೆ ಅಧಿಕಾರ ಸಿಕ್ಕಿದ್ದರೆ, ಕಾಶ್ಮೀರ ಎಂದೋ ಭಾರತದ ಭಾಗವಾಗಿರುತ್ತಿತ್ತು. ಆದರೆ ಲೇಡಿ ಮೌಂಟ್‌ಬ್ಯಾಟನ್, ಶೇಖ್ ಅಬ್ದುಲ್ಲ ಅವರ ವಿವಿಧ ಆಕರ್ಷಣೆಯಲ್ಲಿ ದೇಶವನ್ನು ಮರೆತರು. ಈ ದೇಶಕ್ಕೆ ಕಾಂಗ್ರೆಸ್‌ ಮತ್ತು ನೆಹರೂ ದ್ರೋಹ ಎಸಗಿದ್ದಾರೆ’ ಎಂದು ಆರೋಪ ಮಾಡಿದರು.

‘ಕಾಶ್ಮೀರದಲ್ಲಿ ಪಿಡಿಪಿ ಜತೆ ಸರ್ಕಾರ ರಚಿಸಿದ್ದು ಅವರ ಗುಟ್ಟು ತಿಳಿಯಲು, ಸರ್ಕಾರ ಬಿದ್ದಾಗ ರಾಜ್ಯಪಾಲರು ಪಿಡಿಪಿ ಸದಸ್ಯರಿಗೆ ಸಿಗದಂತೆ ಮಾಡಿದ್ದು ರಣತಂತ್ರ, ಆ. 5ರಂದು 370ನೇ ವಿಧಿ ರದ್ದಾಗುವ ಎರಡು ದಿನ ಮೊದಲು ಎಲ್ಲಾ ಸಂಸದರಿಗೂ ಕಾರ್ಯಾಗಾರ ಹಮ್ಮಿಕೊಂಡು ಸಂಸತ್ತಿನಲ್ಲಿರುವಂತೆ ಮಾಡಿದ್ದು, ಪರಿಶಿಷ್ಟ ಜಾತಿಯವರಿಗೆ ಕಾಶ್ಮೀರದಲ್ಲಿ ಮೀಸಲಾತಿ ಮಸೂದೆ ಜಾರಿಗೊಳಿಸಿದ್ದು ಎಲ್ಲವೂ ಶಾ ಅವರ ಚಾಣಾಕ್ಷ ನಡೆಯ ಭಾಗವಾಗಿತ್ತು’ ಎಂದು ನಾಗರಾಜ ವಿವರಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಜಡಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಅರವಿಂದ ಬೆಲ್ಲದ ಮತ್ತು ಅಮೃತ ದೇಸಾಯಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಇದ್ದರು.

ಇದಕ್ಕೂ ಮೊದಲು ಹಿರಿಯ ಕವಿ ಡಾ. ಚೆನ್ನವೀರ ಕಣವಿ, ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ, ವೈದ್ಯ ಡಾ. ಸುಧೀರ ಜಂಬಗಿ, ಡಾ. ಖಾಜಿ ಅವರ ಮನೆಗೆ ಭೇಟಿ ನೀಡಿದ ಸಚಿವ ಶ್ರೀನಿವಾಸ ಪೂಜಾರಿ, 370ನೇ ವಿಧಿ ರದ್ದತಿ ಕುರಿತ ಕಿರುಹೊತ್ತಿಗೆ ನೀಡಿ ಸನ್ಮಾನಿಸಿದರು.

Post Comments (+)