ಸೋಮವಾರ, ಆಗಸ್ಟ್ 26, 2019
27 °C
ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘ ಆಗ್ರಹ

ಏಕಗವಾಕ್ಷಿ ಸೌಲಭ್ಯ ಆರಂಭಿಸಿ

Published:
Updated:

ಹುಬ್ಬಳ್ಳಿ: ‌ನಾಟಕದ ಕ್ಯಾಂಪ್‌ಗಳನ್ನು ಆರಂಭಿಸುವಾಗ ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯಲು ರಾಜ್ಯ ಸರ್ಕಾರ ಏಕಗವಾಕ್ಷಿ ಸೌಲಭ್ಯ ಆರಂಭಿಸಬೇಕು. ಇದರಿಂದ ನಾಟಕ ಕಂಪನಿಗಳ ಮಾಲೀಕರಿಗೆ ಹೊರೆ ಕಡಿಮೆಯಾಗುತ್ತದೆ ಎಂದು ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಚಿಂದೋಡಿ ಶಂಭುಲಿಂಗಪ್ಪ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಯಾವುದೇ ಊರಿನಲ್ಲಿ ನಾಟಕದ ಕ್ಯಾಂಪ್‌ ಹಾಕಲು ಪೊಲೀಸ್‌, ಲೋಕೊಪಯೋಗಿ ಇಲಾಖೆ, ಕೆಇಬಿ, ಅಗ್ನಿಶಾಮಕ, ನಗರಸಭೆ ಹೀಗೆ ಬೇರೆ ಬೇರೆ ಇಲಾಖೆಗಳ ಅನುಮತಿ ಪಡೆಯಬೇಕು. ಇದಕ್ಕಾಗಿ ಸಾಕಷ್ಟು ಸಮಯ ಮತ್ತು ಹಣ ವೆಚ್ಚವಾಗುತ್ತದೆ. ಈ ಎಲ್ಲ ಸೌಲಭ್ಯ ಒಂದೇ ಕಡೆ ಸಿಗುವಂತಾದರೆ ಅನುಕೂಲವಾಗುತ್ತದೆ. ಇದನ್ನು ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರ ಹಿಂದೆ ಯೋಜನೆ ರೂಪಿಸಿತ್ತು. ಇದುವರೆಗೂ ಜಾರಿಗೆ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರ ನಾಟಕ ಕಂಪನಿಗಳ ಮಾಲೀಕರಿಗೂ ಒಂದಷ್ಟು ಸೌಲಭ್ಯಗಳನ್ನು ಒದಗಿಸಿದರೆ ಅನುಕೂಲವಾಗುತ್ತದೆ. ವಿದ್ಯುತ್‌ ಬಿಲ್‌ಗೆ ರಿಯಾಯಿತಿ ದರದಲ್ಲಿ ಹಣ ಪಡೆಯಬೇಕು. ವೃತ್ತಿರಂಗಭೂಮಿ ಕಲಾವಿದರಿಗೆ ಸರ್ಕಾರ ಮಾಸಿಕ ₹ 1,500 ಮಾಸಾಶನ ನೀಡುತ್ತಿದೆ. ಇದನ್ನು ₹ 3,000ಕ್ಕೆ ಹೆಚ್ಚಿಸಬೇಕು. ಆದ್ಯತೆಗೆ ಅನುಗುಣವಾಗಿ ರಂಗಭೂಮಿಗೆ ಜಿಲ್ಲಾ ಕೇಂದ್ರಗಳಲ್ಲಿ ರಂಗಮಂದಿರ ನಿರ್ಮಿಸಿಕೊಡಬೇಕು’ ಎಂದು ಮನವಿ ಮಾಡಿದರು.

‘ರಾಜ್ಯ ಸರ್ಕಾರ ಎ, ಬಿ ಮತ್ತು ಸಿ ಎಂದು ಮೂರು ಹಂತದಲ್ಲಿ ಕಂಪನಿಗಳನ್ನು ವಿಂಗಡಿಸಿ ಅದಕ್ಕೆ ತಕ್ಕಂತೆ ಅನುದಾನ ನೀಡುತ್ತಿದೆ. 25 ವರ್ಷ ಮೇಲ್ಪಟ್ಟ ಕಂಪನಿಗಳಿಗೆ ₹ 11 ಲಕ್ಷ, 15 ವರ್ಷ ಮೇಲ್ಪಟ್ಟ ಕಂಪನಿಗಳಿಗೆ ₹ 8 ಲಕ್ಷ ಮತ್ತು 10 ವರ್ಷಕ್ಕೂ ಹಳೆಯ ಕಂಪನಿಗಳಿಗೆ ₹ 5 ಲಕ್ಷ ನೀಡುತ್ತಿದೆ. ಈ ಅನುದಾನದಲ್ಲಿಯೂ ಏರಿಳಿತ ಆಗುತ್ತದೆ. ಆದ್ದರಿಂದ ರಾಜ್ಯದ ಹಳೆಯ ಕಂಪನಿಗಳಿಗೆ ಸರ್ಕಾರ ಶಾಶ್ವತ ಅನುದಾನ ಕಲ್ಪಿಸಬೇಕು’ ಎಂದರು.

ಮಾಲೀಕರ ಸಂಘದ ಉಪಾಧ್ಯಕ್ಷೆ ಹಾಗೂ ಹಿರಿಯ ಕಲಾವಿದೆ ಮಾಲತಿ ಸುಧೀರ್‌ ಮಾತನಾಡಿ ‘ವೃತ್ತಿ ರಂಗಭೂಮಿಯಿಂದ ಬಂದವರು ಹಿಂದೆ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ಅವರಿಗೆ ನಮ್ಮ ಬೇಡಿಕೆ ಈಡೇರಿಸುವಂತೆ ಮಾಡಿದ ಮನವಿಗೆ ಇದುವರೆಗೂ ಸ್ಪಂದನೆ ದೊರೆತಿಲ್ಲ. ವೃತ್ತಿ ಕಾಯಕಲ್ಪ ಯೋಜನೆ ಅಡಿ ನೀಡುವ ಅನುದಾನ ಕೂಡ ಸರಿಯಾದ ಸಮಯಕ್ಕೆ ಬರುತ್ತಿಲ್ಲ’ ಎಂದು ನೋವು ತೋಡಿಕೊಂಡರು.

ಸಂಘದ ಅಧ್ಯಕ್ಷ ಚಿಂದೋಡಿ ಶ್ರೀಕಂಠೇಶ್ ಇದ್ದರು.

Post Comments (+)