ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದಲ್ಲಿ ಕಾರ್ಖಾನೆಗಳ ಸಮೀಕ್ಷೆ ಆರಂಭ; ನಿಯಮ ಉಲ್ಲಂಘನೆ ಪತ್ತೆ

10 ತಂಡಗಳಿಂದ ಕಾರ್ಖಾನೆಗಳ ತಪಾಸಣೆ; ನಮೂನೆಯಲ್ಲಿ ಮಾಹಿತಿ ಸಂಗ್ರಹ
Last Updated 27 ಜುಲೈ 2022, 16:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಎಂಟು ವಲಯಗಳಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ಅನುಮತಿ ಪಡೆಯದೆ ಹಾಗೂ ಕಾನೂನು ನಿಯಮಾವಳಿಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳ ಸಮೀಕ್ಷೆಮಂಗಳವಾರದಿಂದಆರಂಭವಾಗಿದ್ದು, ಕೆಲವು ಕಾರ್ಖಾನೆಗಳು ಕಾನೂನು ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದೆ.

ವಿವಿಧ ಇಲಾಖೆಗಳ ಅಧಿಕಾರಿಗಳು ಒಳಗೊಂಡ ತಂಡ ತಾರಿಹಾಳ, ಗೋಕುಲ ರಸ್ತೆ 1ನೇ ಗೇಟ್‌, ಗೋಕುಲ ರಸ್ತೆ 2ನೇ ಗೇಟ್‌, ಗಾಮನಗಟ್ಟಿ, ರಾಯಾಪೂರ, ಸತ್ತೂರ, ಬೇಲೂರು, ರಾಮನಕೊಪ್ಪ ಕೈಗಾರಿಕಾ ಘಟಕಗಳ ಸಮೀಕ್ಷೆ ಆರಂಭಿಸಿವೆ. ಮೊದಲ ದಿನ ಅಂದಾಜು 150ರಷ್ಟು ಕಾರ್ಖಾನೆಗಳನ್ನು ತಪಾಸಣೆ ನಡೆಸಲಾಗಿದೆ. ಅವುಗಳಲ್ಲಿ ಕೆಲವು ಕಾರ್ಖಾನೆಗಳು ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಅಗ್ನಿ ಶಾಮಕ ಇಲಾಖೆಯಿಂದ ಅನುಮತಿ ಪಡೆಯದೇ ಇರುವುದು ಕಂಡು ಬಂದಿದೆ. ಮತ್ತೆ ಕೆಲವು ಕಾರ್ಖಾನೆಗಳು ಅನುಮತಿ ನವೀಕರಣ ಮಾಡಿಕೊಳ್ಳದೆ, ಕಾರ್ಮಿಕರಿಗೆ ಅಗತ್ಯ ರಕ್ಷಣಾ ಸಲಕರಣೆ ನೀಡದೆ ಕಾರ್ಯ ನಿರ್ವಹಿಸುತ್ತಿರುವುದು ಪತ್ತೆಯಾಗಿದೆ.

‘ಸಮೀಕ್ಷಾ ಕಾರ್ಯ ಆರಂಭವಾಗಿದ್ದು ಪ್ರತಿಯೊಂದು ಕಾರ್ಖಾನೆಯನ್ನು ತಪಾಸಣೆ ಮಾಡಲಾಗುತ್ತಿದೆ. ನಿಯಮಾವಳಿ ಉಲ್ಲಂಘಿಸಿದ ಹಾಗೂ ಕಾರ್ಮಿಕರ ರಕ್ಷಣೆ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಆ ಕುರಿತು ಸಿದ್ಧಪಡಿಸಿದ ವರದಿಯನ್ನು ಜಿಲ್ಲಾಡಳಿತಕ್ಕೆ ಇದೇ 29ರ ಒಳಗೆ ತಲುಪಿಸುತ್ತೇವೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ಸಿದ್ದಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಟಿ. ಸಿದ್ದಣ್ಣ ಅವರನ್ನು ಸಮೀಕ್ಷಾ ಕಾರ್ಯಕ್ಕೆ ನೋಡಲ್‌ ಅಧಿಕಾರಿಯನ್ನಾಗಿ ನೇಮಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ.ಹೆಸ್ಕಾಂ, ಕಾರ್ಮಿಕ, ಅಗ್ನಿಶಾಮಕ, ಕಂದಾಯ, ಪೊಲೀಸ್‌, ಕೆಐಎಡಿಬಿ, ಕಾರ್ಖಾನೆ ಹಾಗೂ ಬಾಯ್ಲರ್‌ ಇಲಾಖೆ ಅಧಿಕಾರಿಗಳನ್ನೊಳಗೊಂಡ ಹತ್ತು ತಂಡಗಳನ್ನು ರಚಿಸಲಾಗಿದೆ. ಪ್ರತಿಯೊಂದು ತಂಡಕ್ಕೂ ಇಲಾಖೆಯೊಂದರ ಅಧಿಕಾರಿಯನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

ಕೈಗಾರಿಕಾ ಘಟಕದಲ್ಲಿರುವ ಪ್ರತಿಯೊಂದು ಕಾರ್ಖಾನೆಗೂ, ಕಟ್ಟಡಕ್ಕೂ ತಂಡದ ಪ್ರತಿಯೊಬ್ಬ ಸದಸ್ಯರು ಭೇಟಿ ನೀಡಿ ಪರಿಶೀಲಿಸಿ ನಿಗದಿತ ನಮೂನೆಯಲ್ಲಿ ಮಾಹಿತಿ ಪಡೆಯಬೇಕು. ಕಾರ್ಮಿಕರ ಸುರಕ್ಷತೆ ಹಾಗೂ ಕಾನೂನು ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಬೇಕು. ಘಟಕವಾರು ತಪಾಸಣೆ ನಡೆಸಿದ ಹಾಗೂ ಕ್ರಮಕೈಗೊಂಡ ವರದಿಯನ್ನು ಜುಲೈ 29ರ ಒಳಗೆ ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ಆದೇಶ ಪತ್ರದಲ್ಲಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಕಠಿಣ ಕ್ರಮಕ್ಕೆ ಆಗ್ರಹ

‘ಧಾರವಾಡ ಜಿಲ್ಲೆಯಲ್ಲಿರುವ ಯಾವ ಕೈಗಾರಿಕಾ ಪ್ರದೇಶದಲ್ಲಿಯೂ ಸ್ಫೋಟಕ ವಸ್ತುಗಳನ್ನು ಸಿದ್ಧಪಡಿಸುವ ಕಾರ್ಖಾನೆಗೆ ಅನುಮತಿಯಿಲ್ಲ. ಆದರೆ, ತಾರಿಹಾಳದಲ್ಲಿ ಸ್ಪಾರ್ಕಲ್‌ ಕ್ಯಾಂಡಲ್‌ ಕಾರ್ಖಾನೆ ಎರಡು ತಿಂಗಳ ಕಾಲ ಹೇಗೆ ಕಾರ್ಯನಿರ್ವಹಿಸಿತ್ತು ಎನ್ನುವುದು ಅಚ್ಚರಿಯ ಸಂಗತಿ. ಸಮೀಕ್ಷೆ ನಡೆಯುತ್ತಿರುವುದು ಸಂತಸದ ಸಂಗತಿ. ನಿಯಮ ಉಲ್ಲಂಘಿಸಿದ ಕಾರ್ಖಾನೆಗಳ ಮಾಲೀಕರ ವಿರುದ್ಧ ಹಾಗೂ ಅಧಿಕಾರಿಗಳ ವೈಫಲ್ಯ ಕಂಡು ಬಂದರೆ ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಅಗ್ನಿಶಾಮಕ ಠಾಣೆ, ಆಂಬುಲೆನ್ಸ್‌ ವ್ಯವಸ್ಥೆ ಇದ್ದರೆ ಅನುಕೂಲ’ ಎಂದು ಉದ್ಯಮಿ ವಸಂತ ಲದ್ವಾ ಹೇಳಿದರು.

89 ಅಧಿಕಾರಿಗಳ ಸಮೀಕ್ಷಾ ತಂಡ

ಮೊದಲ ದಿನ 150ರಷ್ಟು ಕಾರ್ಖಾನೆಗಳ ತಪಾಸಣೆ

ವರದಿ ಸಲ್ಲಿಕೆಗೆ ಜಿಲ್ಲಾಧಿಕಾರಿ ಗಡುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT