ಸುಪ್ರೀಂ ಆದೇಶ ಮೀರಿ ಗಣಿಗಾರಿಕೆಗೆ ಅನುಮತಿ

7
ಸಂಡೂರಿನ ಕುಮಾರಸ್ವಾಮಿ ದೇವಾಲಯದ ಸಮೀಪದಲ್ಲಿ ನಂದಿ ಮೈನ್ಸ್‌ಗೆ ರಾಜ್ಯ ಸರ್ಕಾರ ಅನುಮತಿ ಆರೋಪ

ಸುಪ್ರೀಂ ಆದೇಶ ಮೀರಿ ಗಣಿಗಾರಿಕೆಗೆ ಅನುಮತಿ

Published:
Updated:

ಧಾರವಾಡ: ‘ಸುಪ್ರೀಂ ಕೋರ್ಟ್‌ ಆದೇಶವಿದ್ದರೂ ಬಳ್ಳಾರಿಯ ಸಂಡೂರಿನಲ್ಲಿರುವ ಐತಿಹಾಸಿ ಕುಮಾರಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ರಾಜ್ಯ ಸರ್ಕಾರ ಗಣಿಗಾರಿಕೆಗೆ ಅವಕಾಶ ನೀಡುವ ಮೂಲಕ ನ್ಯಾಯಾಲಾಯದ ಆದೇಶ ಉಲ್ಲಂಘಿಸಿದೆ’ ಎಂದು ಸಮಾಜ ಪರಿವರ್ತನ ಸಮುದಾಯದ ಎಸ್‌.ಆರ್‌.ಹಿರೇಮಠ ಆರೋಪಿಸಿದರು.

‘ದೇವಾಲಯದ 2ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು 2013ರ ಜುಲೈನಲ್ಲಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ ಈ ನಿಷೇಧಿತ ಪ್ರದೇಶದಲ್ಲೇ ನಂದಿ ಮೈನ್ಸ್‌ಗೆ ಗಣಿಗಾರಿಕೆ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಕುರಿತು ಜನ ಸಂಗ್ರಾಮ ಪರಿಷತ್ ವತಿಯಿಂದ ಕೇಂದ್ರ ಉನ್ನತಾಧಿಕಾರ ಸಮಿತಿಗೆ ಪತ್ರ ಬರೆಯಲಾಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇದೇ ವಿಷಯವಾಗಿ ಸಂಡೂರಿನಲ್ಲಿ ಆ. 30 ಹಾಗೂ 31ರಂದು ಗಣಿಗಾರಿಕೆಯಿಂದ ಜನರ ಬದುಕಿನ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಕಾರ್ಯಾಗಾರ ಆಯೋಜಿಸಲಾಗಿದೆ. ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ₹1ಲಕ್ಷ ಕೋಟಿ ಹಾನಿ ಕುರಿತೂ ಚರ್ಚೆಗಳು ನಡೆಯಲಿವೆ’ ಎಂದರು.

‘ಹಾನಿ ಭರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಎಲ್ಲಾ ಪಕ್ಷಗಳು ಒಮ್ಮತಕ್ಕೆ ಬರಬೇಕು. ಅಕ್ರಮ ಗಣಿಗಾರಿಕೆ ಕುರಿತು ರಚಿಸಿದ ಸಚಿವ ಸಂಪುಟದ ಸಮಿತಿಯು, ಶ್ವೇತ ಪತ್ರದ ಆಧಾರದ ಮೇಲೆ ಎಲ್ಲ ರಾಜಕೀಯ ಪಕ್ಷಗಳನ್ನು ಸಮಾಲೋಚಿಸಿ ಕ್ರಮ ಕೈಗೊಳ್ಳಬೇಕು’ ಎಂದು ಹಿರೇಮಠ ಆಗ್ರಹಿಸಿದರು.

‘ರಾಜ್ಯ ಸರ್ಕಾರ ರೈತರ ಸಾಲ‌ಮನ್ನಾ ಮಾಡಿರುವ ಸಂದರ್ಭದಲ್ಲಿ‌ ಸಂಪನ್ಮೂಲ ‌ಕ್ರೋಢೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು. ಜತೆಗೆ ಮಹದಾಯಿ ತೀರ್ಪಿನ ಕುರಿತು ಸರ್ಕಾರ ಒಂದು ವಾರದೊಳಗಾಗಿ ಮುಂದಿನ ಕಾರ್ಯಕ್ರಮಗಳ ಕುರಿತು ತೀರ್ಮಾನ ಕೈಗೊಳ್ಳಬೇಕು. ಇಷ್ಟು ದಿನಗಳ ಹೋರಾಟದ ಶ್ರಮ ವ್ಯರ್ಥವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !