ಪಿಡುಗು ಮುಕ್ತ ಸಮಾಜ ನಿರ್ಮಾಣ ಗುರಿಯಾಗಬೇಕು

7

ಪಿಡುಗು ಮುಕ್ತ ಸಮಾಜ ನಿರ್ಮಾಣ ಗುರಿಯಾಗಬೇಕು

Published:
Updated:
Deccan Herald

ಧಾರವಾಡ: ’ಬಾಲ್ಯ ವಿವಾಹದಂತ ಪಿಡುಗು ಮತ್ತು ಇತರ ದೌರ್ಜನ್ಯಗಳಿಂದ ಮಹಿಳೆಯರನ್ನು ಮುಕ್ತಗೊಳಿಸುವ ಮೂಲಕ ಸದೃಢ, ಆರೋಗ್ಯಕರ ಸಮಾಜ ನಿರ್ಮಾಣ ನಮ್ಮ ಗುರಿಯಾಗಬೇಕು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್.ಆರ್., ಹೇಳಿದರು.

ಸರ್ಕಾರಿ ವೀಕ್ಷಣಾಲಯ ಸಂಸ್ಥೆಯ ಸಭಾಂಗಣದಲ್ಲಿ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ ಹಾಗೂ ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಂಟಿಯಾಗಿ ಆಯೋಜಿಸದ್ದ ’ಬಾಲ್ಯ ವಿವಾಹ ತಡೆಯುವಲ್ಲಿ ಬಾಲ್ಯ ವಿವಾಹ ನಿಷೇದಾಧಿಕಾರಿಗಳ ಕರ್ತವ್ಯಗಳು’ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

’ಆರೋಗ್ಯವಂತ ಮಕ್ಕಳಿಂದ ಮಾತ್ರ ಆರೋಗ್ಯಯುತ ಸಮಾಜ ರೂಪಿಸಲು ಸಾಧ್ಯ. ಆದ್ದರಿಂದ ಎಲ್ಲ ಇಲಾಖೆ ಅಧಿಕಾರಿಗಳು ಭವಿಷ್ಯದ ಸಮಸ್ಯೆಗಳನ್ನು ಗಮದಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗಬೇಕು. ಬಾಲ್ಯ ವಿವಾಹ ಕುರಿತು ಎಲ್ಲ ಇಲಾಖೆ ಅಧಿಕಾರಿಗಳು ಜಾಗೃತಿ ವಹಿಸಬೇಕು. ವಿಶೇಷವಾಗಿ ಶಿಕ್ಷಣ ಇಲಾಖೆ ಹತ್ತನೆಯ ತರಗತಿಯಲ್ಲಿ ಅನುರ್ತ್ತೀಣರಾಗುವ ಹಾಗೂ ನಿರಂತರವಾಗಿ ಶಾಲೆಗೆ ಗೈರುಹಾಜರಾಗುವ ಹೆಣ್ಣುಮಕ್ಕಳ ಬಗ್ಗೆ ನಿಗಾ ವಹಿಸಬೇಕು. ಮನೆ ಸೇರಿದಂತೆ ಇತರ ಸ್ಥಳಗಳಲ್ಲಿ ಮಕ್ಕಳ ಮೇಲೆ ಆಗುವ ದೌರ್ಜನ್ಯಗಳ ಬಗ್ಗೆ ಮಕ್ಕಳಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ' ಎಂದರು.  

ಸಿವಿಲ್ ನ್ಯಾಯಾಧೀಶ ಚಿಣ್ಣನ್ನವರ.ಆರ್.ಎಸ್., ಮಾತನಾಡಿ, ’ಬಾಲ್ಯವಿವಾಹದಂಥ ಪಿಡುಗು ತಡೆಗಟ್ಟಲು ಕಾನೂನುಗಳನ್ನು ರೂಪಿಸಿ, ಬಾಲ್ಯ ವಿವಾಹ ನಿಷೇದಾಧಿಕಾರಿಗಳನ್ನು ನೇಮಿಸಲಾಗಿದೆ. ಅಲ್ಲದೇ ಈ ದಿಸೆಯಲ್ಲಿ ಹಲವು ಕರ್ತವ್ಯ, ಜವಾಬ್ದಾರಿಗಳನ್ನು ವಹಿಸಲಾಗಿದೆ. ಆದರೆ ಇದು ಕೆಲವೇ ಇಲಾಖೆಗಳ ಕೆಲಸ ಎಂಬ ಭ್ರಮೆ ಇತರ ಇಲಾಖೆಗಳ ನಿಷೇಧಾಧಿಕಾರಿಗಳಲ್ಲಿದೆ. ರಾಷ್ಟ್ರದಲ್ಲಿ ಶೇ. 60 ಕ್ಕೂ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿವೆ. ಇದಕ್ಕೆ ಅಧಿಕಾರಿಗಳ ನಿಧಾನಗತಿಯೇ ಕಾರಣ'  ಎಂದರು.

’ಬಾಲ್ಯ ವಿವಾಹ ತಿದ್ದುಪಡಿ ಕಾಯ್ದೆ ಪ್ರಕಾರ ಬಾಲ್ಯ ವಿವಾಹಕ್ಕೊಳಗಾವರು, ಭಾಗವಹಿಸಿದವರು ಮತ್ತು ಪ್ರೋತ್ಸಾಹಿಸಿದವರಿಗೆ ಶಿಕ್ಷೆ, ದಂಡ ವಿಧಿಸಲು ಅವಕಾಶವಿದೆ. ಭೌತಿಕ ಮತ್ತು ಮಾನಸಿಕವಾಗಿ ಪಕ್ವವಲ್ಲದ ಕಾಲದಲ್ಲಿ ಹೆಣ್ಣು ಮಗುವಿಗೆ ಮದುವೆ ಮಾಡುವುದರಿಂದ ಅವರು ಅನೇಕ ರೀತಿಯ ಮಾನಸಿಕ ಮತ್ತು ದೈಹಿಕ ರೋಗಗಳಿಗೆ ಒಳಗಾಗುತ್ತಾರೆ. ಸರ್ಕಾರದ ವಿವಿಧ ಇಲಾಖೆಗಳಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯಲ್ಲಿ ನೀಡಿರುವ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು' ಎಂದು ಹೇಳಿದರು.  

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್.ಎಂ.ದೊಡ್ಡಮನಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣಾ ಸಂಗಳದ, ಹಿರಿಯ ನ್ಯಾಯವಾದಿ ಎಚ್.ಎಚ್.ಶಿವಳ್ಳಿ, ತಹಶೀಲ್ದಾರರಾದ ನವೀನ ಹುಲ್ಲೂರ, ಬಸವರಾಜ ಮೆಳವಂಕಿ, ಸಿಪಿಐ ಪ್ರಶಾಂತ ನಾಯಕ, ನವಲಗುಂದ ತಾಲ್ಲೂಕಾ ಪಂಚಾಯ್ತಿ ಇಓ ಪವಿತ್ರಾ ಪಾಟೀಲ ಸೇರಿದಂತೆ ಜಿಲ್ಲೆಯ ಕ್ಷೇತ್ರಶಿಕ್ಷಣಾಧಿಕಾರಿಗಳು, ಶಿಶುಅಭಿವೃದ್ಧಿ ಅಧಿಕಾರಿಗಳು, ಪೊಲೀಸ್, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಇದ್ದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !