ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಳನಕೆರೆಗೆ ಕೊಳಚೆ ನೀರು: ತುರ್ತು ಕ್ರಮಕ್ಕೆ ಶೆಟ್ಟರ್ ಸೂಚನೆ

Last Updated 3 ಜುಲೈ 2019, 16:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿರುವ ತೋಳನಕೆರೆಗೆ ಶಾಸಕರಾದ ಜಗದೀಶ ಶೆಟ್ಟರ್ ಮತ್ತು ಅರವಿಂದ ಬೆಲ್ಲದ ಬುಧವಾರ ಭೇಟಿ ನೀಡಿ, ಕೆರೆಗೆ ಒಳಚರಂಡಿ ನೀರು ಹರಿಯುತ್ತಿರುವ ಸ್ಥಳವನ್ನು ಪರಿಶೀಲಿಸಿದರು.

ಈ ವೇಳೆ ಸ್ಥಳೀಯರು, ಕೆರೆಗೆ ಕೊಳಚೆ ನೀರು ಹರಿಯುತ್ತಿರುವ ಬಗ್ಗೆ ಜುಲೈ 2ರಂದು ‘ಪ್ರಜಾವಾಣಿ’ಯ ಮುಖಪುಟದಲ್ಲಿ ಪ್ರಕಟವಾಗಿದ್ದ ವರದಿ ಕುರಿತು ಗಮನ ಸೆಳೆದು, ಒಳಚರಂಡಿ ನೀರು ಹರಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಾಲೆ ಮೂಲಕವೇ ಒಳಚರಂಡಿ ನೀರು ಕೆರೆಗೆ ಹರಿಯುತ್ತಿರುವುದನ್ನು ಕಂಡು ಹೌಹಾರಿದ ಶೆಟ್ಟರ್, ‘ನಾಲೆ ಮೂಲಕವೇ ಕೊಳಕು ನೀರು ಕೆರೆಗೆ ನೇರವಾಗಿ ಹರಿಯುವವರೆಗೆ ಏನು ಮಾಡುತ್ತಿದ್ರಿ?’ ಎಂದು ಸ್ಥಳದಲ್ಲಿದ್ದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಹಾಗೂ ಕೆಯುಡಿಎಫ್‌ಸಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಆಗ ಸ್ಥಳದಲ್ಲಿದ್ದ ಶ್ರೇಯಾ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಹಾಗೂ ರಾಘವೇಂದ್ರ ಕಾಲೊನಿ ನಿವಾಸಿಗಳು, ‘ಹಲವು ದಿನಗಳಿಂದ ಕೊಳಚೆ ನೀರು ಹರಿಯುತ್ತಿದೆ. ಈ ಬಗ್ಗೆ ಪಾಲಿಕೆಯವರಿಗೆ ದೂರು ಕೊಟ್ಟರೂ ಕ್ರಮ ಕೈಗೊಂಡಿಲ್ಲ. ಒಳ ಚರಂಡಿ ನೀರಿನಿಂದಾಗಿ ನಾಲೆ ಗಬ್ಬುನಾತ ಬೀರುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ’ ಎಂದು ಅಳಲು ತೋಡಿಕೊಂಡರು.

ಪಾಲಿಕೆಯವಾರ್ಡ್ 35ರ ಮಾಜಿ ಸದಸ್ಯ ಮಹೇಶ ಬುರ್ಲಿ, ‘ಕೆರೆಯ ಮೇಲ್ಭಾಗದ ರಾಮಲಿಂಗೇಶ್ವರನಗರದಲ್ಲಿರುವ ಒಳಚರಂಡಿಯ ಹಳೇ ಮಾರ್ಗದ ಪೈಪ್ ಒಡೆದಿರುವುದರಿಂದ, ಕೊಳಚೆ ನೀರು ನಾಲೆ ಸೇರುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದರು.

‘ಕೆಯುಡಿಎಫ್‌ಸಿ ವತಿಯಿಂದ ಸ್ಥಳದಲ್ಲಿ ಮಲೀನ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಾಣ ಕೆಲಸ ನಡೆಯುತ್ತಿದೆ. ಸದ್ಯ ಕೆರೆಗೆ ಹರಿಯುತ್ತಿರುವ ಒಳಚರಂಡಿ ನೀರನ್ನು ಘಟಕದಲ್ಲಿ ಶುದ್ಧೀಕರಿಸಿ, ಮುಂದೆ ಬೇರೆ ಉದ್ದೇಶಕ್ಕೆ ಬಳಸಲಾಗುವುದು’ ಎಂದು ಕೆಯುಡಿಎಫ್‌ಸಿ ಅಧಿಕಾರಿಯೊಬ್ಬರು ಸಮಜಾಯಿಷಿ ನೀಡಿದರು.

ಇದಕ್ಕೆ ಗರಂ ಆದ ಶೆಟ್ಟರ್, ‘ಕೆರೆಗೆ ಕೊಳಚೆ ನೀರು ಯಾವ ಕಾರಣಕ್ಕೂ ಹರಿಯಬಾರದು. ಪಾಲಿಕೆ, ಸ್ಮಾರ್ಟ್‌ ಸಿಟಿ ಹಾಗೂ ಕೆಯುಡಿಎಫ್‌ಸಿ ಅಧಿಕಾರಿಗಳೆಲ್ಲರೂ ಸೇರಿ ತುರ್ತಾಗಿ ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

₹6 ಲಕ್ಷ ಬೇಕು:

ಸ್ಮಾರ್ಟ್‌ ಸಿಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲೂ ತೋಳನಕೆರೆ ವಿಷಯ ಪ್ರತಿಧ್ವನಿಸಿತು. ‘ಕೆರೆಗೆ ಕೊಳಚೆ ನೀರು ಹರಿಯದಂತೆ ತಡೆಯಲು, ಒಡೆದಿರುವ ಒಳಚರಂಡಿಯ ಹಳೇ ಮಾರ್ಗದ ದುರಸ್ತಿಗೆ ₹6 ಲಕ್ಷ ಬೇಕಾಗುತ್ತದೆ’ ಎಂದು ಕೆಯುಡಿಎಫ್‌ಪಿ ಅಧಿಕಾರಿ ಸಭೆಯ ಗಮನಕ್ಕೆ ತಂದರು.

ಅದಕ್ಕೆ ಶೆಟ್ಟರ್, ‘ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ತೋಳನಕೆರೆ ಅಭಿವೃದ್ಧಿಪಡಿಸುತ್ತಿದ್ದೀರಿ. ಆದರೆ, ಕೆರೆಗೆ ಕೊಳಚೆ ನೀರು ಹರಿಯುದಂತೆ ತಡೆಯಲು ಏಕೆ ಮೀನಮೇಷ ಎಣಿಸುತ್ತೀರಿ. ಈ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕು’ ಎಂದರು. ಆಗ ಪಕ್ಕದಲ್ಲಿದ್ದ ಪಾಲಿಕೆ ಆಯುಕ್ತ ಪ್ರಶಾಂತ್‌ಕುಮಾರ್ ಮಿಶ್ರಾ, ‘ಕೆಯುಡಿಎಫ್‌ಸಿ, ಸ್ಮಾರ್ಟ್‌ ಸಿಟಿ ಹಾಗೂ ಪಾಲಿಕೆಯವರು ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುತ್ತೇವೆ’ ಎಂದರು.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಸ್ಥಳೀಯ ಮುಖಂಡರಾದ ಶೆಟ್ಟಪ್ಪನವರ ಹಾಗೂ ಸಂತೋಷ ಹಿರೇಕೆರೂರ ಇದ್ದರು.

ಉಣಕಲ್ ಕೆರೆಗೆ ಎಂಜಿನಿಯರ್ ಭೇಟಿ

ಬೈರಿದೇವರಕೊಪ್ಪ ಭಾಗದ ಒಳಚರಂಡಿ ನೀರು ಉಣಕಲ್ ಕೆರೆ ಸೇರುತ್ತಿರುವ ಸ್ಥಳಕ್ಕೆ ಪಾಲಿಕೆಯ ಘನತ್ಯಾಜ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆರ್. ವಿಜಯಕುಮಾರ್ ಭೇಟಿ ನೀಡಿದರು.

ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಕೊಳಚೆ ನೀರು ಸಮೀಪದ ಒಳಚರಂಡಿ ಸೇರುವಂತೆ ಸಂಪರ್ಕ ಕಲ್ಪಿಸುವಂತೆ ವಲಯ 4ರ ಸಹಾಯಕ ಆಯುಕ್ತರು ಹಾಗೂ ಕಿರಿಯ ಎಂಜಿನಿಯರ್‌ಗಳಿಗೆ ಸೂಚಿಸಿದ್ದೇನೆ. ತಾತ್ಕಾಲಿಕವಾಗಿ ಕೆರೆಗೆ ನೀರು ಹರಿಯದಂತೆ ತಡೆಯಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT