ರಾಜಾಕಾಲುವೆ ಒತ್ತುವರಿ ತೆರವುಗೊಳಿಸಿದ ಪಾಲಿಕೆ ಅಧಿಕಾರಿಗಳು

7

ರಾಜಾಕಾಲುವೆ ಒತ್ತುವರಿ ತೆರವುಗೊಳಿಸಿದ ಪಾಲಿಕೆ ಅಧಿಕಾರಿಗಳು

Published:
Updated:
Deccan Herald

ಧಾರವಾಡ: ರಾಜಾಕಾಲುವೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಇದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್ ಆದೇಶದ ಅನ್ವಯ, ಪಾಲಿಕೆ ಅಧಿಕಾರಿಗಳು ಇಲ್ಲಿನ ಸಪ್ತಾಪುರ ವ್ಯಾಪ್ತಿಯ ಸಿ.ಬಿ.ನಗರದಲ್ಲಿ ಸೋಮವಾರ ತೆರವುಗೊಳಿಸಿದರು.

ಪರಿಸರ ಭವನ ಪಕ್ಕದಲ್ಲಿ ಹಾದುಹೋಗಿರುವ ರಾಜಾಕಾಲುವೆಯನ್ನು ಕಿರಣ ಕಂಡದಮಠ ಎಂಬುವವರು ಸುಮಾರು 25 ಮೀಟರ್ ಉದ್ದದ ನಾಲೆಯನ್ನು ಬೃಹತ್ ಗಾತ್ರದ ಪೈಪ್‌ಗಳನ್ನು ಅಳವಡಿಸಿ ಅದರ ಮೇಲೆ ಮಣ್ಣು ಹಾಕಿ ಮುಚ್ಚಿದ್ದರು. ಜತೆಗೆ ಇದಕ್ಕೆ ಕಂಪೌಂಡ್ ಕೂಡಾ ಹಾಕಿಕೊಂಡಿದ್ದರು. ಇದರಿಂದ ಸುತ್ತಮುತ್ತಲಿನ ನೀರು ಸರಿಯಾಗಿ ಹರಿದು ಮುಂದೆ ಹೋಗುತ್ತಿರಲಿಲ್ಲ. ಮಳೆಗಾಲದಲ್ಲಿ ಸಿ.ಬಿ.ನಗರದ ಮನೆಗಳಿಗೆ ನೀರು ನುಗ್ಗುತ್ತಿತ್ತು. ಇದನ್ನು ತೆರವುಗೊಳಿಸುವಂತೆ ಅಲ್ಲಿನ ನಿವಾಸಿಗಳ ಒತ್ತಡವಿತ್ತು. 

ಹತ್ತು ವರ್ಷಗಳಿಂದ ಇಲ್ಲಿನ ನಿವಾಸಿಗಳು ಇದಕ್ಕಾಗಿ ಹೋರಾಟ ನಡೆಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಈ ವಿವಾದ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿತ್ತು. ಇದರ ತೆರವಿಗೆ ಇದ್ದ ತಡೆಯಾಜ್ಞೆಯನ್ನು ಕಳೆದ 9ರಂದು ಹೈಕೋರ್ಟ್ ತೆರವುಗೊಳಿಸಿತು. ಇದರ ಬೆನ್ನಲ್ಲೇ ಪಾಲಿಕೆ ಸದಸ್ಯ ಶಿವು ಹಿರೇಮಠ, ವಲಯ–1ರ ಸಹಾಯಕ ಆಯುಕ್ತ ಕೆ.ಎನ್.ಹಂಚಿನಮನಿ, ಎಂಜಿನಿಯರ್‌ಗಳಾದ ಮುಕುಂದ ಜೋಶಿ, ಗದ್ಕರ್‌ ಅವರು ಜೆಸಿಬಿ ಸಹಾಯದಿಂದ ರಾಜಾಕಾಲುವೆ ಒತ್ತುವರಿ ತೆರವುಗೊಳಿಸಿದರು.

ಈ ಕುರಿತಂತೆ ಮಾತನಾಡಿದ ಶಿವು ಹಿರೇಮಠ, ‘ಸುತ್ತಮುತ್ತಲಿನ ನಾಲ್ಕು ಕಿಲೋಮೀಟರ್ ವ್ಯಾಪ್ತಿಯ ನೀರು ಇಲ್ಲಿಗೆ ಬಂದು, ಇಲ್ಲಿಂದ ಮುಂದೆ ರಾಜಾಕಾಲುವೆಯಲ್ಲಿ ಹರಿದುಹೋಗುತ್ತದೆ. ಆದರೆ ಸಿಮೆಂಟ್ ಪೈಪ್ ಅಳವಡಿಸಿ ಇದನ್ನು ಮುಚ್ಚಲಾಗಿತ್ತು. ಈ ಕುರಿತು ನಿವೇಶನ ಮಾಲೀಕರಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಇದೇ ಸಂದರ್ಭದಲ್ಲಿ ನಿವಾಸಿಗಳ ಪರವಾಗಿಯೇ ಹೈಕೋರ್ಟ್ ಆದೇಶ ಮಾಡಿರುವುದರಿಂದ ಕಾಲುವೆ ತೆರವು ಮಾಡುತ್ತಿದ್ದೇವೆ. ಹೀಗೆ ರಾಜಾಕಾಲುವೆ ಒತ್ತುವರಿ ನಗರದ ಹಲವೆಡೆ ಇದೆ. ಅವುಗಳ ತೆರವುಕಾರ್ಯವೂ ನಡೆಯಬೇಕಿದೆ’ ಎಂದರು.

ಸಿ.ಬಿ.ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್‌.ಎಚ್.ಪಾಟೀಲ ಪ್ರತಿಕ್ರಿಯಿಸಿ, ‘2017ರ ಮೇ ತಿಂಗಳಿನಲ್ಲಿ ಸುರಿದ ಮಳೆಯಲ್ಲಿ, ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ ಈ ಭಾಗದ ಮನೆಗಳಿಗೆ ನುಗ್ಗಿತ್ತು. ಮನೆಯಲ್ಲಿ ಇದ್ದ ವಸ್ತುಗಳು ಹಾಳಾಗಿದ್ದವು. ಹಾವು, ಚೇಳು ಸೇರಿದಂತೆ ಹಲವು ಕ್ರಿಮಿ, ಕೀಟ, ಸರಿಸೃಪಗಳು ಮನೆಗೆ ನುಗ್ಗಿದ್ದವು. ಇಲ್ಲಿನ ಜನರ ತೀವ್ರ ತೊಂದರೆ ಅನುಭವಿಸಿದ್ದರು. ಆದರೆ ಈಗ ಹೈಕೋರ್ಟ್ ನಿರ್ಧಾರದಿಂದ ಈ ಭಾಗದ ಜನರ ಬವಣೆ ನೀಗಿದೆ. ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿದ್ದರಿಂದ ಆದೇಶವಾದ ಕೆಲವೇ ದಿನಗಳಲ್ಲಿ ಇದರ ತೆರವು ಕಾರ್ಯ ನಡೆಯುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಒತ್ತುವರಿಯಾಗಿದ್ದ ಜಾಗದಲ್ಲಿ ಹತ್ತು ಅಡಿಯ ಸಿಮೆಂಟ್ ಪೈಪ್‌ಗಳನ್ನು ಅಳವಡಿಸಲಾಗಿತ್ತು. ರಸ್ತೆ ಕಡೆಯಿಂದ ನೀರನ್ನು ಬೇರೆಡೆ ತಿರುಗಿಸಲು ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿತ್ತು. ಬೆಳಿಗ್ಗೆಯಿಂದ ತೆರವು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಅವುಗಳನ್ನು ತೆರವುಗೊಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !