ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ

ಕೈಗಾರಿಕೋದ್ಯಮಿಗಳ ಸಮಾವೇಶದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್
Last Updated 20 ಮಾರ್ಚ್ 2023, 5:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನವ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು, ಕರ್ನಾಟಕದಲ್ಲಿ ಬಿಜೆಪಿಯನ್ನು ಪೂರ್ಣ ಬಹುಮತದೊಂದಿಗೆ ಗೆಲ್ಲಿಸಬೇಕು’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಹೇಳಿದರು.

ನಗರದ ಹೆಬಸೂರ ಭವನದಲ್ಲಿ ಭಾನುವಾರ ಬಿಜೆಪಿ ಹಮ್ಮಿಕೊಂಡಿದ್ದ ಪ್ರಣಾಳಿಕೆ ಸಲಹೆ ಸಂಗ್ರಹಕ್ಕೆ ಸಂಬಂಧಿಸಿದ ಕೈಗಾರಿಕೋದ್ಯಮಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಹಣ ಫಲಾನುಭವಿಗಳನ್ನು ಸರಿಯಾಗಿ ತಲುಪುತ್ತಿಲ್ಲ ಎಂದು ಹಿಂದಿನ ಪ್ರಧಾನಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದರು. ಮೋದಿ ಅವರು, ಅಸಹಾಯಕತೆ ಬದಲು ಭ್ರಷ್ಟಾಚಾರ ತಡೆಯುವ ಬದ್ಧತೆ ತೋರಿದರು’ ಎಂದರು.

‘ಜನಧನ, ಯುಪಿಐ, ಆಧಾರ್, ಸೇವೆಗಳ ಆನ್‌ಲೈನ್‌ನಂತಹ ಕ್ರಮಗಳಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರು. ಸೌಲಭ್ಯಗಳು ನೇರವಾಗಿ ಜನರಿಗೆ ತಲುಪುವಂತೆ ಮಾಡಿದರು. ಕೆಲವೇ ವರ್ಷಗಳಲ್ಲಿ ದೇಶ ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯಾಗಲಿದೆ. ಕರ್ನಾಟಕದ ಆರ್ಥಿಕತೆಯನ್ನು ಒಂದು ಟ್ರಿಲಿಯನ್‌ಗೆ ಕೊಂಡೊಯ್ಯುವ ಗುರಿಯನ್ನು ಬಿಜೆಪಿ ಹೊಂದಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಉದ್ಯಮಿಯಾಗಿದ್ದ ನನಗೆ ಉದ್ಯಮಿಗಳ ಸವಾಲು ಹಾಗೂ ಸಮಸ್ಯೆಗಳ ಅರಿವಿದೆ. ಉದ್ಯಮಕ್ಕೆ ಅನುಮತಿ ಪಡೆಯಲು ನಾನು 90 ಸಲ ಮಹಾರಾಷ್ಟ್ರಕ್ಕೆ ಅಲೆದಾಡಿದ್ದೆ. ಇದೀಗ, ಮೋದಿ ಸರ್ಕಾರ ಸಿಂಗಲ್ ವಿಂಡೊ ವ್ಯವಸ್ಥೆ ಹಾಗೂ ಆನ್‌ಲೈನ್‌ಲ್ಲೇ ಅನುಮತಿ ನೀಡುವ ವ್ಯವಸ್ಥೆ ಜಾರಿಗೆ ತಂದು, ಎಲ್ಲಾ ಪ್ರಕ್ರಿಯೆಗಳನ್ನು ಉದ್ಯಮಿಸ್ನೇಹಿಯಾಗಿಸಿದೆ’ ಎಂದರು.

‘ಸಂಗೀತ, ಶಿಕ್ಷಣದ ತವರಾದ ಹುಬ್ಬಳ್ಳಿ- ಧಾರವಾಡವು ಸ್ಟಾರ್ಟ್‌ಅಪ್, ತಯಾರಿಕೆ ವಲಯ, ಎಂಎಸ್ಎಂಇಯಲ್ಲಿ ದಾಪುಗಾಲಿಡುತ್ತಿದೆ. ಬಿಜೆಪಿ ಸರ್ಕಾರ ಒದಗಿಸಿರುವ ಮೂಲಸೌಕರ್ಯ ಇದಕ್ಕೆ ಕಾರಣವಾಗಿದೆ’ ಎಂದು ಹೇಳಿದರು.

ಜವಳಿ ಸಚಿವ ಶಂಕರಪಾಟೀಲ‌ ಮುನೇನಕೊಪ್ಪ ಮಾತನಾಡಿ, ‘ಧಾರವಾಡ ಜಿಲ್ಲೆಗೆ ನಾಲ್ಕು ಸಕ್ಕರೆ ಕಾರ್ಖಾನೆ, ಜವಳಿ ಪಾರ್ಕ್ ಮಂಜೂರಾಗಿದ್ದು ಇಲ್ಲಿನ ಜನರಿಗೆ ಹೆಚ್ಚಿನ ಉದ್ಯೋಗ ಸಿಗಲಿದೆ. ಡಬಲ್ ಎಂಜಿನ್ ಸರ್ಕಾರದಿಂದ ಇದು ಸಾಧ್ಯವಾಗಿದೆ’ ಎಂದರು.

ನಂತರ ನಡೆದ ಸಂವಾದದಲ್ಲಿ ಉದ್ಯಮಿಗಳು ತಾವು ಎದುರಿಸುತ್ತಿರುವ ಸಮಸ್ಯೆ ಹಾಗೂ ಉದ್ಯಮಿಸ್ನೇಹಿ ವ್ಯವಸ್ಥೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಚಿವರ ಗಮನ ಸೆಳೆದರು.

ಪ್ರಕೋಷ್ಠಗಳ ರಾಜ್ಯ ಸಂಚಾಲಕ ಜಯತೀರ್ಥ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಯರ್ ಈರೇಶ ಅಂಚಟಗೇರಿ, ಬಿಜೆಪಿ‌ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಮುಖಂಡರಾದ ಮಹೇಶ ನಾಲವಾಡ, ಪ್ರದೀಪ ಪೈ, ರಂಗಾ ಬದ್ದಿ, ಕಿರಣ ಹೆಬಸೂರ, ರವಿ ನಾಯಕ ಇದ್ದರು.

ರೈಲು ನಿಲ್ದಾಣಕ್ಕೆ ಭೇಟಿ

ಹುಬ್ಬಳ್ಳಿ: ನಗರದ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಪಿಯೂಷ್ ಗೋಯಲ್, ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ ಪರಿಶೀಲಿಸಿದರು. ನಿಲ್ದಾಣದ ಸೌಂದರ್ಯೀಕರಣ ಹಾಗೂ ಸ್ವಚ್ಛತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್, ಹುಬ್ಬಳ್ಳಿ ವಿಭಾಗದ ಹೆಚ್ಚುವರಿ ವ್ಯವಸ್ಥಾಪಕ ಎಸ್‌.ಕೆ. ವರ್ಮಾ, ಸಿಪಿಆರ್‌ಒ ಅನೀಶ್ ಹೆಗಡೆ, ಆಸಿಫ್ ಹಫೀಜ್, ಹರಿತಾ ಹಾಗೂ ಪ್ರಾಣೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT