ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ–ಮಗುವಿನ ಆರೋಗ್ಯಕ್ಕೆ ಒತ್ತುಕೊಡಿ

ನವಜಾತ ಶಿಶುಗಳ ಚಿಕಿತ್ಸೆಗೆ ನೆರವಾಗುವ ಯಂತ್ರಗಳ ವಿತರಣೆ: ಡಿ.ಸಿ. ಹೇಳಿಕೆ
Last Updated 28 ಜೂನ್ 2019, 12:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯಲು ಉತ್ತರ ಕರ್ನಾಟಕದ ಗ್ರಾಮೀಣ ಭಾಗದಿಂದ ಸಾಕಷ್ಟು ಜನ ಬರುತ್ತಾರೆ. ಅವರಿಗೆ ಹೆಚ್ಚು ತಿಳಿವಳಿಕೆ ಇರುವುದಿಲ್ಲ. ಆದ್ದರಿಂದ ವೈದ್ಯರು ತಾಯಿ–ಮಗುವಿನ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

ಹುಬ್ಬಳ್ಳಿ ರೋಟರಿ ಕ್ಲಬ್‌ ಶುಕ್ರವಾರ ಕಿಮ್ಸ್‌ಗೆ ಕೊಡುಗೆಯಾಗಿ ನೀಡಿದ ನವಜಾತ ಶಿಶುಗಳ ಪರೀಕ್ಷಾ ಯಂತ್ರಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ‘ರೋಗಿಗಳು ವೈದ್ಯರ ಮೇಲೆ ಸಾಕಷ್ಟು ನಂಬಿಕೆ ಇಟ್ಟು ಆಸ್ಪತ್ರೆಗೆ ಬಂದಿರುತ್ತಾರೆ. ಅವರ ನಂಬಿಕೆಯನ್ನು ವೈದ್ಯರು ಉಳಿಸಿಕೊಳ್ಳಬೇಕು‘ ಎಂದರು.

‘ನವಜಾತ ಶಿಶುವಿನಲ್ಲಿ ನ್ಯೂನ್ಯತೆಯನ್ನು ಕೂಡಲೇ ಪತ್ತೆ ಹಚ್ಚಲು ರೋಟರಿ ಕ್ಲಬ್‌ ನೀಡಿರುವ ಯಂತ್ರಗಳು ನೆರವಾಗುತ್ತವೆ. ಕ್ಲಬ್‌ನ ಸಮಾಜಮುಖಿ ಕಾರ್ಯ ಶ್ಲಾಘನೀಯ. ಸಮಾಜದ ಸಹಭಾಗಿತ್ವದಲ್ಲಿ ಈ ರೀತಿಯ ಕೆಲಸಗಳಾದರೆ ಎಲ್ಲರಿಗೂ ಅನುಕೂಲವಾಗುತ್ತದೆ’ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ದೀಪಾ ಚೋಳನ್‌ ಕಿಮ್ಸ್‌ನ ಕಿವಿ, ಮೂಗು ಮತ್ತು ಗಂಟಲು ವಿಭಾಗದಲ್ಲಿ ಅಲ್ರ್ಟಾ ಸೋನೊಗ್ರಾಫಿಕ್‌, ಸೈರಿಂಗ್‌ ಪಂಪ್‌ಗಳು, ಪಲ್ಸ್‌ ಒಕ್ಸಿಮೀಟರ್ಸ್‌ ಮತ್ತು ದ ಒಟೊ ಅಕೊಸ್ಟಿಕ್‌ ಎಮಿಷನ್‌ ಯಂತ್ರಗಳನ್ನು ವೀಕ್ಷಿಸಿದರು.

ರೋಟರಿ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಎಂ.ವಿ. ಕರಮುರಿ ಪ್ರಾಸ್ತಾವಿಕವಾಗಿ ಮಾತನಾಡಿ ‘ಒಟ್ಟು ₹ 30 ಲಕ್ಷ ವೆಚ್ಚದ ಯಂತ್ರಗಳನ್ನು ನೀಡಲಾಗಿದೆ. ಸಮಾಜಮುಖಿ ಕಾರ್ಯಗಳನ್ನು ಮಾಡುವಲ್ಲಿ ರೋಟರಿ ಕ್ಲಬ್‌ ಯಾವಾಗಲೂ ಮುಂಚೂಣಿಯಲ್ಲಿದೆ’ ಎಂದರು.

ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಗದಗ ‘ಹುಟ್ಟಿದ ಮುಗುವಿನ ಆರೋಗ್ಯ ಹೇಗಿದೆ. ಕಿವಿ, ಕಣ್ಣು, ಕಾಲು, ಕೈ ಕೆಲಸ ಮಾಡುತ್ತವೆಯೋ, ಇಲ್ಲವೋ ಎನ್ನುವುದನ್ನು ಜನ್ಮತೆಳೆದ ದಿನದಂದೇ ಈ ಯಂತ್ರಗಳಿಂದ ಪರೀಕ್ಷಿಸಲು ಸಾಧ್ಯವಿದೆ. ಮಕ್ಕಳ ವಿಭಾಗಕ್ಕೆ ಪ್ರತ್ಯೇಕವಾಗಿ ಯಂತ್ರಗಳನ್ನು ಕೊಟ್ಟಿದ್ದು ಹೆಚ್ಚು ಅನುಕೂಲಕಾರಿ’ ಎಂದರು.

ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರದಾನಿ, ರೋಟರಿ ಕ್ಲಬ್‌ ಅಧ್ಯಕ್ಷ ಅಬ್ದುಲ್‌ ಸಾದಿಕ್‌, ಕಾರ್ಯದರ್ಶಿ ಸಿ.ಎ. ಸುರೇಂದ್ರ ಪೊರ್ವಾಲ್‌, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ ಕೆ. ವಾರಿ, ಡಾ. ಜಿ.ಬಿ. ಸತ್ತೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT