ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸ್ತಾಕ್ಷರಕ್ಕೆ ಮುಗಿಬಿದ್ದ ವಿದ್ಯಾರ್ಥಿಗಳು

ಆಟೊ ಗ್ರಾಫ್‌ ನೀಡಿ ಮಕ್ಕಳ ಖುಷಿ ಹೆಚ್ಚಿಸಿದ ಸುನೀಲ್‌ ಜೋಶಿ
Last Updated 18 ಡಿಸೆಂಬರ್ 2019, 15:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ನಾಟಕ ಮತ್ತು ಉತ್ತರ ಪ್ರದೇಶ ತಂಡಗಳ ನಡುವೆ ಇಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್‌ ಟೂರ್ನಿಯ ಬುಧವಾರದ ದಿನದಾಟ ವಿವಿಧ ಶಾಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳ ಹಸ್ತಾಕ್ಷರ ಸಂಭ್ರಮಕ್ಕೆ ಕಾರಣವಾಯಿತು.

ಮೊದಲ ದಿನ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸಿದ್ದ ಚಿನ್ಮಯ ಶಾಲೆಯ ವಿದ್ಯಾರ್ಥಿಗಳು ಎರಡನೇ ದಿನವೂ ಸಾಕಷ್ಟು ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬಂದಿದ್ದರು. ಉತ್ತರ ಪ್ರದೇಶ ತಂಡದ ಕೋಚ್‌ ಗದುಗಿನ ಸುನೀಲ್ ಜೋಶಿ ಮತ್ತು ಅವರ ತಂಡದ ಆಟಗಾರರ ಹಸ್ತಾಕ್ಷರ ಪಡೆಯಲು ವಿದ್ಯಾರ್ಥಿಗಳು ಮುಗಿಬಿದ್ದರು.

ಇದಕ್ಕಾಗಿ ಶಾಲೆಯಿಂದಲೇ ನೋಟ್‌ಬುಕ್‌ ತಂದಿದ್ದ ಮಕ್ಕಳು ಸುನೀಲ್ ಜೋಶಿ ಮತ್ತು ಕರ್ನಾಟಕದ ಆಟಗಾರರ ಹಸ್ತಾಕ್ಷರ ಪಡೆದರು. ಜೋಶಿ ಕೂಡ ತಾಳ್ಮೆಯಿಂದ ಮಕ್ಕಳಿಗೆ ಆಟೊ ಗ್ರಾಫ್‌ ನೀಡಿ, ಪ್ರೀತಿಯಿಂದ ಮಾತನಾಡಿಸಿ ಅವರ ಸಂಭ್ರಮ ಹೆಚ್ಚಿಸಿದರು.

ವಿದ್ಯಾರ್ಥಿಗಳು ಆಟೊ ಗ್ರಾಫ್‌ ಪಡೆಯುತ್ತಿದ್ದಂತೆ, ಇತರ ಕ್ರಿಕೆಟ್‌ ಅಭಿಮಾನಿಗಳು ಕೂಡ ಮುಗಿಬಿದ್ದರು. ಗ್ಯಾಲರಿಯ ಸಮೀಪದಲ್ಲಿಯೇ ಉತ್ತರ ಪ್ರದೇಶ ತಂಡದ ಆಟಗಾರರ ಡ್ರೆಸ್ಸಿಂಗ್‌ ಕೊಠಡಿಯಿದ್ದು, ಅಲ್ಲಿಯೂ ‘ಅಂಕಲ್‌, ಅಂಕಲ್‌.. ಆಟೊಗ್ರಾಫ್‌’ ಎಂದು ವಿದ್ಯಾರ್ಥಿಗಳು ತಮ್ಮಲ್ಲಿದ್ದ ನೋಟ್‌ಬುಕ್‌ ತೋರಿಸುತ್ತಿದ್ದ ಚಿತ್ರಣ ಕಂಡುಬಂತು. ಇನ್ನೂ ಕೆಲ ವಿದ್ಯಾರ್ಥಿಗಳು ಆಟೊ ಗ್ರಾಫ್‌ ಬರೆಯಿಸಿಕೊಳ್ಳಲು ಬ್ಯಾಟ್‌ ಕೂಡ ತಂದಿದ್ದರು. ಚಹಾ ಹಾಗೂ ಭೋಜನ ವಿರಾಮದ ವೇಳೆ ಆಟಗಾರರು ಡ್ರೆಸ್ಸಿಂಗ್ ಕೊಠಡಿಗೆ ಹೋಗುತ್ತಿದ್ದಾಗಲೂ ಆಟೊಗ್ರಾಫ್‌ಗೆ ನಾ ಮುಂದು, ತಾ ಮುಂದು ಎಂದು ಜಿದ್ದಿಗೆ ಬೀಳುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು.

ಈ ಪಂದ್ಯ ಸ್ಟಾರ್‌ ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರ ಪ್ರಸಾರವಾಗುತ್ತಿರುವುದರಿಂದ ವಾಹಿನಿಯ ಕ್ಯಾಮೆರಾ ವಿದ್ಯಾರ್ಥಿಗಳತ್ತ ಹೊರಳಿದಾಗ ಮಕ್ಕಳ ಸಂಭ್ರಮ ಇಮ್ಮಡಿಯಾಗುತ್ತಿತ್ತು. ಆಗ ಅವರೆಲ್ಲರೂ ಕೈ ಬೀಸಿ ಖುಷಿ ವ್ಯಕ್ತಪಡಿಸುತ್ತಿದ್ದರು. ಶಾಲಾ ಮಕ್ಕಳು ಕುಳಿತುಕೊಳ್ಳುವ ಸಲುವಾಗಿ ಸಂಘಟಕರು ಖುರ್ಚಿ ವ್ಯವಸ್ಥೆ ಮಾಡಿದ್ದರು.

ಎಲ್ಲರಿಗೂ ಜೈ: ಕರ್ನಾಟಕ ತಂಡದ ಬ್ಯಾಟ್ಸ್‌ಮನ್‌ಗಳ ಬೌಂಡರಿಗಳನ್ನು ಹೊಡೆದಾಗ, ಉತ್ತರ ಪ್ರದೇಶದ ಬೌಲರ್‌ಗಳು ವಿಕೆಟ್‌ಗಳನ್ನು ಉರುಳಿಸಿದಾಗ ಎರಡೂ ಸಂದರ್ಭದಲ್ಲಿಯೂ ಮಕ್ಕಳು ಜೈಕಾರ ಹಾಕುತ್ತಿದ್ದು ವಿಶೇಷವಾಗಿತ್ತು. ಯಾವ ತಂಡದ ಆಟಗಾರರೇ ಇದ್ದರೂ, ಅವರಿಗೆ ಚಪ್ಪಾಳೆ ಹೊಡೆದು ಹುರಿದುಂಬಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT