ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹ ಶಾಸಕರ‍್ಯಾರೂ ಬಿಜೆಪಿ ಸೇರಿಲ್ಲ; ತೀರ್ಪು ಬಳಿಕ ‘ಟಿಕೆಟ್‌’ ತೀರ್ಮಾನ: ಅಶೋಕ

ಮುಖ್ಯಮಂತ್ರಿ ಭೇಟಿ ಮಾಡಿದ ಬಿ.ಸಿ. ಪಾಟೀಲ
Last Updated 26 ಅಕ್ಟೋಬರ್ 2019, 14:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯಾರಿಂದಾಗಿ ಅಧಿಕಾರಕ್ಕೆ ಬಂದಿದೆ ಎಂದು ಎಲ್ಲರಿಗೂ ಗೊತ್ತಿದೆ. ಸದ್ಯ ಅನರ್ಹ ಶಾಸಕರ‍್ಯಾರೂ ಬಿಜೆಪಿ ಸೇರಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಅವರಿಗೆ ಟಿಕೆಟ್ ನೀಡಬೇಕೇ, ಬೇಡವೇ ಎಂದು ವರಿಷ್ಠರು ತೀರ್ಮಾನಿಸಲಿದ್ದಾರೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದರು.

ಉಪ‍ ಚುನಾವಣೆ ನಿಮಿತ್ತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಶನಿವಾರ ನಡೆದ ಪಕ್ಷದ ಪ್ರಮುಖರ ಸಭೆ ಬಳಿಕ ಮಾತನಾಡಿದ ಅವರು, ‘16 ಕ್ಷೇತ್ರಗಳ ಉಪ ಚುನಾವಣೆ ಟಿಕೆಟ್‌ಗಾಗಿ 100ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಟಿಕೆಟ್‌ಗೆ ಸಂಬಂಧಿಸಿದಂತೆ ಯಾರು ಏನೇ ಹೇಳಿದರೂ, ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಪಕ್ಷದ ಅಧ್ಯಕ್ಷರು ಹೇಳುವುದೇ ಅಂತಿಮ. ಅವರನ್ನು ಗೆಲ್ಲಿಸುವುದು ಎಲ್ಲರ ಕರ್ತವ್ಯ’ ಎಂದರು.

ಎಲ್ಲರಿಗೂ ಪರಿಹಾರ:‘ನೆರೆಗೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ್ದ ಮನೆಗಳು ಕುಸಿದಿದ್ದರೂ ₹5 ಲಕ್ಷದವರೆಗೆ ಪರಿಹಾರ ಜತೆಗೆ, ಸುರಕ್ಷಿತ ಸ್ಥಳದಲ್ಲಿ ಉಚಿತವಾಗಿ ನಿವೇಶನ ನೀಡಲಾಗುವುದು. ಮಳೆ ನಿಂತು ವಾರದ ಬಳಿಕ ಮನೆ ಕುಸಿದರೂ, ಅದಕ್ಕೂ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಸಂತ್ರಸ್ತರಿಗೆ ಪರಿಹಾರ ನೀಡಲು ಹಣದ ಕೊರತೆ ಇಲ್ಲ. ಕಳೆದ ವಾರ ಬೆಳಗಾವಿ ಜಿಲ್ಲೆಯೊಂದಕ್ಕೆ ₹500 ಕೋಟಿ ಬಿಡುಗಡೆ ಮಾಡಲಾಗಿದೆ. ನೆರೆಪೀಡಿತ ಪ್ರದೇಶಗಳಿಗೆ ನಾನು ಭೇಟಿ ನೀಡುವ ಜತೆಗೆ, ಹಾನಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಲು ತಯಾರಿ ನಡೆಸುತ್ತಿದ್ದೇನೆ’ ಎಂದರು.

ಮುಖ್ಯಮಂತ್ರಿ ಭೇಟಿ ಮಾಡಿದ ಬಿ.ಸಿ. ಪಾಟೀಲ
ಹಿರೇಕೆರೂರು ಕ್ಷೇತ್ರದ ಅನರ್ಹ ಶಾಸಕ ಬಿ.ಸಿ. ಪಾಟೀಲ ಶನಿವಾರ ಸಂಜೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಪರವಾಗಿ ತೀರ್ಪು ಬರಲಿದೆ ಎಂಬ ವಿಶ್ವಾಸವಿದ್ದು, ನ. 11ರ ನಂತರ ರಣಕಹಳೆ ಮೊಳಗಲಿದೆ’ ಎಂದರು.

ನ. 7ಕ್ಕೆ ಹಿರೇಕೆರೂರಿಗೆ ಸಿ.ಎಂ:‘ಬಿ.ಎಸ್. ಯಡಿಯೂರಪ್ಪ ಅವರು ನ. 7ಕ್ಕೆ ಹಿರೇಕೆರೂರಿಗೆ ಭೇಟಿ ನೀಡಿ, ₹100 ಕೋಟಿಯಷ್ಟು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 2ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ, ಈ ಭಾಗದ ಸಚಿವರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT