ಮಂಗಳವಾರ, ನವೆಂಬರ್ 19, 2019
28 °C
ಪಾಲಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ: ಬಸವರಾಜ ಹೊರಟ್ಟಿ ಹೇಳಿಕೆ

ಕನ್ನಡದ ಉಳಿವು; ಆದೇಶಕ್ಕಷ್ಟೇ ಸೀಮಿತವಾಗದಿರಲಿ

Published:
Updated:
Prajavani

ಹುಬ್ಬಳ್ಳಿ: ಕನ್ನಡ ಉಳಿಸಬೇಕು ಎಂದು ಸರ್ಕಾರ ಅಧಿಸೂಚನೆ ಹೊರಡಿಸುತ್ತವೆ. ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಹೀಗಾದರೆ ಕನ್ನಡದ ಉಳಿವು ಹೇಗೆ ಸಾಧ್ಯ ಎಂದು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಪ್ರಶ್ನಿಸಿದರು.

ಮಹಾನಗರ ಪಾಲಿಕೆ ವತಿಯಿಂದ ಸಿದ್ಧಾರೂಢ ಮಠದ ಆವರಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಸರ್ಕಾರ ಹೊರಡಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಬೇರೆ ರಾಜ್ಯಗಳಲ್ಲಿ ಆಯಾ ಭಾಷೆಗೆ ಸಿಕ್ಕಷ್ಟು ಪ್ರಾಮುಖ್ಯತೆ ಕರ್ನಾಟಕದಲ್ಲಿ ಕನ್ನಡಕ್ಕೆ ಸಿಗುತ್ತಿಲ್ಲ. ರಾಜ್ಯದಲ್ಲಿಯೇ ಕನ್ನಡ ಅವಸಾನವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮಾತ್ರ ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು. ಇಂಗ್ಲಿಷ್‌ ಕಲಿಕೆಗೆ ನನ್ನ ವಿರೋಧವಿಲ್ಲ, ಆದರೆ ಮಾತೃಭಾಷೆ ಕಲಿಕೆಗೆ ಆದ್ಯತೆ ನೀಡಬೇಕು’ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ ‘ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಲು ಇಂಗ್ಲಿಷ್‌ ಬೇಕು. ಆದರೆ, ಕನ್ನಡಕ್ಕೆ ಆದ್ಯತೆ ನೀಡಬೇಕು. ರಾಜ್ಯದ ಪ್ರತಿ ಶಾಲೆ ಹಾಗೂ ಮನೆಗಳಲ್ಲಿ ಕನ್ನಡ ಹಬ್ಬ ಆಚರಿಸಬೇಕು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್ ‘ಕನ್ನಡ ಭಾಷೆ ಮತ್ತು ಜನ ಹರಿದು ಹಂಚಿ ಹೋಗುತ್ತಿದ್ದಾರೆ. ಆದ್ದರಿಂದ ಕನ್ನಡದ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸವಾಗಬೇಕು. ಇನ್ನು 15 ದಿನಗಳಲ್ಲಿ ಅವಳಿ ನಗರದಲ್ಲಿ ಕನ್ನಡದಲ್ಲಿ ನಾಮಫಲಕಗಳನ್ನು ಬಳಸುವಂತೆ ಕಡ್ಡಾಯ ನಿಯಮ ಅನುಷ್ಠಾನಕ್ಕೆ ತರಲಾಗುವುದು’ ಎಂದರು.

ವಿವಿಧ ಸಂಘಟನೆಗಳ ಮುಖಂಡರಾದ ಅಮೃತ ಇಜಾರಿ, ಪಿತಾಂಬ್ರಪ್ಪ ಬಿಳಾರ, ಗುರುನಾಥ ಉಳ್ಳಿಕಾಶಿ, ಶೇಖರಯ್ಯ ಮಠಪತಿ, ಬಿರಾದಾರ, ಪಾಲಿಕೆ ಮಾಜಿ ಸದಸ್ಯ ರಾಮಣ್ಣ ಬಡಿಗೇರ, ‍ಪಾಲಿಕೆಯ ಹೆಚ್ಚುವರಿ ಆಯುಕ್ತ ಅಜಿತ್‌ ದೇಸಾಯಿ, ವಲಯ ಅಧಿಕಾರಿ ಎಸ್.ಸಿ. ಬೇವೂರ ಇದ್ದರು.

ಪ್ರತಿಕ್ರಿಯಿಸಿ (+)