ಭಾನುವಾರ, ಏಪ್ರಿಲ್ 2, 2023
33 °C
ನೀರು ಸರಬರಾಜು ನೌಕರರ ಅಮರಣ ಸತ್ಯಾಗ್ರಹ ಆರಂಭ

ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುವ 358 ನೌಕರರಿಗೆ ಕಳೆದ 8 ತಿಂಗಳಿಂದ ಸಂಬಳವೂ ನೀಡದೆ, ಮರು ನೇಮಕವೂ ಮಾಡದೆ ಬಡವರ ಮಕ್ಕಳ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ಜನಜಾಗೃತಿ ಸಂಘದ ನೇತೃತ್ವದಲ್ಲಿ ವಜಾಗೊಂಡ ನೌಕರರು ಪಾಲಿಕೆ ಕಚೇರಿ ಎದುರು ಸೋಮವಾರದಿಂದ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಆಝಾದ್ ಉದ್ಯಾನದಲ್ಲಿರುವ ಮಹಾತ್ಮಾ ಗಾಂಧೀಜಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸತ್ಯಾಗ್ರಹ ಆರಂಭಿಸಿದರು.

‘ಇದು ಹೋರಾಟದ ಕೊನೆಯ ಅಸ್ತ್ರವಾಗಿದ್ದು, ಮಾಡು ಇಲ್ಲವೇ ಮಡಿ ಎಂಬಂತಾಗಿದೆ.  ಕಳೆದ ಹಲವು ತಿಂಗಳಿಂದ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದರೂ, ಸಕಾರಾತ್ಮಕವಾಗಿ ಸ್ಪಂದಿಸಬೇಕಾದ ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು, ರಾಜ್ಯ ಸರ್ಕಾರ ತಮ್ಮ ವೈಯಕ್ತಿಕ ಪ್ರತಿಷ್ಟೆಗಾಗಿ ಎಲ್ ಆಂಡ್ ಟಿ ಕಂಪನಿಯ ಹಿತವನ್ನು ಕಾಯುತ್ತಿದ್ದಾರೆ ಹೊರತು, ನೂರಾರು ನೌಕರರ ಕಾಳಜಿ ವಹಿಸುತ್ತಿಲ್ಲ. ರಾಜ್ಯ ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿ ನಮ್ಮ ಭವಿಷ್ಯದೊಂದಿಗೆ ಆಟವಾಡುತ್ತಿರುವ ಮೇಯರ್ ನಡೆ ಸರಿಯಲ್ಲ’ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆಕ್ರೋಶ ವ್ಯಕ್ತಪಡಿಸಿದರು.

'ಸತ್ಯಾಗ್ರಹ ಆರಂಭಿಸಲು ಟೆಂಟ್ ಹಾಕಲು ಪೊಲೀಸರು ಅನುಮತಿ ನಿರಾಕರಿಸಿದರು. ಇನ್‌ಸ್ಪೆಕ್ಟರ್ ಹಾಗೂ ಎಸಿಪಿ ಅವರನ್ನು ಸಂಪರ್ಕಿಸಿದರೆ ಪೊಲಸ್ ಆಯುಕ್ತರು ಹೇಳಿದ್ದಾರೆ ಎನ್ನುತ್ತಿದ್ದಾರೆ. ಆಯುಕ್ತರು ಕರೆ ಸ್ವೀಕರಿಸುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹತ್ತಿಕ್ಕುವ ಹುನ್ನಾರವಿದೆ. ಬರುವ ದಿನಗಳಲ್ಲಿ ಜನರೇ ಇದಕ್ಕೆ ತಕ್ಕ ಪಾಠ ಕಲಿಸಬೇಕಿದೆ’ ಎಂದರು.

ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ ಮಾತನಾಡಿ, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ತವರು ಜಿಲ್ಲೆಯಲ್ಲೇ ಹಲವಾರು ತಿಂಗಳಿಂದ ನೂರಾರು ನೌಕರರು ಹೋರಾಟ ನಡೆಸುತ್ತಿದ್ದರೂ ಅವರಿಗೆ ಸ್ಪಂದಿಸದಿರುವುದು ನೋವಿನ ಸಂಗತಿ’ ಎಂದರು.

ಆನಂದ ಕಾಳಮ್ಮನವರ, ಸಿದ್ದು ಕಳ್ಳಿಮನಿ, ಬಸವರಾಜ ಮುಕ್ಕಲ, ಮಹೇಶ ಮೇಲಿನಮಠ, ನಿಂಗಪ್ಪ ಸೂರ್ಯವಂಶಿ, ಅಯ್ಯಪ್ಪಯ್ಯ ಇದ್ದರು.

ಸಂಜೆ ಭಜನೆ ನಡೆಸುವ ಮೂಲಕ ನೌಕರರು ಸತ್ಯಾಗ್ರಹ ಮುಂದುವರಿಸಿದರು. ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಆರೋಗ್ಯ ತಪಾಸಣೆಗೆ ವೈದ್ಯರು ಭೇಟಿ ನೀಡದಿರುವುದಕ್ಕೆ ಸತ್ಯಾಗ್ರಹ ನಿರತರು ಅಸಮಾಧಾನ ವ್ಯಕ್ತಪಡಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು