ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಿಹಾಳ ದುರಂತ: ಮತ್ತೊಬ್ಬ ಮಹಿಳೆ ಸಾವು

ಮೃತರ ಸಂಖ್ಯೆ 5ಕ್ಕೆ ಏರಿಕೆ; ಕಾರ್ಖಾನೆ ಮಾಲೀಕನ ಬಂಧಿಸಿದ ಪೊಲೀಸರು
Last Updated 2 ಆಗಸ್ಟ್ 2022, 2:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಾಯಗೊಂಡು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಂಡಿವಾಡದ ನಿರ್ಮಲಾ ಹುಚ್ಚಣ್ಣವರ(29) ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದು, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಸ್ಪಾರ್ಕಲ್‌ ಕ್ಯಾಂಡಲ್‌ ತಯಾರಿಸುವ ಕಾರ್ಖಾನೆಯಲ್ಲಿ ಜು. 23ರಂದು ಸಂಭವಿಸಿದ್ದ ಅವಘಡದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಗಾಯಗೊಂಡಿದ್ದ ಐವರರನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು. ನಂತರದ ದಿನಗಳಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಒಬ್ಬರು ಮೃತಪಟ್ಟಿದ್ದರು. ಇದೀಗ ನಿರ್ಮಲಾ ಮೃತಪಟ್ಟಿದ್ದು, ಉಳಿದ ಮೂವರಿಗೆ ಚಿಕಿತ್ಸೆ ಮುಂದುವರಿದಿದೆ.

ಮಾಲೀಕನ ಬಂಧನ: ದುರಂತ ನಡೆದ ದಿನದಿಂದ ತಲೆಮರೆಸಿಕೊಂಡಿದ್ದ ಆಕ್ಸನಿಕ್ ಇನ್ನೋವೇಷನ್‌ ಪ್ರೈ.ಲಿ. ಕಂಪನಿ ಮಾಲೀಕ ಗದಗ ಮೂಲದ ಮುಂಬೈ ಉದ್ಯಮಿ ಅಬ್ದುಲ್ ಶೇಖ್‌ ಅವರನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಘಟನೆ ಬಳಿಕ ಕಾರ್ಖಾನೆ ವ್ಯವಸ್ಥಾಪಕ ಮಂಜುನಾಥ ಹರಿಜನ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಕಾರ್ಖಾನೆ ಕಟ್ಟಡದ ಮೂಲ ಮಾಲೀಕ ಬನಶಂಕರಿ ದೀಕ್ಷಿತ್‌ ಅವರು, ಅಬ್ದುಲ್‌ ಅವರಿಗೆ ಕಾರ್ಖಾನೆ ನಡೆಸಲು ಬಾಡಿಗೆಗೆ ನೀಡಿದ್ದರು. ಮತ್ತಿಬ್ಬರು ಪಾಲುದಾರರೊಂದಿಗೆ ಅವರು ಅನಧಿಕೃತವಾಗಿ ಕಾರ್ಖಾನೆ ನಡೆಸುತ್ತಿದ್ದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ತನಿಖೆ ಮುಂದುವರಿದಿದೆ.

ವರದಿಯಲ್ಲಿ ಸತ್ಯಾಂಶ ಮರೆ?: ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಖಾನೆಗಳ ಸಮೀಕ್ಷೆ ತಂಡವು, ಕಳೆದ ಎಂಟು ದಿನಗಳಲ್ಲಿ 1,500ರಷ್ಟು ಕಾರ್ಖಾನೆಗಳ ತಪಾಸಣೆ ನಡೆಸಿದೆ. ಪ್ರತಿ ದಿನ ಜಿಲ್ಲಾಡಳಿತಕ್ಕೆ ಸಮೀಕ್ಷಾ ವರದಿ ಸಲ್ಲಿಕೆಯಾಗುತ್ತಿದ್ದು, ಕಾರ್ಖಾನೆಗಳು ಕಾನೂನು ಉಲ್ಲಂಘಿಸಿರುವುದು ಕಂಡುಬಂದಿದೆ.

ಕೆಲವು ಇಲಾಖೆಗಳಿಗೆ ಸಂಬಂಧಿಸಿದಂತೆ, ತಂಡವು ಸಕಾರಾತ್ಮಕ ವರದಿಯನ್ನಷ್ಟೇ ನೀಡುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. ನಿಯಮ ಉಲ್ಲಂಘನೆಯ ವರದಿ ನೀಡಿದರೆ ತಾವೇ ತಪ್ಪಿತಸ್ಥರಾಗಬೇಕಾಗುತ್ತೇವೆ ಎಂದು ಸತ್ಯಾಂಶ ಮರೆಮಾಚುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಿನ್ನಾಭರಣ ದೋಚುತ್ತಿದ್ದ ಆರೋಪಿ ಬಂಧನ

ಹುಬ್ಬಳ್ಳಿ: ಮಹಿಳೆಯರನ್ನು ಪರಿಚಯಿಸಿಕೊಂಡು ಅವರ ಸ್ನೇಹ ಮಾಡಿ ನಂತರ ಅವರನ್ನೇ ಯಾಮಾರಿಸಿ ಚಿನ್ನಾಭರಣ ಕಳವು ಮಾಡುತ್ತಿದ್ದ ಪುಣೆ ಮೂಲದ ಆರೋಪಿಯನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿ, 50ಗ್ರಾಂ ತೂಕದ ಚಿನ್ನಾಭರಣ ಹಾಗೂ ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಗೋಪನಕೊಪ್ಪದ ಮಹಿಳೆಯೊಬ್ಬರ ಪರಿಚಯ ಮಾಡಿಕೊಂಡಿದ್ದ ಆರೋಪಿ, ಕಳೆದ ಜುಲೈ 7ರಂದು ಅವರ ಮಗನಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಬಸ್‌ನಲ್ಲಿ ಕರೆದೊಯ್ದು, ಪಾನೀಯದಲ್ಲಿ ಮಂಪರು ಬರಿಸುವ ದ್ರವ್ಯ ಹಾಕಿ, ಆಭರಣ ದೋಚಿದ್ದ. ಅವನು ಕೋರ್ಟ್‌ ಕೆಲಸ ಎಂದು ಆಗಾಗ ಹುಬ್ಬಳ್ಳಿಗೆ ಬಂದು, ಮಹಿಳೆಯರನ್ನು ಯಾಮಾರಿಸಿ ಆಭರಣ ಸಹ ದೋಚುತ್ತಿದ್ದ. ಬೆಳಗಾವಿ, ಗದಗ, ಹುಬ್ಬಳ್ಳಿ ಗ್ರಾಮಿಣ ಭಾಗದಲ್ಲಿಯೂ ಇದೇ ರೀತಿ ಆಭರಣ ಕಳವು ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ ಎಂದು ಇನ್‌ಸ್ಪೆಕ್ಟರ್‌ ಜಗದೀಶ ಹಂಚನಾಳ ತಿಳಿಸಿದರು.

ಮೂವರ ಬಂಧನ: ಭವಾನಿ ನಗರ ಹಾಗೂ ರೈಲ್ವೆ ಗಾಲ್ಫ್‌ ಮೈದಾನದಲ್ಲಿನ ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿದ ಧಾರವಾಡದ ಮೂವರು ಆರೋಪಿಗಳನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿ, 5 ಕೆ.ಜಿ. ಶ್ರೀಗಂಧದ ಕಟ್ಟಿಗೆ ಹಾಗೂ ಮಿನಿ ಗೂಡ್ಸ್‌ ವಶಪಡಿಸಿಕೊಂಡಿದ್ದಾರೆ. ಕಳವು ಪ್ರಕರಣಕ್ಕೆ ಸಂಬಂಧಿಸಿ ಕೇಶ್ವಾಪುರ ಮತ್ತು ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಬಂಧನ: ಸ್ನೇಹಿತನಿಂದ ಕಾರು ಪಡೆದು, ಮರಳಿಸದೆ ಒತ್ತೆಯಿಟ್ಟು ನಾಲ್ಕು ವರ್ಷಗಳಿಂದ ಸತಾಯಿಸುತ್ತಿದ್ದ ಆರೋಪಿಯನ್ನು ಕಾರು ಸಮೇತ ಗೋಕುಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಿಶೋರ್ ಅಣವೇಕರ ಬಂಧಿತ ಆರೋಪಿ. ಇವನು 2019ರಲ್ಲಿ ಊರಿಗೆ ಹೋಗಿ ಬರುವುದಾಗಿ ಸ್ನೇಹಿತ ಬಸವರಾಜ ಅವರ ಬಳಿ ಕಾರನ್ನು ಪಡೆದಿದ್ದ. ನಂತರ ಅದನ್ನು ಒತ್ತೆಯಿಟ್ಟು ಹಣ ಪಡೆದಿದ್ದ. ಗೋಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT