ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರ್ಥರ್ನ್‌ ಟೆರಿಟರಿ ಟೂರ್ನಿಗೆ ವಾರ್ನರ್‌

Last Updated 29 ಮೇ 2018, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿ ನಿಷೇಧಕ್ಕೆ ಗುರಿಯಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಆಟಗಾರರಾದ ಡೇವಿಡ್‌ ವಾರ್ನರ್‌ ಮತ್ತು ಕ್ಯಾಮರಾನ್‌ ಬ್ಯಾಂಕ್ರಾಫ್ಟ್‌ ಅವರು ಜುಲೈನಲ್ಲಿ ನಡೆಯುವ ನಾರ್ಥರ್ನ್‌ ಟೆರಿಟರಿ ಕ್ರಿಕೆಟ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಈ ಹಿಂದೆ ಆಸ್ಟ್ರೇಲಿಯಾ ತಂಡದ ಉಪ ನಾಯಕರಾಗಿದ್ದ ವಾರ್ನರ್‌, ಜುಲೈ 21 ಮತ್ತು 22ರಂದು ನಡೆಯುವ ಪಂದ್ಯಗಳಲ್ಲಿ ಆಡಲಿದ್ದಾರೆ. ಬ್ಯಾಂಕ್ರಾಫ್ಟ್ ಅವರು ಎಲ್ಲಾ ಹಣಾಹಣಿಗಳಲ್ಲೂ ಕಣಕ್ಕಿಳಿಯಲಿದ್ದಾರೆ.

ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟೆಸ್ಟ್‌ ಪಂದ್ಯದ ವೇಳೆ ವಾರ್ನರ್‌, ಬ್ಯಾಂಕ್ರಾಫ್ಟ್‌ ಮತ್ತು ಸ್ಟೀವ್‌ ಸ್ಮಿತ್‌ ಅವರು ಚೆಂಡು ವಿರೂಪಗೊಳಿಸಿದ್ದು ಸಾಬೀತಾಗಿತ್ತು. ಹೀಗಾಗಿ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ವಾರ್ನರ್‌ ಮತ್ತು ಸ್ಮಿತ್‌ ಮೇಲೆ ಒಂದು ವರ್ಷ ಹಾಗೂ ಬ್ಯಾಂಕ್ರಾಫ್ಟ್‌ ಮೇಲೆ ಒಂಬತ್ತು ತಿಂಗಳು ನಿಷೇಧ ಹೇರಿತ್ತು. ಈ ಅವಧಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಮತ್ತು ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಆಡುವಂತಿಲ್ಲ ಎಂದು ಸೂಚಿಸಿತ್ತು. ಆದರೆ ಮೂರನೇ ಡಿವಿಷನ್‌ ಮತ್ತು ವಿದೇಶಗಳಲ್ಲಿ ನಡೆಯುವ ಟ್ವೆಂಟಿ–20 ಟೂರ್ನಿಗಳಲ್ಲಿ ಭಾಗವಹಿಸಲು ಅನುಮತಿ ನೀಡಿತ್ತು.

‘ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರಿಗೆ ನಾವು ಯಾವ ಭತ್ಯೆಯನ್ನೂ ನೀಡುತ್ತಿಲ್ಲ. ಪ್ರಯಾಣ, ಊಟ ಮತ್ತು ವಸತಿಗೆ ತಗಲುವ ವೆಚ್ಚಗಳನ್ನು ಆಟಗಾರರೇ ಭರಿಸಬೇಕು. ವಾರ್ನರ್‌ ಮತ್ತು ಬ್ಯಾಂಕ್ರಾಫ್ಟ್‌ ಅವರು ಸ್ವಂತ ಖರ್ಚಿನಲ್ಲೇ ಟೂರ್ನಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಅವರಿಂದ ಬಹುದೊಡ್ಡ ತಪ್ಪಾಗಿದೆ. ಅದಕ್ಕಾಗಿ ಈಗ ಶಿಕ್ಷೆ ಅನುಭವಿಸುತ್ತಿದ್ದಾರೆ. ತಪ್ಪನ್ನು ತಿದ್ದಿಕೊಂಡು ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವ ಗುರಿ ಹೊಂದಿದ್ದಾರೆ. ಹೀಗಾಗಿ ಟೂರ್ನಿಯಲ್ಲಿ ಆಡಲು ಅವಕಾಶ ಕಲ್ಪಿಸಿದ್ದೇವೆ’ ಎಂದು ನಾರ್ಥರ್ನ್‌ ಟೆರಿಟರಿ ಕ್ರಿಕೆಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೋಯೆಲ್‌ ಮಾರಿಸನ್‌ ತಿಳಿಸಿದ್ದಾರೆ.

‘ನಾರ್ಥರ್ನ್‌ ಟೆರಿಟರಿ ಟೂರ್ನಿಯ ಬಗ್ಗೆ ಕೇಳಿ ತಿಳಿದುಕೊಂಡಿದ್ದೇನೆ. ಇದರಲ್ಲಿ ಪ್ರತಿಭಾನ್ವಿತ ಆಟಗಾರರು ಭಾಗವಹಿಸುತ್ತಾರೆ. ಅವರ ಜೊತೆ ಆಡಲು ಉತ್ಸುಕನಾಗಿದ್ದೇನೆ’ ಎಂದು ವಾರ್ನರ್‌ ಪ್ರಕಟಣೆಯಲ್ಲಿ ಹೇಳಿದ್ದಾರೆ.

ವಾರ್ನರ್‌ ಅವರು ಸಿಡ್ನಿಯ ರಾಡ್ವಿಕ್‌ ಪೀಟರ್‌ಶಾಮ್‌ ಕ್ಲಬ್‌ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ತಿಂಗಳು ನಡೆಯುವ ಕೆನಡಾ ಲೀಗ್‌ನಲ್ಲಿ ಭಾಗವಹಿಸುವ ಬಗ್ಗೆಯೂ ಆಸಕ್ತಿ ತೋರಿದ್ದಾರೆ. ಸ್ಟೀವ್ ಸ್ಮಿತ್‌ ಅವರು ಈ ಟೂರ್ನಿಯಲ್ಲಿ ಆಡಲು ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ.

ಬ್ಯಾಂಕ್ರಾಫ್ಟ್‌ ಅವರು ಈ ವರ್ಷದ ಅಂತ್ಯದಲ್ಲಿ ವೆಸ್ಟರ್ನ್‌ ಆಸ್ಟ್ರೇಲಿಯಾದ ವಿಲ್ಲೇಟನ್‌ ಕ್ಲಬ್‌ ಪರ ಆಡುವುದಾಗಿಯೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT