ಗುರುವಾರ , ಸೆಪ್ಟೆಂಬರ್ 19, 2019
21 °C

ಶಿಕ್ಷಕರು ದೇಶದ ಅಭಿವೃದ್ಧಿಯ ಬೆನ್ನೆಲುಬು: ಅಬ್ಬಯ್ಯ

Published:
Updated:
Prajavani

ಹುಬ್ಬಳ್ಳಿ: ಸುಶಿಕ್ಷಿತ ಜನರಿಂದ ಮಾತ್ರ ಸದೃಢ ದೇಶ ನಿರ್ಮಾಣ ಮಾಡಲು ಸಾಧ್ಯ. ಮಕ್ಕಳನ್ನು ಸುಶಿಕ್ಷಿತರನ್ನಾಗಿಸಿ ದೇಶದ ಅಭಿವೃದ್ಧಿಗೆ ಶಿಕ್ಷಕರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಪ್ರಶಂಸಿಸಿದರು.

ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಹುಬ್ಬಳ್ಳಿ ಶಹರ ವಲಯದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಅಂಜುಮನ್‌ ಸಭಾಭವನದಲ್ಲಿ ನಡೆದ ಶಿಕ್ಷಕದ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ತಾಯಿ ಮತ್ತು ಗುರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ತಾಯಿ ಮಗುವಿಗೆ ಮೊದಲ ನುಡಿ ಹೇಳಿಕೊಟ್ಟರೆ, ಗುರು ಆ ಮಗುವಿಗೆ ಜೀವನದ ಪಾಠ ಹೇಳಿ ಕೊಡುತ್ತಾರೆ. ಮತಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಆದ್ಯತೆ ನೀಡಲಾಗುತ್ತಿದೆ’ ಎಂದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಇದ್ದರು.

ಎಫ್.ಬಿ. ಸೊರಟೂರ ಉಪನ್ಯಾಸ ನೀಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಹ್ಲಾದ ಗೆಜ್ಜಿ, ಹುಬ್ಬಳ್ಳಿ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷೆ ಜಿ.ಸಿ.ಕೋಲಕಾರ, ಹುಬ್ಬಳ್ಳಿ ಶಹರ ಘಟಕದ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಬಸವರಾಜ ಎಚ್. ಮಳಗಿ, ಹುಬ್ಬಳ್ಳಿ ಶಹರ ಘಟಕದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಆರ್.ಬೊಮ್ಮನಹಳ್ಳಿ, ಎಂ.ಎಚ್ ಜಂಗಳಿ ಉಪಸ್ಥಿತರಿದ್ದರು.

ಪಂಚಗ್ರಹ ಹಿರೇಮಠದ ಶಿವಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಸ್ವಾಗತಿಸಿದರು. ಗೌರಮ್ಮ ಕೋಲಕಾರ ನಿರೂಪಿಸಿದರು. ಎಂ.ಎಸ್.ಶಿವಳ್ಳಿಮಠ ವಂದಿಸಿದರು.

Post Comments (+)