ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಶ್ಚಿತ ಪಿಂಚಣಿ ಜಾರಿಗೆ ಶಿಕ್ಷಕರ ಹೋರಾಟ

Last Updated 9 ಮೇ 2022, 16:00 IST
ಅಕ್ಷರ ಗಾತ್ರ

ಧಾರವಾಡ:ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ನಿಶ್ಚಿತ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ವಿವಿಧ ಸಂಘಟನೆಗಳ ಸದಸ್ಯರು ನಗರದ ಮಿನಿವಿಧಾನಸೌಧದ ಎದುರು ಸೋಮವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ಬೆಳಿಗ್ಗೆ ನಗರದ ಕಲಾಭವನ ಬಳಿ ಸಮಾವೇಶಗೊಂಡ ಅನುದಾನಿತ ಪಿಂಚಣಿ ವಂಚಿತ ನೌಕರರು ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಜಾಥಾ ನಡೆಸಿ ಮನವಿ ಸಲ್ಲಿಸಿದರು.

ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಕರ್ನಾಟಕ ರಾಜ್ಯ ಶಿಕ್ಷಕರ ಉಪನ್ಯಾಸಕರ ಸಂಘದ ಕ್ರಿಯಾ ಸಮಿತಿ ಅಧ್ಯಕ್ಷ ಬಸವರಾಜ ಗುರಿಕಾರ, ‘ರಾಜ್ಯದ ಅನುದಾನಿತ ವಿದ್ಯಾಸಂಸ್ಥೆಗಳಲ್ಲಿ 2006ರ ಏ.1ರ ನಂತರ ನೇಮಕಗೊಂಡು ವೇತನ ಪಡೆಯುತ್ತಿರುವವರು, ಮೊದಲೇ ನೇಮಕಗೊಂಡು ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಯಾವುದೇ ರೀತಿಯ ಪಿಂಚಣಿ ಸೌಲಭ್ಯವಿಲ್ಲ. ಇದರಿಂದಾಗಿ ಪಿಂಚಣಿಯೇ ಸಿಗದೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ನೌಕರರು ಕೊನೆಯ ತಿಂಗಳ ಸಂಬಳವನ್ನು ಮಾತ್ರ ಪಡೆದು ಬರಿಗೈಯಲ್ಲಿ ನಿವೃತ್ತಿಯಾಗುವ ಸ್ಥಿತಿಯಿದೆ’ ಎಂದು ಬೇಸರಿಸಿದರು.

‘ಕರ್ತವ್ಯದಲ್ಲಿರುವಾಗಲೇ ನಿಧನರಾದ ಹಲವರ ಕುಟುಂಬಗಳಿಗೆ ಯಾವುದೇ ಆರ್ಥಿಕ ಸೌಲಭ್ಯ ದೊರೆಯುತ್ತಿಲ್ಲ. ಹೀಗಾಗಿ ವೇತನಾನುದಾನಕ್ಕೆ ಒಳಪಡುವುದಕ್ಕೂ ಪೂರ್ವದ ಸೇವೆಯನ್ನು, ಸೇವೆಗೆ ಸೇರಿದ ದಿನಾಂಕದಿಂದಲೇ ಪರಿಗಣಿಸಿ ವಿವಿಧ ಸೌಲಭ್ಯಗಳನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಇದ್ದರೂ, ಸರ್ಕಾರ ಮಾತ್ರ ಬೇಡಿಕೆ ಈಡೇರಿಸುತ್ತಿಲ್ಲ’ ಎಂದರು.

‘ರಾಜ್ಯದಲ್ಲಿ ಪಿಂಚಣಿ ವ್ಯವಸ್ಥೆಗೆ ಒಳಪಡದ ಸುಮಾರು 60 ಸಾವಿರ ನೌಕರರು ವಿವಿಧ ಅನುದಾನಿತ ಶಾಲಾ, ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಎಲ್ಲಿಯೂ ಇಲ್ಲದ ತಾರತಮ್ಯ ಕರ್ನಾಟಕದಲ್ಲಿ ಮಾತ್ರ ಇರುವುದು ರಾಜ್ಯಕ್ಕೆ ಕಳಂಕ ಮತ್ತು ದುರಂತ. ಸರ್ಕಾರದ ಈ ನಿರ್ಲಕ್ಷ್ಯ ಖಂಡಿಸಿ ಈಗಾಗಲೇ ರಾಜ್ಯದಾದ್ಯಂತ ಅನೇಕ ಹೋರಾಟಗಳನ್ನು ಮಾಡಿ ಗಮನ ಸೆಳೆಯಲಾಗಿದೆ. ಆದರೂ ಸರ್ಕಾರ ವಂಚಿತ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ ಮಾತನಾಡಿ, ‘ಪಿಂಚಣಿ ಬೇಡಿಕೆ ಈಡೇರುವವರೆಗೂ ನಾವು ಮಿನಿವಿಧಾನ ಸೌಧದ ಬಳಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತೇವೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗುವುದು’ ಎಂದು ಎಚ್ಚರಿಸಿದರು.

ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಾ.ಕೆಹನುಮಂತಪ್ಪ, ರಾಜ್ಯ ಅನುದಾನಿತ ಶಾಲಾಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಡಿ.ಸಿ.ಗೋಪಿನಾಥ, ಪ್ರಮುಖರಾದ ಮೋಹನ ಸಿದ್ಧಾಂತಿ, ಆನಂದ ಕುಲಕರ್ಣಿ, ಟಿ.ರವಿಕುಮಾರ, ಜಾಲಮಂಗಲ ನಾಗರಾಜ, ರಿಯಾಜಹ್ಮದ ಸನದಿ, ಎಸ್.ಎಲ್.ಜಾಧವ, ವೀರಭದ್ರಸ್ವಾಮಿ, ಹೊಸದುರ್ಗ ಪ್ರಕಾಶ, ಶಿವಾನಂದ ಹಿರೇಕುರುಬರ, ಲಕ್ಷ್ಮೀಪುತ್ರ ಕೀರಣಹಳ್ಳಿ, ಮುತ್ತುರಾಜ ಮತ್ತಿಕೊಪ, ಡಾ.ಎಚ್.ವಿ.ಬೆಳಗಲಿ ಇದ್ದರು. ರಾಜ್ಯದ ನಾನಾ ಜಿಲ್ಲೆಗಳಿಂದ ಬಂದಿರುವ ನೌಕರರು ಧರಣಿಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT