ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊರ ಊರುಗಳಿಂದ ಬಂದವರಿಗೂ ಪರೀಕ್ಷೆ’

ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Last Updated 28 ಏಪ್ರಿಲ್ 2021, 16:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್‌ಡೌನ್‌ ಘೋಷಣೆಯಾದ ಬಳಿಕ ಹೊರ ಊರುಗಳಿಂದ ಜಿಲ್ಲೆಗೆ ಬಂದ ಎಲ್ಲರಿಗೂ ಕೋವಿಡ್‌ ಪರೀಕ್ಷೆ ಮಾಡಿ ಸೋಂಕು ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡುವುದಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಹೋದ ಸಲ ಬೇರೆ ಊರಿನಿಂದ ಬಂದವರಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿತ್ತು. ಈ ಬಾರಿ ಮಾಡುತ್ತಿಲ್ಲವ ಏಕೆ? ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ನಗರದಲ್ಲಿ ಬುಧವಾರ ಈ ಉತ್ತರ ನೀಡಿದರು.

‘ಯಾವ ಊರುಗಳಿಂದ ಜಿಲ್ಲೆಗೆ ಜನ ಬರುತ್ತಿದ್ದಾರೆ ಎನ್ನುವುದರ ಮೇಲೆ ನಿಗಾ ಇರಿಸಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ವಿಶೇಷವಾಗಿ ಬೆಂಗಳೂರಿನಿಂದ ಬಂದವರ ಬಗ್ಗೆ ಎಚ್ಚರ ವಹಿಸಿ ಕನಿಷ್ಠ ರ್‍ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆ ಮಾಡಿ ಮನೆಯಲ್ಲಿಯೇ ಪ್ರತ್ಯೇಕವಾಸ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸುವೆ’ ಎಂದರು.

‘ಕರ್ನಾಟಕದಲ್ಲಿ ವಿಧಿಸಲಾಗಿರುವ ಎರಡು ವಾರಗಳ ಕೋವಿಡ್‌ ಕರ್ಪ್ಯೂನಿಂದಾಗಿ ಸೋಂಕಿತರ ಸರಪಳಿ ಕಳಚಲಿದೆ. ಇದರ ಪರಿಣಾಮ ಕೆಲ ದಿನಗಳಲ್ಲಿಯೇ ಗೊತ್ತಾಗಲಿದೆ. ಆದಷ್ಟು ಬೇಗನೆ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಕೋವಿಡ್‌ ನಿರ್ವಹಣೆ ಕುರಿತು ಕಾಂಗ್ರೆಸ್ ನಾಯಕರ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ ‘ಕೋವಿಡ್‌ ಎರಡನೇ ಅಲೆ ನಿರೀಕ್ಷಿತವೇ ಆಗಿತ್ತು. ಆದರೆ, ಇಷ್ಟೊಂದು ವೇಗವಾಗಿ ಹರಡುತ್ತದೆ ಎನ್ನುವ ಅಂದಾಜು ಇರಲಿಲ್ಲ. ಕೋವಿಡ್‌ ನಿರ್ವಹಣೆಗೆ ಸರ್ಕಾರ ಉತ್ತಮವಾಗಿ ವ್ಯವಸ್ಥೆ ಮಾಡಿದ್ದು, ಕಾಂಗ್ರೆಸ್‌ ನಾಯಕರು ಸುಳ್ಳು ಹೇಳಿಕೆಗಳನ್ನು ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ’ ಎಂದರು.

‘ಕೋವಿಡ್‌ ಮೊದಲ ಅಲೆಯನ್ನು ಛತ್ತೀಸಗಡ ಹಾಗೂ ಮಹಾರಾಷ್ಟ್ರ ರಾಜ್ಯಗಳು ಹಿಂದೆ ಎದುರಿಸಿದ್ದವು. ಈ ಸಲ ಅಲ್ಲಿ ಯಾವ ಚುನಾವಣೆಯೂ ಇರಲಿಲ್ಲ. ಆದರೂ ಅಲ್ಲಿ ಸಾಕಷ್ಟು ಸೋಂಕಿತರು ಇದ್ದಾರೆ. ರಾಹುಲ್‌ ಗಾಂಧಿ ಕೇರಳದ ಗಲ್ಲಿ ಗಲ್ಲಿಯಲ್ಲಿ ಸಾವಿರಾರು ಜನರನ್ನು ಸೇರಿಸಿ ಚುನಾವಣಾ ಪ್ರಚಾರ ಮಾಡಿದ್ದಾರೆ’ ಎಂದು ಟೀಕಿಸಿದರು.

‘ರಾಜಕಾರಣ ಮಾಡದೆ ಕೋವಿಡ್‌ ವಿರುದ್ಧ ಎಲ್ಲರೂ ಒಂದಾಗಿ ಹೋರಾಡಬೇಕಾದ ಸಮಯವಿದು. ಕಾಂಗ್ರೆಸ್‌ ಅನ್ನು ಜನ ಎಲ್ಲಿಡಬೇಕು ಈಗ ಅಲ್ಲಿಯೇ ಇಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಅನಗತ್ಯವಾಗಿ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಕರ್ನಾಟಕದ ಉಪಚುನಾವಣೆ ಮುಂದೂಡಬೇಕೆಂದು ಒಂದೇ ಒಮ್ಮೆಯೂ ಆಗ್ರಹಿಸಲಿಲ್ಲ ಯಾಕೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT