ಗುರುವಾರ , ಆಗಸ್ಟ್ 11, 2022
20 °C

ಕಾನ್‌ಸ್ಟೆಬಲ್‌ಗೆ ಕಪಾಳಮೋಕ್ಷ ಮಾಡಿದ ಎಸಿಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ದಕ್ಷಿಣ ಸಂಚಾರ ಪೊಲೀಸ್‌ ಠಾಣೆಯಲ್ಲಿ ಸಂಚಾರ ಎಸಿಪಿ ಎಂ.ಎಸ್‌. ಹೊಸಮನಿ ಅವರು ಕಾನ್‌ಸ್ಟೆಬಲ್‌ ಒಬ್ಬರಿಗೆ ಕಪಾಳಕ್ಕೆ ಹೊಡೆದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಠಾಣೆಯಲ್ಲಿ ಸೆಂಟ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್‌ ಒಬ್ಬರು ಹೊಸಮನಿ ಅವರಿಗೆ ಸೆಲ್ಯೂಟ್‌ ಹೊಡೆದು ನಿಂತಿದ್ದರು. ಕೆಲ ಕ್ಷಣಗಳ ನಂತರ ಹೊಸಮನಿ ಅವರು ಕಾನ್‌ಸ್ಟೆಬಲ್‌ಗೆ ಕಪಾಳಮೋಕ್ಷ ಮಾಡಿದ ದೃಶ್ಯಗಳು ಸೆರೆಯಾಗಿವೆ. ಶುಕ್ರವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆ ವೇಳೆ ಠಾಣೆಯಲ್ಲಿ ಎಎಸ್‌ಐ ಹಾಗೂ ಇತರ ಸಿಬ್ಬಂದಿ ಇದ್ದರು. ಠಾಣೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. 

ಪ್ರಕರಣಕ್ಕೆ ಸಂಬಂಧಿಸಿ ಡಿಸಿಪಿ ಆರ್‌.ಬಿ. ಬಸರಗಿ ಅವರು ಠಾಣೆಗೆ ತೆರಳಿ ಸಿಸಿಟಿವಿ ರೆಕಾರ್ಡ್‌ ಸಂಗ್ರಹಿಸಿದ್ದಾರೆ. ಪ್ರಕರಣ ನಡೆದ ವೇಳೆ ಹಾಜರಿದ್ದ ಸಿಬ್ಬಂದಿಯಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ.

‘ಸಿಬ್ಬಂದಿ ಮೇಲೆ ಅಧಿಕಾರಿ ಹಲ್ಲೆ ನಡೆಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಅಪರಾಧ ಮತ್ತು ಸಂಚಾರ ಡಿಸಿಪಿ ಆರ್‌.ಬಿ. ಬಸರಗಿ ಅವರಿಗೆ ಸೂಚಿಸಿದ್ದೇನೆ’ ಎಂದು ಪೊಲೀಸ್‌ ಕಮಿಷನರ್‌ ಲಾಬೂರಾಮ್‌ ತಿಳಿಸಿದರು.

₹40ಲಕ್ಷಕ್ಕೂ ಹೆಚ್ಚು ಮೌಲ್ಯದ ಆಭರಣ ಕಳವು: ಇಲ್ಲಿಯ ಆದರ್ಶ ನಗರದಲ್ಲಿರುವ ನಿವೃತ್ತ ಎಂಜಿನಿಯರ್ ಮಹಾದೇವಪ್ಪ ಭೀಮಕ್ಕನವರ ಮನೆಯ ಬಾಗಿಲು ಮುರಿದು ₹50ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳ್ಳಿ, ಬಂಗಾರದ ಆಭರಣಗಳ ಕಳುವಾಗಿದೆ.

ಕೆಲಸದ ನಿಮಿತ್ತ ಭೀಮಕ್ಕನವರು ಬೇರೆ ಊರಿಗೆ ತೆರಳಿದ್ದರು. ಭಾನುವಾರ ಬೆಳಿಗ್ಗೆ ವಾಪಸ್ ಬಂದಾಗ ಮನೆಯ ಬಾಗಿಲು ಮುರಿದಿರುವುದು ಗೊತ್ತಾಗಿದೆ. ಅಲ್ಮೇರಾದ ಬೀಗವನ್ನು ಮುರಿದು, ‌380 ಗ್ರಾಂ ಬಂಗಾರ, 15 ಕೆ.ಜಿ ಬೆಳ್ಳಿ, 10 ರೇಷ್ಮೆ ಸೀರೆ ಹಾಗೂ ₹2ಸಾವಿರ ನಗದು ಕಳವು ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬೆರಳಚ್ಚು ಹಾಗೂ ಕೆಲವು ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಆರೋಪಿ ಬಂಧನ: ನಗರದ ಸಿಬಿಟಿ ಬಳಿಯ ಮಿಶ್ರಾ ಪೇಡಾ ಅಂಗಡಿ ಬಳಿ ಎಗ್ಗ್‌ರೈಸ್‌ ವ್ಯಾಪಾರ ಮಾಡುತ್ತಿದ್ದ ಇಲಿಯಾಸ್‌ ಲಾಲಿಮಿಯಾ ಎಂಬುವವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಆರೋಪಿ ಸೆಟ್ಲಮೆಂಟ್‌ ನಿವಾಸಿ ಮೌನೇಶ ಅಂಗಡಿಯನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಡಿ.11ರಂದು ಸಂಜೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಇಲಿಯಾಸ್‌ ಜೊತೆ ಮೌನೇಶ ತಂಟೆ ತೆಗೆದು ಜಗಳಕ್ಕೆ ಮುಂದಾಗಿದ್ದ. ಪರಸ್ಪರ ವಾಗ್ವಾದ ನಡೆದಿದ್ದು, ಕೋಪಗೊಂಡ ಮೌನೇಶ ಇಲಿಯಾಸ್ ಅವರ ತಲೆಗೆ, ಕಣ್ಣಿಗೆ ಬಲವಾಗಿ ಹೊಡೆದು ಕೆಳಗೆ ಬಿಳಿಸಿದ್ದ. ತಲೆಗೆ ತೀವ್ರ ಪೆಟ್ಟಾದ ಪರಿಣಾಮ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಡಿ.15ರಂದು ಮೃತಪಟ್ಟಿದ್ದರು. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಆರೋಪಿ ನಾಪತ್ತೆಯಾಗಿದ್ದ.

ಇನ್‌ಸ್ಪೆಕ್ಟರ್‌ ಎಂ.ಎಸ್‌. ಪಾಟೀಲ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು. ಆರೋಪಿಯ ಮೊಬೈಲ್‌ ನಂಬರ್‌ನ ಜಾಡು ಹಿಡಿದು, ಊರ ಹೊರವಲಯದಲ್ಲಿ ಭಾನುವಾರ ಬಂಧಿಸಿದ್ದಾರೆ.

ಬಿಟ್‌ಕಾಯಿನ್‌ ವ್ಯವಹಾರ: ಆತ್ಮಹತ್ಯೆ

ಎರಡು ದಿನಗಳ ಹಿಂದೆ ನಗರದ ಚನ್ನಮ್ಮ ವೃತ್ತದ ಬಳಿಯಿರುವ ವಿನಾಯಕ ಲಾಡ್ಜ್‌ನಲ್ಲಿ ಆಂಧ್ರಪ್ರದೇಶ ಮೂಲದ ದಬ್ಬುಗುಂಟ್‌ ರಾಜೇಂದ್ರ ಎಂಬುವವರು ಆತ್ಮಹತ್ಯೆ ಮಾಡಿಕೊಳ್ಳಲು ಬಿಟ್‌ಕಾಯಿನ್‌ ವ್ಯವಹಾರವೇ ಕಾರಣವಾಗಿದೆ ಎನ್ನುವ ಮಾಹಿತಿ ಉಪನಗರ ಠಾಣೆ ಪೊಲೀಸರಿಗೆ ತಿಳಿದು ಬಂದಿದೆ.

ದಬ್ಬುಗುಂಟ್‌ ಅವರ ಪುತ್ರ ಭುವನಕುಮಾರ ಶನಿವಾರ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಪೊಲೀಸರಿಗೆ ಕೆಲವು ಮಾಹಿತಿ ನೀಡಿದ್ದಾರೆ. ವ್ಯವಹಾರ ಸಂಬಂಧ ತಂದೆ ಹುಬ್ಬಳ್ಳಿಗೆ ಬಂದಿದ್ದರು. ಡಿ.17ರಂದು ರಾತ್ರಿ ಮೊಬೈಲ್‌ಗೆ ಮೆಸೇಜ್‌ ಮಾಡಿ, ‘ಜೀವ ಬೆದರಿಕೆ ಇದ್ದು, ಬೆಳಿಗ್ಗೆವರೆಗೆ ಇರುತ್ತೇನೋ ಇಲ್ಲವೋ. ನನಗೆ ಶಿವ ಅವರು ಸಾಯುತ್ತಾರೆ’ ಎಂದು ತಿಳಿಸಿದ್ದರು. ಬೆಳಿಗ್ಗೆ ಆಗೋವರೆಗೆ ಅವರು ಡೆತ್‌ ನೋಟ್‌ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ನೋಟ್‌ಲ್ಲಿ ಶಿವ ಹುಬ್ಬಳ್ಳಿ, ರಾಜೇಶ ಬೆಂಗಳೂರು, ಹರಿನಾರಾಯಣ ಚೆನ್ನೈ ಮತ್ತು ಜುನೇದ್‌ ಚೆನ್ನೈ ಅವರ ಹೆಸರಿದೆ. ಇವರು ನೀಡಿರುವ ಮಾನಸಿಕ ಕಿರಿಕಿರಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ದೂರಿನ ಅನ್ವಯ ಶಿವ ಹುಬ್ಬಳ್ಳಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅವರ ನಡುವೆ ಬಿಟ್‌ಕಾಯಿನ್‌ ವ್ಯವಹಾರ ನಡೆಯುತ್ತಿತ್ತು. ಒಂದಷ್ಟು ಮಾಹಿತಿಗಳು ಲಭ್ಯವಾಗಿದ್ದು, ತನಿಖೆಯನ್ನು ಮುಂದುವರಿಸಿದ್ದೇವೆ’ ಎಂದು ಇನ್‌ಸ್ಪೆಕ್ಟರ್‌ ಎಸ್.ಕೆ. ಹೊಳೆಯಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು