ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಪಾತಾಳಕ್ಕೆ ಕುಸಿದ ಟೊಮೆಟೊ ದರ

Last Updated 4 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಧಾರಣೆ ಪಾತಾಳಕ್ಕೆ ಕುಸಿದಿದೆ. ಕೆ.ಜಿ.ಗೆ ₹3–4 ರಂತೆ ಬಿಕರಿಯಾಗುತ್ತಿದೆ. 25 ಕೆ.ಜಿ. ತೂಕದ ಬಾಕ್ಸ್‌ ₹100, 8 ಕೆ.ಜಿ.ತೂಕದ ಬುಟ್ಟಿ ₹40ಕ್ಕೆ ಮಾರಾಟವಾಗುತ್ತಿದೆ.

ಸ್ಥಳೀಯವಾಗಿ ಯಥೇಚ್ಛ ಆವಕವಿದ್ದು, ಅದರ ಜತೆಗೆ ಬೆಳಗಾವಿ, ದಾವಣಗೆರೆ ಜಿಲ್ಲೆಯಿಂದಲೂ ಹೆಚ್ಚು ಪೂರೈಕೆಯಾಗಿರುವುದು ದರ ಇಳಿಕೆಗೆ ಕಾರಣವಾಗಿದೆ. ಕಳೆದ ವಾರ ಧಾರಣೆ ₹180 (25 ಕೆ.ಜಿ) ಆಸುಪಾಸಿನಲ್ಲಿತ್ತು. ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಮಾಲು ತಂದ ರೈತರು, ಬೆಲೆ ಕುಸಿತದಿಂದ ಕಂಗಾಲಾಗಿ ಸಗಟು ದರದಲ್ಲಿ ವರ್ತಕರಿಗೆ ಮಾರಾಟ ಮಾಡಿದರು.

ಮಲಪ್ರಭಾ ಹಾಗೂ ಭದ್ರಾ ನೀರಾವರಿ ಸೌಲಭ್ಯವಿರುವ ಬೆಳಗಾವಿ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚು ಬೆಳೆ ಬೆಳೆದಿದ್ದು, ಅಧಿಕ ಮಾಲನ್ನು ರೈತರು ಇಲ್ಲಿಗೆ ತರುತ್ತಿದ್ದಾರೆ. ಒಟ್ಟಿಗೆ ಹೆಚ್ಚು ಮಾಲು ಬರುತ್ತಿರುವ ಕಾರಣ ಬೆಲೆ ಇಳಿಕೆಯಾಗಿದೆ. ಟೊಮೆಟೊ ಬೆಲೆ ಕಡಿಮೆಯಾದರೂ ವಹಿವಾಟು ಸಾಧಾರಣವಾಗಿದೆ ಎಂದು ತರಕಾರಿ ವ್ಯಾಪಾರಿ ಇಮ್ರಾನ್‌ ‘ಪ್ರಜಾವಾಣಿಯ ಮೆಟ್ರೊ' ಗೆ ತಿಳಿಸಿದರು.

ಗುಂಟೂರು ಮೆಣಸಿನಕಾಯಿ ₹300 ಹೊರತುಪಡಿಸಿ ಬೇರೆಲ್ಲ ತರಕಾರಿಗಳ ಬೆಳೆ ಇಳಿಕೆ ಕಂಡು ಎರಡು ವಾರದಿಂದ ಯಥಾಸ್ಥಿತಿ ಕಾಯ್ದುಕೊಂಡಿವೆ. ಈಗ ಮದುವೆ ಸೀಸನ್‌ಗಳು ಆರಂಭವಾಗಿದ್ದು, ಇನ್ನಷ್ಟೇ ಬೆಲೆ ಏರಿಕೆಯಾಗಬಹುದು ಎಂಬುದು ವ್ಯಾಪಾರಿಗಳ ಆಶಾವಾದ.

ಇಳಿಯದ ಬೆಳ್ಳುಳ್ಳಿ ದರ

ಬೆಳ್ಳುಳ್ಳಿ ದರ ಇನ್ನೂ ಇಳಿದಿಲ್ಲ. ಹೈಬ್ರಿಡ್‌ ಬೆಳ್ಳುಳ್ಳಿ ಕೆ.ಜಿ.ಗೆ ₹120 ಮಾರಾಟವಾಗುತ್ತಿದೆ. ಜವಾರಿ ಬೆಳ್ಳುಳ್ಳಿ ₹200ರ ಗಡಿ ದಾಟಿದೆ. ಬ್ಯಾಡಗಿ ಮೆಣಸಿನಕಾಯಿ ಬೆಲೆಯೂ ಉಳಿಕೆಯಾಗಿದೆ. ₹35 ಸಾವಿರಕ್ಕೆ ಬಿಕರಿಯಾಗುತ್ತಿದ್ದ ಗುಣಮಟ್ಟದ ಡಬ್ಬಿ ಈಗ ₹28 ಸಾವಿರಕ್ಕೆ ಇಳಿದಿದೆ. ಮಾರುಕಟ್ಟೆಗೆ ಸದ್ಯ ಡಬ್ಬಿ ಹಾಗೂ ಕಡ್ಡಿ ತಳಿಯ 6,500 ಕ್ವಿಂಟಲ್‌ ಆವಕವಾಗುತ್ತಿದೆ. ಈರುಳ್ಳಿ ದರ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಕ್ವಿಂಟಲ್‌ ಈರುಳ್ಳಿ ₹2,500ಕ್ಕೆ ಇಳಿದಿದೆ. ‘ಪುಣೆ ಈರುಳ್ಳಿ ಆವಕ ಹೆಚ್ಚುತ್ತಿದ್ದು, ಕೆಲ ದಿನಗಳಲ್ಲೇ ಇನ್ನಷ್ಟು ಬೆಳೆ ಇಳಿಕೆಯಾಗಲಿದೆ’ ಎಂದು ಆಲೂಗಡ್ಡೆ ಹಾಗೂ ಈರುಳ್ಳಿ ವರ್ತಕರ ಸಂಘದ ಅಧ್ಯಕ್ಷ ಸಲೀಂ ಬ್ಯಾಹಟ್ಟಿ ತಿಳಿಸಿದರು.

ಆಲೂಗಡ್ಡೆ ಕ್ವಿಂಟಲ್‌ ₹2,400, ಉದ್ದಿನಕಾಳು ₹4,882, ಕಡಲೆಕಾಳು ₹3,969, ಗೋಧಿ ₹2,839, ಜೋಳ ₹3,728, ತೊಗರಿ ₹2,500, ಧನಿಯಾ ₹6,711, ನೆಲಗಡಲೆ ₹4,273, ನವಣೆ ₹1,759,ಮೆಕ್ಕೆಜೋಳ ₹1,773, ಸಾಮೆ ₹2,869, ಸೂರ್ಯ
ಕಾಂತಿ ₹3,303, ಸೋಯಾಬಿನ್ ₹3,953, ಹತ್ತಿ ₹5,709, ಹೆಸರುಕಾಳು ₹7,629, ಹುರುಳಿ ಕಾಳು ₹2,366 ರಂತೆ ಮಾರಾಟವಾಗುತ್ತಿದೆ.

ರಾಗಿಗೆ ಹೆಚ್ಚಿದ ಬೇಡಿಕೆ

ಎಪಿಎಂಸಿ ಮಾರುಕಟ್ಟೆಗೆ ದಾವಣಗೆರೆ, ಚಿತ್ರದುರ್ಗ ಹಾಗೂ ಬೆಂಗಳೂರು ಭಾಗದಿಂದ ರಾಗಿ ಆವಕವಾಗಿದ್ದು, ಉತ್ತಮ ಬೇಡಿಕೆ ಕಂಡು ಬಂದಿದೆ. ಸದ್ಯ ಮಾರುಕಟ್ಟೆಗೆ 402 ಕ್ವಿಂಟಲ್‌ ರಾಗಿ ಬಂದಿದ್ದು, ₹3,920ರಂತೆ ಮಾರಾಟವಾಗುತ್ತಿದೆ.
ರಾಗಿ ಹಿಟ್ಟಿನ ಪ್ಯಾಕೆಟ್‌ ಕೆ.ಜಿ.ಗೆ ₹58ರಂತೆ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT