ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹು–ಧಾ ಮಹಾನಗರ ಪಾಲಿಕೆ ಚುನಾವಣೆ ಹೆಚ್ಚು ಬಾರಿ ಸ್ಪರ್ಧಿಸಿದ ಚುನಾವಣಾ ಕಲಿಗಳು

ವಿಶೇಷ ದಾಖಲೆಗೆ ಪಾತ್ರರಾದ ಪಾಂಡುರಂಗ ಪಾಟೀಲ, ಪ್ರಕಾಶ ಕ್ಯಾರಕಟ್ಟಿ
Last Updated 25 ಆಗಸ್ಟ್ 2021, 14:43 IST
ಅಕ್ಷರ ಗಾತ್ರ

ಹುಬ್ಬಳ್ಳಿ:‌ ರಾಜಕಾರಣದಲ್ಲಿ ಇರುವವರಿಗೆ‌ ಒಮ್ಮೆಯಾದರೂ ಜನಪ್ರತಿನಿಧಿಯಾಗಬೇಕು ಎನ್ನುವ ಆಸೆ. ಅದಕ್ಕಾಗಿ ಚುನಾವಣಾ ಸಮಯದಲ್ಲಿ ಪಕ್ಷದ ಮುಖಂಡರ ದುಂಬಾಲು ಬೀಳುವುದು ಸಾಮಾನ್ಯ. ಒಂದು ಸಲ ಜನಪ್ರತಿನಿಧಿಯಾದರಂತೂ ರಾಜಕೀಯಕ್ಕೆ ಬಂದಿದ್ದು ಸಾರ್ಥಕ ಎನ್ನುವ ಭಾವನೆ ಅನೇಕರಲ್ಲಿದೆ. ಆದರೆ, ಇನ್ನೂ ಕೆಲವರು ಮೇಲಿಂದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಿ, ಬಹಳಷ್ಟು ಬಾರಿ ಗೆಲ್ಲುವ ಮೂಲಕ ದಾಖಲೆ ಮಾಡಿದ್ದಾರೆ.

ಮಹಾನಗರ ಪಾಲಿಕೆಗೆ ಬೆರಳೆಣಿಕೆಯಷ್ಟು ರಾಜಕಾರಣಿಗಳು ಹಲವು ಬಾರಿ ಬೇರೆ ಬೇರೆ ಪಕ್ಷಗಳಿಂದ, ಕೆಲ ಬಾರಿ ಸ್ವತಂತ್ರ ‌ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ಅವರಲ್ಲಿ ಪಕ್ಷಗಳಿಂದ ಸ್ಪರ್ಧಿಸಿದವರಲ್ಲಿ ಹುಬ್ಬಳ್ಳಿಯ ಪಾಂಡುರಂಗ ಪಾಟೀಲ ಹಾಗೂ ಪ್ರಕಾಶ ಕ್ಯಾರಕಟ್ಟಿ ಅವರ ಹೆಸರು ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿವೆ. ಮೂರನೇ ಸ್ಥಾನ ಪ್ರಫುಲ್ಲಚಂದ್ರ ರಾಯನಗೌಡ್ರ ಹೆಸರಿನಲ್ಲಿದೆ.

ಪಾಂಡುರಂಗ ಪಾಟೀಲ ಅವರು 1983ರಿಂದ ಪಾಲಿಕೆ ಚುನಾವಣೆಗೆ ಸ್ಪರ್ಧಿಸುತ್ತಾ ಬಂದಿದ್ದಾರೆ. ಮೊದಲ ಸಲ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 1990ರಲ್ಲಿ ಪಕ್ಷೇತರ, 1996ರಲ್ಲಿ ಜನತಾ ಪಕ್ಷ, 2001ರಲ್ಲಿ ಜನತಾ ದಳ, 2007ರಲ್ಲಿ ಜೆಡಿಯುನಿಂದ ಸ್ಪರ್ಧಿಯಾಗಿದ್ದರು. 2013ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಈ ಬಾರಿಯೂ ಬಿಜೆಪಿಯಿಂದ ಉಮೇದುವಾರಿಕೆ ಸಲ್ಲಿಸಿರುವ ಅವರು ಒಟ್ಟು ಏಳು ಬಾರಿ ಸ್ಪರ್ಧಿಸಿದ ದಾಖಲೆಗೆ ಪಾತ್ರರಾಗಿದ್ದಾರೆ. ಇದರಲ್ಲಿ ಐದು ಬಾರಿ ಗೆಲುವು ಪಡೆದಿದ್ದಾರೆ. ಈ ಬಾರಿಯ ಫಲಿತಾಂಶ ಬರಬೇಕಿದೆ. ಪಾಲಿಕೆ ಚುನಾವಣೆ ಮಟ್ಟಿಗೆ ಹೆಚ್ಚು ಬಾರಿ ಸ್ಪರ್ಧೆಯ ದಾಖಲೆಯನ್ನು ಅವರು ಹೊಂದಿದ್ದಾರೆ.

ಪ್ರಕಾಶ ಕ್ಯಾರಕಟ್ಟಿ 1990ರ ತಮ್ಮ ಮೊದಲ ಚುನಾವಣೆಯಿಂದಲೂ ಈ ಚುನಾವಣೆ ತನಕ ಸತತವಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಒಟ್ಟು ಆರು ಬಾರಿ ಸ್ಪರ್ಧಿಸಿದ್ದು, ನಾಲ್ಕು ಸಲ ಗೆಲುವು ಮತ್ತು ಒಂದು ಸಲ ಸೋಲು ಕಂಡಿದ್ದಾರೆ. ಈ ಬಾರಿಯ ಫಲಿತಾಂಶ ಬರಬೇಕಿದೆ.

ಪ್ರಫುಲ್ಲಚಂದ್ರ ರಾಯನಗೌಡ್ರ ಅವರು ಐದು ಸಲ ಸ್ಪರ್ಧಿಸಿದ್ದಾರೆ. ತಮ್ಮ ಮೊದಲ ಪಾಲಿಕೆ ಚುನಾವಣೆ (1983) ಜನತಾ ಪಕ್ಷದಿಂದ, 1990ರಲ್ಲಿ ಕಾಂಗ್ರೆಸ್‌ನಿಂದ, 2001ರಲ್ಲಿ ಜೆಡಿಯುನಿಂದ ಸ್ಪರ್ಧಿಸಿದ್ದರು. ಹಿಂದಿನ ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಇವರನ್ನು ಹೊರತುಪಡಿಸಿದರೆ ಮೂರ್ನಾಲ್ಕು ಬಾರಿ ಸ್ಪರ್ಧಿಸಿದ ಹಲವು ಪಾಲಿಕೆ ಜನಪ್ರತಿನಿಧಿಗಳೂ ಇಲ್ಲಿದ್ದಾರೆ.

ನಾಲ್ಕನೇ ಬಾರಿ ಬಿಜೆಪಿಯಿಂದ ಕಣಕ್ಕಿಳಿದಿರುವ ವೀರಣ್ಣ ಸವಡಿ ಹಿಂದಿನ ಮೂರೂ ಚುನಾವಣೆಗಳಲ್ಲಿ ಗೆಲುವು ಪಡೆದಿದ್ದಾರೆ. ಗಣೇಶ ಟಗರಗುಂಟಿ ಹಿಂದಿನ ಮೂರೂ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಒಂದು ಸಲ ಸೋತಿದ್ದರು. ಪಕ್ಷದಿಂದ ಟಿಕೆಟ್‌ ಸಿಗದ ಕಾರಣಕ್ಕೆ ಈ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಒಟ್ಟಾರೆ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರನ್ನು ಹೊರತುಪಡಿಸಿ ಶಿವು ಹಿರೇಮಠ ಹಾಗೂ ರಾಜಣ್ಣ ಕೊರವಿ ಮೂರನೇ ಸಲ ಕಣಕ್ಕಿಳಿದಿದ್ದಾರೆ. ಮಾಜಿ ಮೇಯರ್‌ ಡಿ.ಕೆ. ಚವ್ಹಾಣ್‌ ಮೂರು ಸಲ ಸ್ಪರ್ಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT