ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು ಬರುತ್ತಾರೆಂದು ಕಸ ತೆಗೆದರು!

ಅವ್ಯವಸ್ಥೆಯ ತಾಣವಾದ ಶಿವಗಂಗಾ ಲೇ ಔಟ್‌, ಆಯುಕ್ತರ ಮುಂದೆ ಸಮಸ್ಯೆಗಳ ಸರಮಾಲೆ
Last Updated 7 ಏಪ್ರಿಲ್ 2022, 15:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಚರಂಡಿ ಮೇಲೆ ಹಾಗೂ ಸುತ್ತಮುತ್ತಲೂ ಮುಳ್ಳಿನ ರಾಶಿ, ರಸ್ತೆಯಲ್ಲಿ ಚರಂಡಿ ನೀರು, ಬಡಾವಣೆಗೆ ಮುಳ್ಳುಕಂಟಿಗಳ ಸ್ವಾಗತ, ಕಸದ ಹಾಗೂ ಕುಡುಕರ ಅಡ್ಡೆಯಾದ ಉದ್ಯಾನ, ನಿರ್ಮಿಸಿ ಕೆಲ ವರ್ಷಗಳಲ್ಲೇ ಕುಸಿದ ಕಾಂಕ್ರೀಟ್‌ ರಸ್ತೆ.

ಇದು ಕುಸುಗಲ್‌ ರಸ್ತೆಯಲ್ಲಿರುವ ಶಿವಗಂಗಾ ಲೇ ಔಟ್‌ನಲ್ಲಿ ಗುರುವಾರ ಕಂಡುಬಂದ ದುಃಸ್ಥಿತಿ. ಲೇ ಔಟ್‌ ಪ್ರವೇಶಿಸುವ ಆರಂಭದಿಂದಲೂ ಕೊನೆಯ ತನಕ ಮುಳ್ಳಿನ ಗಿಡಗಳ ರಾಶಿ, ಕಸ, ಎಲ್ಲೆಂದರಲ್ಲಿ ಬೀಸಾಡಿದ ಬಾಟಲ್‌ಗಳು ಕಾಣುತ್ತಿದ್ದವು. ಈ ಬಡಾವಣೆ ಅಭಿವೃದ್ಧಿ ಮಾಡಬೇಕು ಎಂದು ಕಾಂಗ್ರೆಸ್‌ ಕೆಲ ದಿನಗಳ ಹಿಂದೆ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಅಧಿಕಾರಿಗಳ ಜೊತೆ ಗುರುವಾರ ಬಡಾವಣೆಗೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು.

ಉದ್ಯಾನದ ಜಾಗದಲ್ಲಿ ಕಸ ಬೆಳೆದಿತ್ತು, ರಸ್ತೆಗುಂಟ ಕಸ ಬಿದ್ದಿತ್ತು. ಪಾಲಿಕೆಯ ಪೌರಕಾರ್ಮಿಕ ಸಿಬ್ಬಂದಿ ಆ ಕಸವನ್ನು ತೆಗೆದು ಟ್ರ್ಯಾಕ್ಟರ್‌ಗೆ ತುಂಬುತ್ತಿದ್ದರು. ಇದನ್ನು ಕಂಡ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿ ‘ಪಾಲಿಕೆ ಆಯುಕ್ತರು ಬಂದಿದ್ದಾರೆಂದು ಕಸ ವಿಲೇವಾರಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಈ ಬಡಾವಣೆ ನಿರ್ಮಾಣವಾಗಿ ಮೂರು ದಶಕಗಳಾಗಿವೆ. 250ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ 23 ವರ್ಷಗಳಿಂದ ವಾಸವಿರುವ ಶಿವಗಂಗಾ ಲೇ ಔಟ್‌ ನಿವಾಸಿಗಳ ಸಂಘದ ಸದಸ್ಯ ರಾಜೇಂದ್ರ ಹರದಿ ‘ನಮ್ಮ ಬಡಾವಣೆಗೆ ಎಷ್ಟು ಅಗತ್ಯವೊ ಅಷ್ಟು ಒಳಚರಂಡಿ ವ್ಯವಸ್ಥೆ ಮಾಡಿಸಿಕೊಂಡಿದ್ದೆವು. ಈಗ ಅದಕ್ಕೆ ಅಕ್ಕಪಕ್ಕದ ಬಡಾವಣೆಗಳ ಮನೆಯವರೂ ಸಂಪರ್ಕ ಕಲ್ಪಿಸಿದ್ದರಿಂದ ಒತ್ತಡ ಹೆಚ್ಚಾಗಿ ಚರಂಡಿ ನೀರೆಲ್ಲಾ ರಸ್ತೆಗುಂಟ ಹರಿಯುತ್ತಿದೆ’ ಎಂದರು.

ಆಯುಕ್ತರು ಶಿವಗಂಗಾ ಲೇ ಔಟ್‌ ಬಳಿಕ ನವೀನ ಲೇಔಟ್‌, ಮದರ್‌ ತೇರಸಾ, ಚೇತನಾ ಕಾಲೊನಿ ಹಾಗೂ ಸಾಗರ ಕಾಲೊನಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಬಹುತೇಕರು ವಿದ್ಯುತ್‌ ದೀಪವಿಲ್ಲ, ಸಂಜೆ ಉದ್ಯಾನಗಳಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಬೇಕು. ಫುಟ್‌ಪಾತ್‌ ಅತಿಕ್ರಮಣವಾಗಿದ್ದು ಅದನ್ನು ಸರಿಪಡಿಸಬೇಕು ಎನ್ನುವ ಬೇಡಿಕೆಗಳನ್ನು ಮುಂದಿಟ್ಟರು.

ಪಾಲಿಕೆ ಸಹಾಯಕ ಆಯುಕ್ತ ಎಸ್‌.ಸಿ. ಬೇವೂರ, ಪಾಲಿಕೆ ಸದಸ್ಯೆ ಸುವರ್ಣಾ ಕಲ್ಲಕುಂಟ್ಲಾ, ಕಾಂಗ್ರೆಸ್‌ ಮುಖಂಡ ರಜತ್‌ ಉಳ್ಳಾಗಡ್ಡಿಮಠ, ವಿನೋದ ಪಾಟ್ವಾ, ವಿಶಾಲ ಧರ್ಮದಾಸ, ಪ್ರಸಾದ ಹುಲಮನಿ, ಜಯಶೀಲ ಬುರಟ್ ಇದ್ದರು.

ಈ ಬಡಾವಣೆಗಳ ಅಭಿವೃದ್ಧಿಗೆ ‌ಅಧಿಕಾರಿಯನ್ನು ನೇಮಿಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಕೆಲಸವಾಗದಿದ್ದರೆ ಸ್ಥಳೀಯರು ನೇರವಾಗಿ ನನಗೇ ಕರೆ ಮಾಡಲಿ.
ಡಾ. ಬಿ. ಗೋಪಾಲಕೃಷ್ಣ,
ಮಹಾನಗರ ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT