ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಕಾಮಗಾರಿಗಳಿಗೆ ವಿಘ್ನ

ಕಾರ್ಮಿಕರ ಕೊರತೆ ತೀವ್ರ, ಅವಧಿ ಮುಗಿದರೂ ಮುಗಿಯದ ಕೆಲಸ
Last Updated 6 ಜೂನ್ 2020, 15:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಘೋಷಣೆಯಾದ ಲಾಕ್‌ಡೌನ್‌ನಿಂದಾಗಿ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಿದ್ದಾರೆ. ಆದ್ದರಿಂದ ನಿಗದಿತ ಅವಧಿಯೊಳಗೆ ಮುಗಿಯಬೇಕಿದ್ದ ಸ್ಮಾರ್ಟ್‌ ಸಿಟಿಯ 18 ಕಾಮಗಾರಿಗಳಿಗೆ ವಿಘ್ನ ಎದುರಾಗಿದೆ.

ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ನಗರದ ಅಭಿವೃದ್ಧಿಗಾಗಿ 39 ಕಾಮಗಾರಿಗಳನ್ನು ಆರಂಭಿಸಿತ್ತು. ಇದರಲ್ಲಿ 18 ಕಾಮಗಾರಿಗಳು ಜೂನ್‌ನಲ್ಲಿ ಮುಗಿಯಬೇಕಿತ್ತು. ಕಾರ್ಮಿಕರ ತೀವ್ರ ಕೊರತೆ ಮತ್ತು ಕೆಲ ಫ್ಯಾಕ್ಟರಿಗಳು ಮುಚ್ಚಿದ್ದರಿಂದ ವಿಳಂಬವಾಗುತ್ತಿದೆ. ಅವಳಿ ನಗರಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒಟ್ಟು ₹1,000 ಕೋಟಿ ವೆಚ್ಚದ 58 ಯೋಜನೆಗಳನ್ನು ಅನುಮೋದನೆ ನೀಡಿತ್ತು.

ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ, ಆಂಧ್ರ ಮತ್ತು ಇನ್ನಿತರ ರಾಜ್ಯಗಳ ಕಾರ್ಮಿಕರು ಸ್ಮಾರ್ಟ್‌ ಸಿಟಿ ಯೋಜನೆಗಾಗಿ ಕೆಲಸ ಮಾಡುತ್ತಿದ್ದರು. ಇವರೆಲ್ಲ ತಮ್ಮ ಊರುಗಳಿಗೆ ಹೋಗಿದ್ದಾರೆ.

ತೋಳನಕೆರೆ ಅಭಿವೃದ್ಧಿ 2020ರ ಏಪ್ರಿಲ್ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಇದಕ್ಕಾಗಿ ನಿತ್ಯ 50 ಕಾರ್ಮಿಕರು ಕೆಲಸ ಮಾಡಿದ್ದರೆ ಇನ್ನೆರೆಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಆದರೆ, ಅಲ್ಲಿ 12 ಕಾರ್ಮಿಕರಷ್ಟೇ ಇದ್ದಾರೆ. ಜಿಲ್ಲೆಯ ಸಮಗ್ರ ಮಾಹಿತಿ ಒಂದೇ ಕಡೆ ಸಿಗುವ ಕಮಾಂಡ್‌ ಕೇಂದ್ರದಲ್ಲಿ ಕೆಲಸ ಮಾಡಲು 25 ಕಾರ್ಮಿಕರ ಅಗತ್ಯವಿದ್ದು, ಐದು ಕಾರ್ಮಿಕರಷ್ಟೇ ಇದ್ದಾರೆ. ಈ ಕಾರ್ಯ ಕೂಡ ಇದೇ ವರ್ಷದ ಫೆಬ್ರುವರಿಯಲ್ಲಿ ಮುಗಿಯಬೇಕಿತ್ತು.

ಸ್ಮಾರ್ಟ್‌ ಸಿಟಿ ಯೋಜನೆಯ ವಿಶೇಷ ಅಧಿಕಾರಿ ಎಸ್‌.ಎಚ್‌. ನರೇಗಲ್ ಪ್ರತಿಕ್ರಿಯಿಸಿ ‘ಚಾಲ್ತಿಯಲ್ಲಿರುವ ಕಾಮಗಾರಿಗಳು ಪೂರ್ಣಗೊಳ್ಳಲು ಆಯಾ ಕೆಲಸದಲ್ಲಿ ವಿಶೇಷ ಕೌಶಲ ಹೊಂದಿರುವ 422 ವಲಸೆ ಕಾರ್ಮಿಕರ ಅಗತ್ಯವಿದೆ. ಈಗ 143 ಕಾರ್ಮಿಕರಷ್ಟೇ ಇದ್ದಾರೆ. ಮುಂಗಾರು ಶುರುವಾದರೆ ಕಾಮಗಾರಿ ಇನ್ನಷ್ಟು ವಿಳಂಬವಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT