ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಮಹಿಪತಿದಾಸರ ಪಾದುಕೆ ದರ್ಶನ ಪಡೆದಿದ್ದ ಎಸ್‌ಪಿಬಿ

‘ನನ್ನನ್ನೇಕೆ ಇಷ್ಟು ಪ್ರೀತಿಸ್ತೀರಿ’ ಎಂದು ಅಭಿಮಾನಿಗಳನ್ನು ಪ್ರಶ್ನಿಸಿದ್ದ ಗಾಯಕ
Last Updated 25 ಸೆಪ್ಟೆಂಬರ್ 2020, 16:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡು ವರ್ಷಗಳ ಹಿಂದೆ ಎಸ್‌.ಪಿ. ಬಾಲಸುಬ್ರಹ್ಮಣಂ ಅವರು ವಿಜಯಪುರದ ಕಾಖಂಡಕಿಯಿಂದ ಬಂದಿದ್ದ ಮಹಿಪತಿದಾಸರ ಪಾದುಕೆಗಳ ದರ್ಶನವನ್ನು ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಪಡೆದಿದ್ದರು.

ಆಗ ಅವರು ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಕಾರ್ಯಕ್ರಮ ನಡೆದ 2018ರ ಜ. 28ರ ಮರುದಿನ ಎಂ.ಎಂ. ಜೋಶಿ ಅವರ ಮನೆಗೆ ತೆರಳಿ ಪಾದುಕೆ ದರ್ಶನ ಪಡೆದು, ಪೂಜೆಯ ವಿಧಾನಗಳನ್ನು ತಿಳಿದುಕೊಂಡಿದ್ದರು.

ಆ ನೆನಪುಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಸಂಸ್ಥೆಯ ನಿರ್ದೇಶಕ ಶ್ರೀನಿವಾಸ ಎಂ. ಜೋಶಿ ‘ಬಾಲಸುಬ್ರಹ್ಮಣಂ ಅವರು ನಮ್ಮ ಮನೆಗೆ ಬಂದು ಪಾದುಕೆಗಳ ಪೂಜಾ ವಿಧಾನ, ಸಂಸ್ಕಾರಗಳ ಬಗ್ಗೆ ಕೇಳಿ ತಿಳಿದುಕೊಂಡಿದ್ದರು. ಯಶಸ್ಸಿನ ಉತ್ತುಂಗಕ್ಕೆ ಏರಿದ್ದರೂ ಅತ್ಯಂತ ಸರಳತೆ ಮೈಗೂಡಿಸಿಕೊಂಡಿದ್ದರು. ನಮ್ಮ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಹಾಗೂ ನರ್ಸ್‌ಗಳ ಬಳಿ ತಾವೇ ಹೋಗಿ ನೀವೂ ಫೋಟೊ ತೆಗೆಸಿಕೊಳ್ಳಿ ಎಂದಿದ್ದರು’ ಎಂದು ನೆನಪಿಸಿಕೊಂಡರು.

ದೇಶಪಾಂಡೆ ನಗರದ ಹುಬ್ಬಳ್ಳಿ ಸ್ಪೋರ್ಟ್‌ ಮೈದಾನದಲ್ಲಿ ಆಗ ನಡೆದಿದ್ದ ಕಾರ್ಯಕ್ರಮದಲ್ಲಿ ಅವರು 15 ಸಾವಿರಕ್ಕೂ ಹೆಚ್ಚು ಜನರನ್ನು ಹಾಡಿನ ಮೂಲಕ ರಂಜಿಸಿದ್ದರು. ಅತ್ಯಂತ ಭಾವುಕರಾಗಿ ಮಾತನಾಡಿ ‘ನನ್ನನ್ನೇಕೆ ಇಷ್ಟು ಪ್ರೀತಿಸ್ತೀರಿ’ ಎಂದು ಪ್ರಶ್ನಿಸಿದ್ದರು. ಆಗ ಗಂಗಜ್ಜಿಯ (ಗಂಗೂಬಾಯಿ ಹಾನಗಲ್‌) ಮನೆಗೆ ತೆರಳಿ ‘ಈ ಮನೆ ದೇವಾಲಯ ಮಾದರಿಯಲ್ಲಿ ಅಭಿವೃದ್ಧಿಯಾಗಬೇಕು’ ಎಂದು ಆಸೆ ವ್ಯಕ್ತಪಡಿಸಿದ್ದರು.

ನೆನಪು: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ಧಡ, ಉಪಾಧ್ಯಕ್ಷ ವಿನಯ ಜೆ. ಜವಳಿ ಸೇರಿದಂತೆ ಹಲವರು ‘ಎಸ್‌ಪಿಬಿ ಕನ್ನಡ, ಹಿಂದಿ, ತುಳು, ಕೊಂಕಣಿ, ತಮಿಳು ಮತ್ತು ತೆಲುಗು ಸೇರಿದಂತೆ 15 ಭಾಷೆಗಳಲ್ಲಿ ಹಾಡಿದ್ದರು’ ಎಂದಿದ್ದಾರೆ.

ಶಾಸಕ ಪ್ರಸಾದ ಅಬ್ಬಯ್ಯ ‘ಗಾಯನವಷ್ಟೇ ಅಲ್ಲದೆ ನಟನೆ, ಸಂಗೀತ ಸಂಯೋಜನೆ, ಚಲನಚಿತ್ರ ನಿರ್ಮಾಣ, ಕಂಠದಾನ, ಸಂಗೀತ ಹೀಗೆ ಕಲೆಯ ಎಲ್ಲ ಕ್ಷೇತ್ರಗಳಲ್ಲಿ ಪಾರಮ್ಯ ಮೆರೆದಿದ್ದಾರೆ’ ಎಂದು ನೆನಪಿಸಿಕೊಂಡಿದ್ದಾರೆ.

ನಗರದ ಅಕ್ಕಿಹೊಂಡದ ಚಂದ್ರಶೇಖರ ರಾಜಯೋಗಿಂದ್ರ ಸ್ವಾಮೀಜಿ ‘ನೀನೆ ಸಾಕಿದಾ ಗಿಣಿ’ ಸೇರಿದಂತೆ ಹಲವಾರು ಹಾಡುಗಳ ಮೂಲಕ ಜನರ ಮನ ಗೆದ್ದ ಗಾಯಕ’ ಎಂದು ಬಣ್ಣಿಸಿದ್ದಾರೆ.

ಶ್ರದ್ಧಾಂಜಲಿ: ಮೂರು ಸಾವಿರ ಮಠದ ಎಸ್‌ಜೆಎಂವಿ ಎಸ್‌ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಂಗೀತ ವಿಭಾಗದಿಂದ ಬಾಲಸುಬ್ರಹ್ಮಣಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಪಿಬಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಲಿಂಗರಾಜ ಅಂಗಡಿ, ಸಂಗೀತ ವಿಭಾಗದ ಮುಖ್ಯಸ್ಥೆ ಜ್ಯೋತಿಲಕ್ಷ್ಮಿ ಡಿ.ಪಿ., ಸಿಸಿಲಿಯಾ ಡಿಕ್ರೂಜ್‌, ಗುರುರಾಜ ನವಲಗುಂದ, ಸುಪ್ರಿಯಾ ಮಲಶೆಟ್ಟಿ, ಮಹಾದೇವ ಹರಿಜನ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT