ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಕರ್ಮಿ ಡಾ.ಪ್ರಕಾಶ ಗರುಡರಿಗೆ 'ಡಂಬಳ ಜೀವಮಾನ ಸಾಧನೆ ಪ್ರಶಸ್ತಿ'

Last Updated 13 ಸೆಪ್ಟೆಂಬರ್ 2021, 8:25 IST
ಅಕ್ಷರ ಗಾತ್ರ

ಧಾರವಾಡ: ಹಣಮಂತರಾವ ಗೋವಿಂದ ಡಂಬಳ ನೆನಪಿನಪ್ರಸಕ್ತ ಸಾಲಿನ ವಾರ್ಷಿಕ ರಂಗ ಪ್ರಶಸ್ತಿಯು ಹಿರಿಯ ರಂಗಕರ್ಮಿ ಡಾ.ಪ್ರಕಾಶ ಶ್ರೀಪಾದರಾವ ಗರುಡ ಅವರಿಗೆ ಲಭಿಸಿದೆ.

ಡಾ. ಗರುಡ ಅವರ ಜೀವಮಾನ ಸಾಧನೆಗೆ ಈ ಪ್ರಶಸ್ತಿ ಲಭಿಸಿದೆ. ಧಾರವಾಡದ ಸ್ನೇಹ ಪ್ರತಿಷ್ಠಾನ ಆಯ್ಕೆ ಸಮಿತಿ ಸರ್ವಾನುಮತದಿಂದ ಈ ಆಯ್ಕೆ ಮಾಡಿದೆ. ಪ್ರಶಸ್ತಿಯು 10 ಸಾವಿರ ರೂಪಾಯಿ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ಪ್ರಕಾಶ ಗರುಡ ಅವರು ರಂಗಭೂಮಿ ನಟ, ನಾಟಕಕಾರ, ಗರುಡ ನಾಟಕ ಕಂಪನಿ ಸ್ಥಾಪಕ ಗರುಡ ಸದಾಶಿವರಾಯರ ಮೊಮ್ಮಗ ಮತ್ತು ನಟ ಶ್ರೀಪಾದರಾವ ಗರುಡರ ಮಗ.

ರಂಗಭೂಮಿ, ನಟನೆ, ನಿರ್ದೇಶನ, ಸಂಘಟನೆ, ಗೊಂಬೆ ಆಟ ಮೊದಲಾದ ಕಲೆಗಳನ್ನು ವೃತ್ತಿಯನ್ನಾಗಿ ಮಾಡಿಕೊಂಡಿರುವ ಪ್ರಕಾಶ ಗರುಡ ಬಿ.ಎಸ್‌ಸಿ ಪದವೀಧರ. ಮಧುರೈ ವಿಶ್ವವಿದ್ಯಾಲಯದಿಂದ ಥಿಯೇಟರ್ ಆರ್ಟ್ಸ್‌ದಲ್ಲಿ ಪ್ರಥಮ ರ‌್ಯಾಂಕಿನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಕಾಶ ಗರುಡ ಹೆಗ್ಗೋಡು ನೀನಾಸಂ ಡಿಪ್ಲೊಮಾ ಪದವೀಧರರೂ ಹೌದು.

1997 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ"ವೃತ್ತಿ ರಂಗಭೂಮಿಯ ಸ್ವರೂಪ" ಕುರಿತು ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದರು. ಡಾ.ಗಿರಡ್ಡಿ ಗೋವಿಂದರಾಜ ಮಾರ್ಗದರ್ಶಕರಾಗಿದ್ದರು.

ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ, ರೆಪರ್ಟರಿ ರಂಗಭೂಮಿಯ ವಿವಿಧ ಪ್ರಕಾರಗಳಲ್ಲಿ ಅನುಭವ ಹೊಂದಿರುವ ಪ್ರಕಾಶ ನೀನಾಸಂ ತಿರುಗಾಟದ ಮುಖ್ಯ ನಟನಾಗಿ ಗಿರೀಶ್ ಕಾರ್ನಾಡ್‌ರ ತುಘಲಕ್ ನಾಟಕದಲ್ಲಿ ತುಘಲಕ್‌ನಾಗಿ 50ಕ್ಕೂ ಹೆಚ್ಚು ಕಡೆ ರಾಜ್ಯಾದ್ಯಂತ ತಿರುಗಾಡಿ ಮಿಂಚಿದರು.

ಮೃಚ್ಛಕಟಿಕ, ದೊರೆ ಈಡಿಪಸ್, ಅಂಜುಮಲ್ಲಿಗೆ, ಕದಡಿದ ನೀರು, ಜೈಸಿದನಾಯ್ಕ, ಸಾಯೋಅಟ ಮೊದಲಾದ 60ಕ್ಕೂ ಹೆಚ್ಚಿನ ನಾಟಕಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ. ಮಕ್ಕಳ ನಾಟಕ, ವೃತ್ತಿ ರಂಗಭೂಮಿ ನಾಟಕಗಳನ್ನು ಸಹ ನಿರ್ದೇಶನ ಮಾಡಿರುವ ಪ್ರಕಾಶ ಕೆಲ ನಾಟಕಗಳಲ್ಲಿ (ವಿಷಮ ವಿವಾಹ, ಜಗಜ್ಯೋತಿ ಬಸವೇಶ್ವರ, ಪಾದುಕಾ ಪಟ್ಟಾಭಿಷೇಕ, ರಕ್ತರಾತ್ರಿ) ನಾಯಕ ಪಾತ್ರಗಳನ್ನು ಕೂಡ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ. ರಂಗ ತರಬೇತಿ, ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಭಾಗವಹಿಸಿದ್ದಾರೆ.

ಸ್ವತಃ ಲೇಖಕರು ಆಗಿರುವ ಗರುಡರು ಮನೋಹರ ಗ್ರಂಥಮಾಲೆಯ ಮೂಲಕ ಗರುಡ ಸದಾಶಿವರಾಯರ ಸಮಗ್ರ ನಾಟಕಗಳನ್ನು ಹೊರತಂದಿದ್ದಾರೆ. ಅವರ ಪ್ರಮುಖ ಕೃತಿಗಳು 'ಕೆ ವಿ ಸುಬ್ಬಣ್ಣ', 'ಬೆತ್ತಲಾಟ' ನಾಟಕಗಳು, ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ' ಗರುಡ ಸದಾಶಿವರಾಯರು' ಎಂಬ ಕೃತಿ.

ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದ ಪ್ರಕಾಶ ಧಾರವಾಡ ಗೊಂಬೆ ಮನೆ ವ್ಯವಸ್ಥಾಪಕ ಟ್ರಸ್ಟಿ ಕೂಡಾ ಹೌದು.

ಹೀಗೆ ಹಲವಾರು ಬಗೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ರಂಗಭೂಮಿ, ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸದಾ ನಿರತರಾಗಿರುವ ಪ್ರಕಾಶ ಗರುಡರ ಸಾಧನೆಯನ್ನು ಗಮನಿಸಿ ಹಣಮಂತರಾವ ಡಂಬಳ ಜೀವಮಾನ ಪ್ರಶಸ್ತಿ ಘೋಷಣೆಯಾಗಿದೆ.
ಇದೇ 15ರಂದು ಧಾರವಾಡ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT