ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಾಪುರ ಓಣಿಯ ಕನ್ನಡ ಸರ್ಕಾರಿ ಶಾಲೆಗಿಲ್ಲ ಸುರಕ್ಷೆಯ ವ್ಯವಸ್ಥೆ

Last Updated 27 ಜನವರಿ 2020, 11:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕೈ ಮುಗಿದು ಬಾ, ಇದು ವಿದ್ಯಾ ದೇಗುಲ’ ಎಲ್ಲ ಶಾಲೆಯ ದ್ವಾರ ಬಾಗಿಲಲ್ಲಿ ಸಾಮಾನ್ಯವಾಗಿ ಈ ವಾಕ್ಯವಿರುತ್ತದೆ. ಆದರೆ, ಇದರ ಅರ್ಥ ಗೊತ್ತಿಲ್ಲದವರು, ಆ ದೇಗುಲವನ್ನೇ ತಮ್ಮ ಮೋಜು ಮಸ್ತಿಗೆ, ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಪಾಠ ಕೇಳುವ ವಿದ್ಯಾರ್ಥಿಗಳ ಮೇಲೂ ಕಲ್ಲೆಸೆದು ವಿಕೃತಾನಂದ ಪಡೆಯುತ್ತಾರೆ.

ಹುಬ್ಬಳ್ಳಿಯ ವೀರಾಪುರ ಓಣಿಯ ಕನ್ನಡ ಸರ್ಕಾರಿ ಶಾಲೆ ನಂ. 4. ಅಂದಾಜು 500 ವಿದ್ಯಾರ್ಥಿಗಳು ಓದುತ್ತಾರೆ. ಮೂಗುಮುಚ್ಚಿಕೊಂಡೇ ಶಾಲೆಗೆ ಬರಬೇಕು. ಶಾಲಾ ಸಿಬ್ಬಂದಿ, ದಿನವೂ ಮಲಮೂತ್ರ ಸ್ವಚ್ಛಗೊಳಿಸಲು ಸಿದ್ಧರಾಗಿಯೇ ಬರಬೇಕು. ದೂರು ಸಲ್ಲಿಸಲು ಸನ್ನದ್ಧರಾಗಿರಲೇಬೇಕು.

ಹೌದು. ಈ ಶಾಲೆ, ಸುತ್ತಲಿನ ಕಿಡಿಗೇಡಿಗಳಿಗೆ ಮೋಜು ಮಸ್ತಿಯ ಕೇಂದ್ರವಾಗಿದೆ. ಶಾಲೆಯ ಕಾಂಪೌಂಡ್‌ ಜಿಗಿದು ಒಳ ಬಂದು ಮದ್ಯ ಸೇವನೆ ಮಾಡುತ್ತಾರೆ. ಮಟನ್‌, ಚಿಕನ್‌ ತಂದು ಅಲ್ಲಿಯೇ ಬೇಯಿಸಿ ಸವಿಯುತ್ತಾರೆ. ಸಿಗರೇಟು ಸೇದಿ ಅಲ್ಲಿಯೇ ಬಿಸಾಡುತ್ತಾರೆ. ತಂಬಾಕು, ಗುಟಕಾ ತಿಂದು ಶಾಲೆಯ ಗೋಡೆಗೆ ಉಗುಳುತ್ತಾರೆ. ವರಾಂಡದಲ್ಲಿಯೇ ಮಲ, ಮೂತ್ರ ವಿಸರ್ಜಿಸಿ ಮನೆಗೆ ತೆರಳುತ್ತಾರೆ.

ದಸರಾ ಹಾಗೂ ಬೇಸಿಗೆ ರಜೆಗೆ ತೆರಳುವಾಗ ಬೆಂಡಿಗೇರಿ ಪೊಲೀಸರಿಗೆ ಮಾಹಿತಿ ನೀಡಿ ಹೋಗುತ್ತೇವೆ. ಆದರೂ, ಬಾಗಿಲು ಮುರಿಯುವುದು, ಸಾಮಗ್ರಿಗಳ ಕಳುವು ಮಾಡುವುದು ಮಾತ್ರ ನಿಂತಿಲ್ಲ ಎನ್ನುವುದು ಶಿಕ್ಷಕರ ಆರೋಪ.

ಕಲ್ಲು ಬೀಸುತ್ತಾರೆ: ‘ಮಧ್ಯಾಹ್ನದ ವೇಳೆ ಮಕ್ಕಳಿಗೆ ಪಾಠ ಮಾಡುವಾಗ ಕಿಟಕಿಯಿಂದಲೂ ಕಲ್ಲುಗಳು ತೂರಿ ಬರುತ್ತವೆ. ಭದ್ರತೆಯೇ ಇಲ್ಲವಾಗಿದೆ’ ಎಂದು ಶಿಕ್ಷಕಿ ಜಯಶ್ರೀ ಮುರುಗೋಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಲ್ಕು ತಿಂಗಳ ಹಿಂದೆ ಹೈಟೆಕ್‌ ಶೌಚಾಲಯದ ಕಟ್ಟಡ ಉದ್ಘಾಟನೆಯಾಗಿದೆ. ಅದಕ್ಕೆ ಹೊರಗಡೆ ಹಾಕಿರುವ ಟೈಲ್ಸ್‌ಗಳನ್ನೇ ಕಿತ್ತುಹಾಕಿದ್ದಾರೆ. ಅದರ ಬಾಗಿಲು ಮರಿದು, ಹೊಲಸು ಮಾಡಿ ಹೋಗಿದ್ದರು. ಸ್ಮಾರ್ಟ್‌ ಕ್ಲಾಸ್‌ ರೂಮ್‌ನ ಬಾಗಿಲನ್ನು ಸಹ ಮುರಿಯಬಹುದು ಎಂದು, ಕಬ್ಬಿಣದ ಬಾಗಿಲು ಮಾಡಿ ಭದ್ರಪಡಿಸಿದ್ದೇವೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT