ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಧಾರವಾಡ: ‘ಸ್ಮಾರ್ಟ್’ ಆದರೂ ತಪ್ಪಿಲ್ಲ ನೀರಿನ ಬವಣೆ

ಹೆಚ್ಚುತ್ತಿದೆ ಮಹಾನಗರದ ಬೆಳವಣಿಗೆ – ಮೂಲಸೌಕರ್ಯದ ನಡುವಿನ ಅಸಮತೋಲನ
Last Updated 7 ಜೂನ್ 2022, 12:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರಗಳಾದ ಹುಬ್ಬಳ್ಳಿ–ಧಾರವಾಡ, ಬೆಂಗಳೂರು ನಂತರದ ಎರಡನೇ ಅತಿ ದೊಡ್ಡ ಮಹಾನಗರ. 2011ರ ಜನಗಣತಿ ಪ್ರಕಾರ, ಇಲ್ಲಿನ ಜನಸಂಖ್ಯೆ 13 ಲಕ್ಷ ದಾಟಿದೆ. ಮಹಾನಗರದ ವ್ಯಾಪ್ತಿಯೂ ದಿನದಿಂದ ದಿನಕ್ಕೆ ಹಿಗ್ಗುತ್ತಿದ್ದು, ಈಗಮನಾರ್ಹ ಬೆಳವಣಿಗೆ ಮತ್ತು ಮೂಲಸೌಕರ್ಯದ ನಡುವಿನ ಅಂತರ ಮಾತ್ರ ಹೆಚ್ಚುತ್ತಲೇ ಇದೆ.ಸ್ಮಾರ್ಟ್ ಸಿಟಿ ಹೆಗ್ಗಳಿಕೆ ಇದ್ದರೂ, ನೀರಿಗಿಲ್ಲಿ ಪರದಾಟ ತಪ್ಪಿಲ್ಲ.

ದಶಕಗಳ ಹಿಂದೆ ಎರಡೂ ನಗರಗಳ ಜನ ಸ್ಥಳೀಯ ಕೆರೆಗಳ ನೀರನ್ನೇ ಎಲ್ಲದಕ್ಕೂ ಬಳಸುತ್ತಿದ್ದರು. ನಂತರ ಮಹಾನಗರದ ಅಭಿವೃದ್ಧಿಗೆ ಬಲಿಯಾದ ಆ ಕೆರೆಗಳ ಕುರುಹು ಇದೀಗ ಅಲ್ಲೋ ಇಲ್ಲೋ ಒಂದೊಂದು ಇರುವುದನ್ನು ಬಿಟ್ಟರೆ, ಬಹುತೇಕ ಮಾಯವಾಗಿವೆ. ಜನರೂ ಕೆರೆಗಳ ಬದಲಿಗೆ, ದೂರದ ಜಲಾಶಯಗಳ ನೀರನ್ನು ಈಗ ಅವಲಂಬಿಸಿದ್ದಾರೆ.

ಎರಡೇ ನೀರಿನ ಮೂಲ

ಅವಳಿ ನಗರಕ್ಕೆ ಸದ್ಯ ಇರುವ ನೀರಿನ ಎರಡು ಮೂಲಗಳೆಂದರೆ ಮಲಪ್ರಭಾ ಜಲಾಶಯ ಮತ್ತು ನೀರಸಾಗರ ಜಲಾಶಯ. 2016ಕ್ಕೂ ಮುಂಚೆ ಬರಗಾಲದ ತೀವ್ರತೆ ಹೆಚ್ಚಾದಾಗ ನೀರಸಾಗರವೂ ಬರಿದಾಯಿತು. ಹಲವೆಡೆ ಎರಡು ವಾರಕ್ಕೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ನಂತರದ ವರ್ಷದಿಂದ ಮಳೆ ಹೆಚ್ಚಾಗಿದ್ದರಿಂದ ನೀರಿನ ಹಾಹಾಕಾರ ಸ್ವಲ್ಪಮಟ್ಟಿಗೆ ತಗ್ಗಿತು.

‘ಇಂದಿಗೂ ಮಹಾನಗರದ ಹಲವು ಪ್ರದೇಶಗಳಿಗೆ ಕನಿಷ್ಠ ಎರಡ್ಮೂರು ದಿನದಿಂದಿಡಿದು ಗರಿಷ್ಠ ಏಳು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ನಳ ಮತ್ತು ಟ್ಯಾಂಕರ್‌ಗಳ ಮುಂದೆ ಜನ ಬಿಂದಿಗೆ ಹಿಡಿದು ನಿಲ್ಲುವುದು ಇನ್ನೂ ತಪ್ಪಿಲ್ಲ. ಸದ್ಯ ನೀರಸಾಗರದ 35.54 ಎಂಎಲ್‌ಡಿ ನೀರು ಹಳೇ ಹುಬ್ಬಳ್ಳಿಯ ದಾಹ ನೀಗಿಸುತ್ತಿದ್ದರೆ, ಧಾರವಾಡ ಸೇರಿದಂತೆ ಉಳಿದ ಭಾಗಕ್ಕೆ ಮಲಪ್ರಭಾದ 209.40 ಎಂಎಲ್‌ಡಿ ನೀರು ಆಸರೆಯಾಗಿದೆ’ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.

‘ಈ ಎರಡು ನೀರಿನ ಮೂಲಗಳ ಜೊತೆಗೆ, ಪೈಪ್‌ಲೈನ್ ಮತ್ತು ನಳ ಸಂಪರ್ಕ ಇಲ್ಲದ ಕಡೆಗೆ ಟ್ಯಾಂಕರ್‌ಗಳಲ್ಲಿ ನೀರು ಒದಗಿಸಲಾಗುತ್ತಿದೆ. ಕೆಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ತಲೆ ಎತ್ತಿವೆ. ಕುಡಿಯುವ ನೀರನ್ನು ಕ್ಯಾನ್‌ಗಳಲ್ಲಿ ಪೂರೈಸುವ ಜಾಲವು ಸಕ್ರಿಯವಾಗಿದೆ’ ಎನ್ನುತ್ತಾರೆ ಅವರು.

ನನಸಾಗದ ಕನಸು

2015ರಲ್ಲಿ ಹುಬ್ಬಳ್ಳಿಯ 4 ವಾರ್ಡ್‌ಗಳಿಗೆ ನಿರಂತರ ನೀರು ಪೂರೈಕೆಯೊಂದಿಗೆ ಎಲ್ಲಾ ವಾರ್ಡ್‌ಗಳಿಗೂ 24/7 ನೀರು ಒದಗಿಸುವ ಕನಸು ಚಿಗುರೊಡೆಯಿತು. ವಿಶ್ವಬ್ಯಾಂಕ್ ನೆರವಿನೊಂದಿಗೆ ₹1,207 ಕೋಟಿ ವೆಚ್ಚದಲ್ಲಿ ಆರಂಭಗೊಂಡ ಯೋಜನೆಯು ಏಳು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ.

ಸದ್ಯ 22 ವಾರ್ಡ್‌ಗಳಿಗೆ ನಿತ್ಯ ನೀರು ಹರಿಯುತ್ತಿದೆ. ಇದೀಗ ಎಲ್ ಆ್ಯಂಡ್ ಟಿ ಕಂಪನಿಗೆ ಮರು ಟೆಂಡರ್ ನೀಡಲಾಗಿದೆ. ಉಳಿದ 62 ವಾರ್ಡ್‌ಗಳಿಗೆ ನೀರು ಪೂರೈಸಲು ಅವಳಿನಗರದಲ್ಲಿ 1,690 ಕಿ.ಮೀ. ಉದ್ದದ ಪೈಪ್‌ಲೈನ್‌ ಕಾಮಗಾರಿ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT