ಸೋಮವಾರ, ಜನವರಿ 24, 2022
28 °C
ಕಿಮ್ಸ್‌ಗೆ ಭೇಟಿ ನೀಡಿದ ಕಾಂಗ್ರೆಸ್‌ ನಿಯೋಗಕ್ಕೆ ಅರುಣ್‌ ಮಾಹಿತಿ

ಕೋವಿಡ್‌ ಚಿಕಿತ್ಸೆಗೆ ಸಾವಿರ ಹಾಸಿಗೆ ಮೀಸಲು- ಕಿಮ್ಸ್‌ ವೈದ್ಯಕೀಯ ಅಧೀಕ್ಷಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್‌ನ ಮೂರನೆ ಅಲೆ ಎದುರಿಸಲು ಕಿಮ್ಸ್‌ ಸಜ್ಜಾಗಿದ್ದು, ನಮ್ಮಲ್ಲಿರುವ ಒಟ್ಟು 2,000 ಹಾಸಿಗೆಗೆಳ ಪೈಕಿ ಒಂದು ಸಾವಿರ ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ಮೀಸಲಿಡಲಾಗಿದೆ ಎಂದು ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಸಿ. ಅರುಣಕುಮಾರ್‌ ಹೇಳಿದರು.

ಕೋವಿಡ್‌ ಹಾಗೂ ಓಮೈಕ್ರಾನ್‌ ಎದುರಿಸಲು ಕಿಮ್ಸ್‌ ಮಾಡಿಕೊಂಡ ತಯಾರಿ ಬಗ್ಗೆ ಪರಿಶೀಲನೆ ಮಾಡಲು ಬುಧವಾರ ಆಸ್ಪತ್ರೆಗೆ ಭೇಟಿ ನೀಡಿದ ಕಾಂಗ್ರೆಸ್‌ ತಂಡಕ್ಕೆ ಅವರು ಈ ಮಾಹಿತಿ ನೀಡಿದರು.

‘ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಗೆ; ಕೋವಿಡ್‌ ಅಲ್ಲದ ರೋಗಿಗಳ ಚಿಕಿತ್ಸೆಗೂ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ‘ವೇದಾಂತ್‌ ಕೇರ್ಸ್‌ ಫೀಲ್ಡ್‌’ ಆಸ್ಪತ್ರೆಯಲ್ಲಿ 100, ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ 200 ಹಾಸಿಗೆಗಳನ್ನು ಮೊದಲು ಬಳಕೆ ಮಾಡಲಾಗುವುದು’ ಎಂದು ತಿಳಿಸಿದರು.

‘ಕಿಮ್ಸ್‌ನಲ್ಲಿ 1500 ಆಮ್ಲಜನಕ ಸೌಲಭ್ಯ ಹೊಂದಿರುವ ಹಾಸಿಗೆಗಳಿದ್ದು, 150 ಐಸಿಯು ಹಾಸಿಗೆಗಳಿಗೆ ವೆಂಟಿಲೇಟರ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರೋಗಿಗಳಿಗೆ ಒದಗಿಸಲು ಅಗತ್ಯವಾಗಿ ಬೇಕಾದಷ್ಟು ಆಮ್ಲಜನಕ ಸಂಗ್ರಹಣಾ ಸಾಮರ್ಥ್ಯ ನಮ್ಮಲ್ಲಿದೆ’ ಎಂದು ವಿವರಿಸಿದರು. ಕಿಮ್ಸ್‌ ಉಪ ವೈದ್ಯಕೀಯ ಅಧೀಕ್ಷಕ ರಾಜಶೇಖರ ದ್ಯಾಬೇರಿ, ಮುಖ್ಯ ವೈದ್ಯಕೀಯ ಅಧಿಕಾರಿ ಸಿದ್ದೇಶ್ವರ ಕಟಕೋಳ ಇದ್ದರು.   

ನಿಯೋಗದಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ರಜತ್‌ ಉಳ್ಳಾಗಡ್ಡಿಮಠ, ನಾಗರಾಜ ಗೌರಿ, ನಿರಂಜನ ಹಿರೇಮಠ, ಇಮ್ರಾನ್‌ ಯಲಿಗಾರ, ಶಾಹಿಮಾನ್‌ ಮುಜಾಹಿದ್‌ ಇದ್ದರು. ಇವರ ತಂಡ ವೇದಾಂತ್‌ ಫೀಲ್ಡ್‌ ತಾತ್ಕಾಲಿಕ ಆಸ್ಪತ್ರೆಗೆ ಭೇಟಿ ನೀಡಿ ‘ಇದು ಸ್ವಚ್ಛವಾಗಿಲ್ಲ. ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು