ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಸರಣಿ ವಾಹನ ಕಳ್ಳತನ ಕೇಸ್: ಮೂವರ ಬಂಧನ, 9 ದ್ವಿಚಕ್ರ ವಾಹನ ವಶಕ್ಕೆ

ಕಳ್ಳತನದ ಆರೋಪಿಗಳು ಕೇಶ್ವಾಪುರ ಪೊಲೀಸ್ ಬಲೆಗೆ
Last Updated 3 ಡಿಸೆಂಬರ್ 2022, 5:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ರೈಲ್ವೆ ಯೂನಿಯನ್ ಕಚೇರಿ ಬಳಿ ನಡೆದಿದ್ದ ಸರಣಿ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರನ್ನು ಬಂಧಿಸಿರುವ ಕೇಶ್ವಾಪುರ ಠಾಣೆ ಪೊಲೀಸರು ₹3 ಲಕ್ಷ ಮೌಲ್ಯದ 9 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕಚೇರಿ ಬಳಿ ನಿಲ್ಲಿಸಿದ್ದ ವಾಹನಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಗಸ್ತು ವ್ಯವಸ್ಥೆ ಮಾಡಲಾಗಿತ್ತು. ಸಂಶಯಾಸ್ಪದ ಹಳೆಯ ಬೈಕ್‌ಗಳ ದಾಖಲೆಗಳನ್ನು ಪರಿಶೀಲಿಸುವಾಗ ಆರೋಪಿಗಳು ಸಿಕ್ಕಿ ಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಳೆಯ ವಾಹನಗಳಿಗೆ ಸೂಕ್ತ ದಾಖಲೆಗಳಿರುವುದಿಲ್ಲ. ಅವುಗಳನ್ನು ಕಳ್ಳತನ ಮಾಡಿದರೆ, ಮಾಲೀಕರು ದೂರು ನೀಡುವುದಿಲ್ಲ ಎಂದುಕೊಂಡಿದ್ದ ಆರೋಪಿಗಳು, ನಕಲಿ ಕೀ ಬಳಸಿ ಹಳೆ ದ್ವಿಚಕ್ರ ವಾಹನಗಳನ್ನೇ ಕಳ್ಳತನ ಮಾಡುತ್ತಿದ್ದರು.

ಕಳವು ಮಾಡಿದ ಬೈಕ್‌ಗಳನ್ನು ರೈಲ್ವೆ ಇಲಾಖೆಯಲ್ಲಿ ಕಳ್ಳತನ ಮಾಡಿದ ಕಬ್ಬಿಣವನ್ನು ಸಾಗಿಸಲು ಬಳಸುತ್ತಿದ್ದರು. ಆರೋಪಿಗಳು ಬೇರೆ ಠಾಣೆಗಳ ವ್ಯಾಪ್ತಿಯಲ್ಲೂ ಕೃತ್ಯ ಎಸಗಿದ್ದಾರೆಯೇ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇನ್‌ಸ್ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದಲ್ಲಿ ಪಿಎಸ್‌ಐಗಳಾದ ಸದಾಶಿವ ಕಾನಟ್ಟಿ, ಕೆ.ವಿ. ಚಂದಾವರಕರ ಹಾಗೂ ಸಿಬ್ಬಂದಿ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ರೌಡಿ ಬಂಧನ: ಮಿಲ್ಲತ್ ನಗರದ ಪ್ರಿಯದರ್ಶಿನಿ ಕಾಲೊನಿ ಬಳಿ ಚಾಕು ಹಿಡಿದುಕೊಂಡು ಓಡಾಡುತ್ತಿದ್ದ ಫಜಲ್ ಪೂಣೆವಾಲೆ ಎಂಬ ರೌಡಿಯನ್ನು ಬಂಧಿಸಿರುವ ಬೆಂಡಿಗೇರಿ ಠಾಣೆ ಪೊಲೀಸರು, ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

₹2.42 ಲಕ್ಷ ವಂಚನೆ: ನಗರದ ಷಾ ಬಜಾರಿನಲ್ಲಿರುವ ಪಿ.ಎನ್. ಜ್ಯುವೆಲರ್ಸ್ ಅಂಗಡಿಯ ರೂಪೇಶ ಎಂಬಾತ ಮೂವರು ಗ್ರಾಹಕರೊಬ್ಬರಿಂದ ₹2.42 ಲಕ್ಷ ಮೌಲ್ಯದ ಹಳೆಯ ಚಿನ್ನಾಭರಣಗಳನ್ನು ಪಡೆದು ಪರಾರಿಯಾಗಿದ್ದಾರೆ. ಹಳೆಯ ಆಭರಣಗಳಿಗೆ ಪ್ರತಿಯಾಗಿ ಹೊಸ ಆಭರಣಗಳನ್ನು ಮಾಡಿಸಿಕೊಡುವುದಾಗಿ ನಂಬಿಸಿ ರೂಪೇಶ್ ಕೃತ್ಯ ಎಸಗಿದ್ದಾನೆ. ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲು ಹತ್ತುವಾಗ ಬಿದ್ದು ಸಾವು

ಚಲಿಸುತ್ತಿದ್ದ ರೈಲನ್ನು ಹತ್ತುವಾಗ ಕಾಲು ಜಾರಿ ಕೆಳಕ್ಕೆ ಬಿದ್ದು ಪ್ರಯಾಣಿಕರೊಬ್ಬರು ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯ ದಕ್ಷಿಣ ರೈಲು ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಬೆಂಗಳೂರಿನ ವಿನೋಬಾ ನಗರದ ಪ್ರಕಾಶ್ ಬಿ. (62) ಮೃತರು.

ಧಾರವಾಡದ ಸಂಬಂಧಿಕರ ಮನೆಯ ಮದುವೆಯಲ್ಲಿ ಭಾಗವಹಿಸಲು ಪ್ರಕಾಶ್ ಅವರು, ಬೆಂಗಳೂರು-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನಲ್ಲಿ ಕುಟುಂಬದೊಂದಿಗೆ ಬರುತ್ತಿದ್ದರು. ರೈಲು ನಿಲ್ದಾಣದಲ್ಲಿ ನಿಂತಾಗ, ತಿನ್ನುವುದಕ್ಕೆ ಏನಾದರೂ ತರಲು ಅವರು ಕೆಳಕ್ಕಿಳಿದಿದ್ದರು.

ವಾಪಸ್ ಬರುವುದಕ್ಕೆ ಮುಂಚೆ ರೈಲು ನಿಧಾನವಾಗಿ ಮುಂದಕ್ಕೆ ಸಾಗತೊಡಗಿದೆ. ಚಲಿಸುತ್ತಿದ್ದ ರೈಲನ್ನು ಹತ್ತಲು ಮುಂದಾದ ಅವರು, ಕಾಲು ಜಾರಿ ಪ್ಲಾಟ್‌ಫಾರಂ ಮತ್ತು ರೈಲಿನ ನಡುವಿನ ಜಾಗದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT