ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಚು ಸರಿದೂಗಿಸಲು ಬೆಲೆ ಏರಿಕೆ ಪ್ರಸ್ತಾವನೆ

ಬಿಆರ್‌ಟಿಎಸ್ ಸೇರಿದಂತೆ ವಾಯವ್ಯ ಸಾರಿಗೆ ಹೊರೆ ತಗ್ಗಿಸಲು ಕ್ರಮ
Last Updated 25 ನವೆಂಬರ್ 2019, 13:39 IST
ಅಕ್ಷರ ಗಾತ್ರ

ಧಾರವಾಡ: ಇಂಧನ ಬೆಲೆ ಏರಿಕೆ ಹಾಗೂ ಏರಿರುವ ಇನ್ನಿತರ ಖರ್ಚುಗಳನ್ನು ಸರಿದೂಗಿಸುವ ನಿಟ್ಟಿನಲ್ಲಿಬಿಆರ್‌ಟಿಎಸ್ ಸೇರಿದಂತೆ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳ ಟಿಕೆಟ್ ದರವನ್ನು ಶೇ 18ರಷ್ಟು ಹೆಚ್ಚಿಸಲು ಸಂಸ್ಥೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಕಳೆದ ಒಂದು ವರ್ಷದಲ್ಲಿ ಇಂಧನ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದೆ. ಜತೆಗೆ ಪ್ರಯಾಣಿಕರಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬೆಲೆ ಏರಿಕೆ ಅನಿವಾರ್ಯ ಎಂದಿರುವ ಸಂಸ್ಥೆ, ಹವಾನಿಯಂತ್ರಿತ ಬಸ್ಸುಗಳ ದರವನ್ನೇ ಬಿಆರ್‌ಟಿಎಸ್‌ಗೆ ನಿಗದಿಪಡಿಸುವಂತೆ ಕೋರಿದೆ.

ಈ ಕುರಿತು ಪ್ರತಿಕ್ರಿಯಿಸಿದ ಎನ್‌ಡಬ್ಲೂಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್, ‘ಬಿಆರ್‌ಟಿಎಸ್‌ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಆರು ತಿಂಗಳಲ್ಲಿ ಪ್ರತಿನಿತ್ಯದ ಸರಾಸರಿ ಪ್ರಯಾಣಿಕರ ಸಂಖ್ಯೆ ಒಂದು ಲಕ್ಷ ತಲುಪಿದೆ. ಈ ಹಿಂದೆ ಇದ್ದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಗರ ಸಾರಿಗೆ ಬಸ್ಸುಗಳಿಗೆ ಹೋಲಿಸಿದಲ್ಲಿ ಶೇ 47ರ ದರದಲ್ಲಿ ಇದರ ವೃದ್ಧಿ ಇದೆ. ಆದರೆ ಇದರ ಖರ್ಚೂ ಹೆಚ್ಚಾಗಿದೆ’ ಎಂದರು.

‘ಸದ್ಯ ಪ್ರತಿ ಕಿಲೋ ಮೀಟರ್ ಗಳಿಕೆ ₹28ರಷ್ಟಿದೆ. ಹೀಗಾಗಿ ಪ್ರತಿ ದಿನದ ಗಳಿಕೆ ₹13ಲಕ್ಷ ಇದೆ. ವರ್ಷಕ್ಕೆ ಬಿಆರ್‌ಟಿಎಸ್ ಆದಾಯ ₹3.8ಕೋಟಿ ಇದ್ದರೆ, ಖರ್ಚು ₹4.5ಕೋಟಿಯಷ್ಟಿದೆ. ₹70ಲಕ್ಷದ ವ್ಯತ್ಯಾಸವನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ. ಇದಕ್ಕಾಗಿ ಬೆಲೆ ಏರಿಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ’ ಎಂದರು.

‘ಬೆಂಗಳೂರು ನಗರ ಸಂಚಾರದಲ್ಲಿರುವ ಹವಾನಿಯಂತ್ರಿತ ಬಸ್ಸುಗಳ ಪ್ರತಿ ಕಿ.ಮೀ. ದರ 3.46ರಷ್ಟಿದೆ. ಆದರೆ ಬಿಆರ್‌ಟಿಎಸ್‌ ದರ ಅತಿ ಕಡಿಮೆ ₹1.10ರಷ್ಟಿದೆ. ಹೀಗಾಗಿ ಈ ವ್ಯತ್ಯಾಸವನ್ನು ಟಿಕೆಟ್‌ ದರ ಹೆಚ್ಚಳದಿಂದ ಪಡೆಯುವ ಯೋಜನೆ ಇದೆ. ಹೀಗಾದಲ್ಲಿ ಈ ಯೋಜನೆಗೆ ಅಗತ್ಯವಿರುವ ಬೂಮ್‌ ಬ್ಯಾರಿಯರ್‌, ಪ್ರಯಾಣಿಕರಿಗೆ ಇತರ ಸೌಕರ್ಯ, ಯೋಜನೆಯ ವಿಸ್ತರಣೆ ಇತ್ಯಾದಿಗಳಿಗೆ ಅನುಕೂಲವಾಗಲಿದೆ’ ಎಂದು ಚೋಳನ್ ತಿಳಿಸಿದರು.

ನವಲೂರು, ಟೋಲ್‌ನಾಕಾಕ್ಕೆ ಕಾಯಕಲ್ಪ

‘ನವಲೂರು ಸೇತುವೆ ಕಾಮಗಾರಿ ಕುರಿತಂತೆ ಗ್ರಾಮಸ್ಥರೊಂದಿಗೆ ಶಾಸಕರ ಅಧ್ಯಕ್ಷತೆಯಲ್ಲಿ ಮಾತುಕತೆ ನಡೆದಿದೆ. ನವಲೂರಿನ ವಿಠಲ ಹರಿ ಮಂದಿರ ಬಳಿ ನಿಲ್ದಾಣ ನಿರ್ಮಿಸಲಾಗುವುದು. ಇದಕ್ಕಾಗಿ ಯೋಜನೆಯ ನೀಲನಕ್ಷೆಯನ್ನು ಬದಲಿಸಿ ಮರುಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ದೊರೆತ ತಕ್ಷಣವೇ ಅಲ್ಲಿನ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅದರಂತೆಯೇ ಟೋಲ್‌ನಾಕಾದಲ್ಲಿ ಮಳೆ ನೀರು ನಿಲ್ಲುವ ಸಮಸ್ಯೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೂಲಕವೇ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದು, ಟೆಂಡರ್‌ ಕೂಡಾ ಕರೆಯಲಾಗಿದೆ’ ಎಂದರು.

‘ಪ್ರಾಯೋಗಿಕ ಹಂತದಲ್ಲಿರುವ ಬಿಆರ್‌ಟಿಎಸ್ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಇದರ ಅಧಿಕೃತ ಉದ್ಘಾಟನೆಯನ್ನು ಜನವರಿಯಲ್ಲಿ ಹಮ್ಮಿಕೊಳ್ಳುವಂತೆ ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರು ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ’ ಎಂದು ಚೋಳನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT