ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯ ನಿರ್ವಹಣೆಯಿಂದ ಆತ್ಮವಿಶ್ವಾಸ ಹೆಚ್ಚಳ

ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕಾ ಬಳಗ ಆಯೋಜಿಸಿದ್ದ ಸಮಯ ನಿರ್ವಹಣೆ ಕಾರ್ಯಾಗಾರ
Last Updated 1 ಅಕ್ಟೋಬರ್ 2019, 11:48 IST
ಅಕ್ಷರ ಗಾತ್ರ

ಧಾರವಾಡ: ‘ಜೀವನದಲ್ಲಿ ಯಶಸ್ಸು ಸಾಧಿಸಲು ಸಮಯದ ಮೌಲ್ಯ ಅರಿಯುವುದು ಬಹಳಾ ಮುಖ್ಯ. ಸಮಯ ನಿರ್ವಹಣೆ ಅರಿತರೆ ಆತ್ಮವಿಶ್ವಾಸ ಹೆಚ್ಚಲಿದೆ’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಪುಷ್ಪಾ ಹೊಂಗಲ್ ಅಭಿಪ್ರಾಯಪಟ್ಟರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗ ಹಾಗೂ ಸಿಎಸ್‌ಐ ವಾಣಿಜ್ಯ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಮಯ ನಿರ್ವಹಣೆ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಸಮಯ ನಿರ್ವಹಣೆಯ ಕಲೆಯಿಂದ ನಮ್ಮೊಳಗಿನ ಶಕ್ತಿ ಮತ್ತು ಆತ್ಮವಿಶ್ವಾಸ ವೃದ್ಧಿಸುತ್ತದೆ. ಇದು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಕೆಲಸ ನಿರ್ವಹಿಸಲು ಸ್ಫೂರ್ತಿದಾಯಕವಾಗಿರಲಿದೆ. ಸಮಯ ಪಾಲನೆ ಕುರಿತು ಯೋಜನೆಯೇ ನಮ್ಮಲ್ಲಿ ಇಲ್ಲವೆಂದರೆ ಅವಕಾಶಗಳು ಕೈಚೆಲ್ಲುತ್ತವೆ’ ಎಂದರು.

‘ಸಮಯ ಪರಿಪಾಲನೆ ಮತ್ತು ನಿರ್ವಹಣೆ ನಮ್ಮ ಆದ್ಯತೆಯನ್ನು ಅವಲಂಬಿಸಿರುತ್ತದೆ. ಇದಕ್ಕೆ ‘ಮುಖ್ಯ’ ಮತ್ತು ‘ತುರ್ತು’ ಎಂಬ ಪದಗಳ ನಡುವಿನ ವ್ಯತ್ಯಾಸ ಅರಿಯುವುದು ಬಹಳಾ ಮುಖ್ಯ. ನಮ್ಮ ಗುರಿ ಏನು ಎಂಬುದನ್ನು ಅರಿತು ಅದಕ್ಕೆ ಆದ್ಯತೆ ನೀಡಬೇಕು. ಯಾವ ಸಂದರ್ಭದಲ್ಲಿ ಯಾವುದು ಮುಖ್ಯ ಮತ್ತು ಯಾವುದು ತುರ್ತು ಎಂಬುದು ಅರ್ಥಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಸಮಯ ಹಂಚಿಕೆ ಮಾಡಬೇಕು. ಲಭ್ಯವಿರುವ ಸಮಯವನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರ ಮೇಲೆ ಯಶಸ್ಸು ಅವಲಂಬಿಸಿರುತ್ತದೆ’ ಎಂದರು.

ಇದನ್ನು ಉದಾಹರಣೆ ಸಹಿತ ವಿವರಿಸಿದ ಪ್ರೊ. ಪುಷ್ಪಾ ಹೊಂಗಲ, ‘ಈಗಾಗಲೇ ಕೈಗೊಂಡ ಕ್ರಿಯೆಯನ್ನು ದಾಖಲಿಸುವುದು, ಅದನ್ನು ವಿಶ್ಲೇಷಿಸುವುದು ನಂತರ ಅದು ಯೋಜನಾಬದ್ಧವಾಗಿರದಿದ್ದರೆ ಅದನ್ನು ಬದಲಿಸುವ ಮೂಲಕ ಯಶಸ್ಸು ಸಾಧಿಸಬಹುದು. ನಮ್ಮ ಆದ್ಯತೆಗೆ ಅನುಗುಣವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸುವ ಕಲೆಯನ್ನು ಅರಿಯಬೇಕು. ಸನ್ನಿವೇಶಕ್ಕೆ ತಕ್ಕಂತೆ ನಮ್ಮ ಆದ್ಯತೆಗಳು ಏನಾಗಿರಬೇಕು ಎಂಬುದನ್ನು ಕ್ಷಣಮಾತ್ರದಲ್ಲಿ ನಿರ್ಧರಿಸುವ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳಬೇಕು’ ಎಂದರು.

‘ಯಾವುದೇ ಕೆಲಸವಾಗಲಿ ತ್ವರಿತವಾಗಿ ಮಾಡಿಮುಗಿಸುವ ಧಾವಂತಕ್ಕಿಂತ ಯೋಜನಾಬದ್ಧವಾಗಿ ಮಾಡುವುದೇ ಲೇಸು. ವೇಳಾಪಟ್ಟಿ ಸಿದ್ಧಪಡಿಸುವುದರಿಂದ ನಮ್ಮ ಕ್ರಿಯೆಯನ್ನು ಕ್ರಮಬದ್ಧವಾಗಿ ಜಾರಿಗೆ ತರಬಹುದು. ಇದಕ್ಕಾಗಿ ಸಮಯ ನಿರ್ವಹಣೆಯ ಕಲೆಯನ್ನು ಅರಿಯಬೇಕು’ ಎಂದು ಪ್ರೊ. ಪುಷ್ಪಾ ಸಲಹೆ ನೀಡಿದರು.

ಪತ್ರಿಕಾ ಬಳಗದ ಪ್ರಸರಣ ವಿಭಾಗದ ಸಹಾಯಕ ಮುಖ್ಯ ವ್ಯವಸ್ಥಾಪಕ ಶಿವರಾಜ ನರೋಣ ಮಾತನಾಡಿ, ‘ದಿನಪತ್ರಿಕೆ ಮೂಲಕ ನಿತ್ಯ ಹಲವಾರು ಸಾಮಾಜಿಕ ಕೆಲಸಗಳನ್ನು ನಾವು ಮಾಡುತ್ತಿದ್ದೇವೆ. ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡುತ್ತಲೇ ಬಂದಿದ್ದೇವೆ. ದಿನದ ಅರ್ಧ ಗಂಟೆ ಕಾಲ ಟಿ.ವಿ. ನೋಡಿದರೆ ಒಂದು ವಿಷಯ ಕುರಿತು ಜ್ಞಾನ ಸಿಗಬಹುದು. ಆದರೆ ಒಂದು ದಿನಪತ್ರಿಕೆಯನ್ನು ಅರ್ಧ ಗಂಟೆ ಓದಿದರೆ ಹಲವಾರು ಸಂಗತಿಗಳನ್ನು ತಿಳಿಯಬಹುದು’ ಎಂದರು.

ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್ ಪತ್ರಿಕೆಗಳ ಪುರವಣಿಗಳ ವೈವಿದ್ಯತೆ ಮತ್ತು ವೈಶಿಷ್ಟ್ಯವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಸಿಎಸ್‌ಐ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಾಗಾರದ ಪ್ರಯೋಜನ ಪಡೆದರು. ಪ್ರಾಚಾರ್ಯೆ ಡಾ. ಕಮಲಾ ಧವಳೆ, ಪ್ರಾಧ್ಯಾಪಕ ಡಾ. ಶಂಭು ಹೆಗಡಾಳ್, ಪ್ರಸರಣ ವಿಭಾಗದ ಡೆನ್ನಿಸ್ ಬೆಂಗಳುರು, ಬಸವನಗೌಡ, ಸಂತೋಷ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT