ಕಾಟಾಚಾರದ ಅಧಿವೇಶನ: ಶೆಟ್ಟರ್ ಬೇಸರ

7

ಕಾಟಾಚಾರದ ಅಧಿವೇಶನ: ಶೆಟ್ಟರ್ ಬೇಸರ

Published:
Updated:

ಹುಬ್ಬಳ್ಳಿ: ‘ಬೆಳಗಾವಿಯಲ್ಲಿ ಕೇವಲ ಕಾಟಾಚಾರಕ್ಕೆ ಅಧಿವೇಶನ ನಡೆಸಲಾಗುತ್ತಿದೆ. ಸಾಲ ಮನ್ನಾ, ಬರಗಾಲ, ನಂಜುಂಡಪ್ಪ ವರದಿ ಅನುಷ್ಠಾನ ಸಂಬಂಧಿಸಿದಂತೆ, ಬಿಜೆಪಿ ಎತ್ತಿದ ಪ್ರಶ್ನೆಗಳಿಗೆ ಸರ್ಕಾರ ಇದುವರೆಗೆ ಉತ್ತರಿಸಿಲ್ಲ’ ಎಂದು ಶಾಸಕ ಜಗದೀಶ ಶೆಟ್ಟರ್ ಬೇಸರ ವ್ಯಕ್ತಪಡಿಸಿದರು.

ಈ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಸೇರಿದಂತೆ, ಯಾವ ವಿಷಯಗಳ ಬಗ್ಗೆ ದನಿ ಎತ್ತಿದರೂ ಉತ್ತರ ಸಿಗುತ್ತಿಲ್ಲ. ಸರ್ಕಾರ ಯಾವುದನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಾಳೆ, ನಾಡಿದ್ದು ಉತ್ತರಿಸುವುದಾಗಿ ಹೇಳಿ ನುಣುಚಿಕೊಳ್ಳುತ್ತಿದ್ದಾರೆ’ ಎಂದರು.

ಗೊಂದಲದ ಗೂಡಾದ ‘ಸಾಲ ಮನ್ನಾ’:

‘ರೈತರ ₹46 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಕುಮಾರಸ್ವಾಮಿ, ಇದುವರೆಗೆ ಕೇವಲ 50 ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಅಲ್ಲದೆ, 43 ಲಕ್ಷ ರೈತರಿಗೆ ಅನುಕೂಲವಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ಈ ಬಗ್ಗೆ ಲೆಕ್ಕ ಕೊಡಲು ತಯಾರಿಲ್ಲ. ಕೇವಲ ಸುಳ್ಳು ಭರವಸೆ ನೀಡುವ ಸಮ್ಮಿಶ್ರ ಸರ್ಕಾರದ ಸಾಲ ಮನ್ನಾ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ತಮ್ಮ ಭಾಷಣದಲ್ಲಿ ಟೀಕಿಸಿದ್ದಾರೆ’ ಎಂದು ಹೇಳಿದರು.

‘ಬೆಳಗಾವಿಗೆ ಕಚೇರಿಗಳನ್ನು ಸ್ಥಳಾಂತರಿಸುವುದಕ್ಕೆ ಸಂಬಂಧಿಸಿದಂತೆ, ಸಚಿವ ಆರ್‌.ವಿ. ದೇಶಪಾಂಡೆ ನೇತೃತ್ವದ ಉಪ ಸಮಿತಿ, ವರದಿ ನೀಡಿದೆ. ಆದರೆ, ಅದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಸುಳ್ಳು ಭರವಸೆಗಳಲ್ಲೇ ಈ ಲಾಟರಿ ಮುಖ್ಯಮಂತ್ರಿ ಕಾಲ ದೂಡುತ್ತಿದ್ದಾರೆ’ ಎಂದು ಟೀಕಿಸಿದರು.

‘ನಂಜುಂಡಪ್ಪ ವರದಿ ಪ್ರಕಾರ, ಉತ್ತರ ಕರ್ನಾಟಕದಲ್ಲಿ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ₹20 ಸಾವಿರ ಕೋಟಿ ಖರ್ಚಾಗಿದೆ. ಆದರೆ, ತಾಲ್ಲೂಕುಗಳ ಸದ್ಯದ ಸ್ಥಿತಿ ಮತ್ತು 371 (ಜೆ) ಜಾರಿಯ ಮೌಲ್ಯಮಾಪನ ಮಾಡಿ ಎಂದರೆ, ಯಾರೂ ತುಟಿ ಬಿಚ್ಚುತ್ತಿಲ್ಲ’ ಎಂದು ಹರಿಹಾಯ್ದರು.

‘ಸಭಾಪತಿ’ ವಿಷಯದಲ್ಲೂ ಅನ್ಯಾಯ:

‘ಉತ್ತರ ಕರ್ನಾಟಕ ಭಾಗದ ಜೆಡಿಎಸ್‌ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಮತ್ತು ಕಾಂಗ್ರೆಸ್‌ನ ಎಸ್‌.ಆರ್‌. ಪಾಟೀಲ ಅವರಿಗೆ ವಿಧಾನ ಪರಿಷತ್ ಸಭಾಪತಿ ಸ್ಥಾನ ಕೈ ತಪ್ಪಿದ್ದು, ಈ ಭಾಗಕ್ಕೆ ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿ ಆಗುತ್ತಿರುವ ಅನ್ಯಾಯಕ್ಕೆ ಕನ್ನಡಿ ಹಿಡಿದ ಕನ್ನಡಿಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಅಭಿವೃದ್ಧಿ ಸೇರಿದಂತೆ, ಯಾವುದೇ ವಿಷಯದಲ್ಲೂ ಉತ್ತರ ಕರ್ನಾಟಕ ಎಂದಿಗೂ ಆದ್ಯತೆಯಾಗಿಲ್ಲ’ ಎಂದು ಜಗದೀಶ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.

‘ಇಬ್ಬರಲ್ಲಿ ಯಾರಾದರೊಬ್ಬರ ಆಯ್ಕೆಯನ್ನು ಬಿಜೆಪಿ ಬಯಸಿತ್ತು. ಆದರೆ, ಕಡೆ ಗಳಿಗೆಯಲ್ಲಿ ಕರಾವಳಿಯ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಸಭಾಪತಿ ಸ್ಥಾನಕ್ಕೆ ತಂದು ಕೂರಿಸಿದರು. ಈ ಬೆಳವಣಿಗೆ ಸ್ವತಃ ಪ್ರತಾಪ್ ಅವರಿಗೇ ಅಚ್ಚರಿ ತಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !