ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಟಿಪ್ಪು ಜಯಂತಿಗೆ ವಿರೋಧ: ಕಾರ್ಯಕರ್ತರ ಬಂಧನ, ಬಿಡುಗಡೆ

ಸಂಸದ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ
Last Updated 10 ನವೆಂಬರ್ 2018, 12:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಟಿಪ್ಪು ಜಯಂತಿ ಆಚರಿಸುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಚಿಟಗುಪ್ಪಿ ಆಸ್ಪತ್ರೆ ಎದುರಿನ ಸಂಸದರ ಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಮುಂಜಾಗೃತಾ ಕ್ರಮವಾಗಿ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಕಳೆದ ಅವಧಿಯಲ್ಲಿ ಕಾಂಗ್ರೆಸ್‌ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸುವ ನಿರ್ಧಾರ ಕೈಗೊಂಡ ದಿನದಿಂದಲೇ ಬಿಜೆಪಿ ವಿವಿಧ ಜಿಲ್ಲೆಗಳಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತಿದೆ. ಅದನ್ನು ಈ ಬಾರಿಯೂ ಮುಂದುವರಿಸಿತು. ತಹಶೀಲ್ದಾರ್‌ ಕಚೇರಿ ಇರುವ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲು ಬಿಜೆಪಿ ತೀರ್ಮಾನಿಸಿತ್ತು. ಆದರೆ, ಪೊಲೀಸರು ಪ್ರತಿಭಟನೆಗೆ ಅವಕಾಶ ಕೊಡಲಿಲ್ಲ. ಹೀಗಾಗಿ, ಸಂಸದರ ಕಚೇರಿ ಇರುವ ಪಾಲಿಕೆ ಪಕ್ಕದ ಚಿಟಗುಪ್ಪಿ ಆಸ್ಪತ್ರೆ ಬಳಿ ನೂರಾರು ಕಾರ್ಯಕರ್ತರು ಕೆಲ ಹೊತ್ತು ಭಜನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಯಂತಿ ಆಚರಣೆಯ ಔಚಿತ್ಯವನ್ನು ಪ್ರಶ್ನಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಪ್ರಹ್ಲಾದ ಜೋಶಿ, ‘ಟಿಪ್ಪು ಒಬ್ಬ ಮತಾಂಧನಾಗಿದ್ದು, ಮೈಸೂರು ರಾಜ್ಯದಲ್ಲಿದ್ದ ಹಿಂದುಗಳ ಮೇಲೆ ಸಾಕಷ್ಟು ಅನಾಚಾರ ಎಸಗಿದ್ದಾನೆ. ದೇವಾಲಯಗಳನ್ನು ನಾಶ ಮಾಡಿದ್ದಾನೆ. ಹೀಗಾಗಿ, ಆತನ ಜಯಂತಿ ಆಚರಿಸಬಾರದು. ರಾಜ್ಯ ಸರ್ಕಾರ ಓಲೈಕೆಯ ರಾಜಕಾರಣವನ್ನು ಬಿಡಬೇಕು. ಇಲ್ಲದಿದ್ದರೆ ಈ ಹೋರಾಟ ನಿರಂತರವಾಗಿ ನಡೆಯಲಿದೆ’ ಎಂದರು.

ನಂತರ ಸಂಸದ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಮಾ. ನಾಗರಾಜ, ಮಹಾನಗರ ಬಿಜೆಪಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯರಾದ ಡಿ.ಕೆ. ಚವ್ಹಾಣ, ಶಿವಾನಂದ ಮುತ್ತಣ್ಣವರ, ಸಂತೋಷ ಚವ್ಹಾಣ ಇದ್ದರು.

ಬಿಜೆಪಿ ಕಾರ್ಯಕರ್ತೆಯರು ಕಪ್ಪು ಸೀರೆ ಉಟ್ಟು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT