ಭಾನುವಾರ, ಏಪ್ರಿಲ್ 18, 2021
31 °C

ಧಾರವಾಡ | ಮಳೆಗೆ ಮತ್ತೆ ಮುಳುಗಿದ ಟೋಲ್‌ನಾಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ನಗರದಲ್ಲಿ ಬುಧವಾರ ಸಂಜೆ ಸುಮಾರು ಒಂದು ತಾಸಿಗೂ ಅಧಿಕ ಹೊತ್ತು ಸುರಿದ ಭಾರೀ ಮಳೆಯಿಂದಾಗಿ ಟೋಲ್‌ನಾಕಾ ಮತ್ತೆ ಜಲಾವ್ರತಗೊಂಡು ಸಾರ್ವಜನಿಕರು ತೀವ್ರವಾಗಿ ಪರದಾಡಿದರು.

ಪ್ರತಿ ಮಳೆಯ ಸಂದರ್ಭದಲ್ಲೂ ಟೋಲ್‌ನಾಕಾದಲ್ಲಿ ಮಳೆನೀರು ನಿಂತು ವಾಹನಸವಾರರು ತೀವ್ರವಾಗಿ ಪರದಾಡುತ್ತಾರೆ. ಬಿಆರ್‌ಟಿಎಸ್ ಕಾಮಗಾರಿ ನಂತರ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡದ ಕಾರಣ, ರಸ್ತೆ ಮೇಲೆ ನೀರು ನಿಲ್ಲುತ್ತಿದೆ. ಇದರಿಂದಾಗಿ ಈ ಪ್ರದೇಶ ದಾಟುವುದೇ ಹರಸಾಹಸವಾಗಿದೆ ಎಂದು ಸಾರ್ವಜನಿಕರು ಪ್ರತಿ ಮಳೆಯಲ್ಲೂ ಹೇಳುತ್ತಿದ್ದರು. ಇದೇ ಪರಿಸ್ಥಿತಿ ಬುಧವಾರ ಪುನರಾವರ್ತನೆಯಾಯಿತು.

ಸಾರಸ್ವತಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಹರಿದ ಮಳೆ ನೀರು ಚರಂಡಿ ತುಂಬಿ ಹರಿಯಿತು. ಹೀಗಾಗಿ ಟೋಲ್‌ನಾಕಾ ಬಳಿ ಭಾರೀ ನೀರು ಜಮಾವಣೆಗೊಂಡು ಮುಂದೆ ಹರಿಯಲು ಜಾಗವಿಲ್ಲದೆ ರಸ್ತೆ ಮೇಲೆ ನಿಂತಿತ್ತು. ಇದರಿಂದಾಗಿ ವಾಹನಸವಾರರು ಸಾಗಲು ಪ್ರಯಾಸಪಟ್ಟರು. ಇಷ್ಟು ಮಾತ್ರವಲ್ಲ, ಬಿಆರ್‌ಟಿಎಸ್‌ ಬಸ್ಸುಗಳೂ ತಮ್ಮ ನಿಗದಿ ಟ್ರ್ಯಾಕ್‌ನಲ್ಲಿ ಸಂಚರಿಸಲು ಸಾಧ್ಯವಾಗದಷ್ಟು ನೀರು ನಿಂತಿತ್ತು.

ಇದರಿಂದಾಗಿ ವಾಹನ ದಟ್ಟಣೆ ಉಂಟಾಗಿತ್ತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳು ಎತ್ತಲೂ ಸಾಗಲು ಸಾಧ್ಯವಾಗದೆ ಪರದಾಡಿದರು. ಕಾರುಗಳ ಬಾನೆಟ್‌ ಎತ್ತರವರೆಗೂ ನೀರು ನಿಂತಿತ್ತು. ಬಿಆರ್‌ಟಿಎಸ್‌ ಪಕ್ಕದ ರಸ್ತೆ ಇನ್ನೂ ಪೂರ್ಣಗೊಳ್ಳದ ಕಾರಣ ಮತ್ತು ಅದೇ ರಸ್ತೆಯಲ್ಲೇ ಎಲ್ಲಾ ವಾಹನಗಳು ಸಂಚರಿಸಬೇಕಾದ್ದರಿಂದ ವಾಹನಗ ಸವಾರರು ತೀವ್ರ ಪರದಾಡಿದರು. 

ಬಿಆರ್‌ಟಿಎಸ್‌ ಯೋಜನೆ ಕುರಿತು ಹಿಡಿಶಾಪ ಹಾಕುತ್ತಿದ್ದ ಸಾರ್ವಜನಿಕರು, ಕಾಲನ್ನು ಮೇಲಕ್ಕೆತ್ತಿಕೊಂಡು ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ದೃಶ್ಯ ಕಂಡುಬಂತು. ಕೆಲವರ ಕಾರುಗಳು ಸಂಚರಿಸಲಾಗದೆ ಅಲ್ಲೇ ನಿಂತವು. ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಜನರೇ ತಳ್ಳುತ್ತಿದ್ದ ದೃಶ್ಯ ಕಂಡುಬಂತು. ಒಳಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದ ಕಾರಣ, ತ್ಯಾಜ್ಯ ವಸ್ತುಗಳು ರಸ್ತೆ ಮೇಲೆಲ್ಲಾ ಹರಿದಾಡುತ್ತಿದ್ದವು. ಇಲ್ಲಿ ನಿಲ್ಲಲು ಸಾಧ್ಯವಾಗದಷ್ಟು ದುರ್ಗಂಧದಿಂದಲೂ ‍ಬಸ್ ಪ್ರಯಾಣಿಕರು ಮತ್ತು ವಾಹನ ಸವಾರರು ಪರದಾಡಿದರು.

ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಮಂಜುಲಾ ಅವರು ಟೋಲ್‌ನಾಕಾಗೆ ಶಾಶ್ವತ ಮಾರ್ಗೋಪಾಯ ಕಂಡುಕೊಳ್ಳಲು ಪಾಲಿಕೆ ಮತ್ತು ಸ್ಮಾರ್ಟ್‌ ಸಿಟಿ ಯೋಜನೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ನೀರನ್ನು ಕೆಂಪಗೇರಿಗೆ ಹರಿಸುವಂತೆಯೂ ಸಲಹೆ ನೀಡಿದ್ದರು. ಈ ಸಲಹೆಯಂತೆಯೇ ಸ್ಮಾರ್ಟ್ ಸಿಟಿ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಈ ಮಾರ್ಗದ ಸಮೀಕ್ಷೆ ನಡೆಸಿದ್ದರು.

ಸಂಜೆ ಭಾರೀ ಪ್ರಮಾಣದ ಮಳೆ ಸುರಿಯಿತು. ಇದರಿಂದಾಗಿ ಎನ್‌ಟಿಟಿಎಫ್‌, ತೇಜಸ್ವಿ ನಗರ, ಟೋಲ್ ನಾಕಾ ಬಳಿಯೂ ರಸ್ತೆ ಮೇಲೆ ನೀರು ನಿಂತು ಪ್ರಯಾಣಿಕರು ಪರದಾಡಿದರು. ರಾತ್ರಿ ಹೊತ್ತಿಗೆ ನೀರು ಇಳಿದು, ರಸ್ತೆ ಸಂಚಾರಕ್ಕೆ ಮುಕ್ತವಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.