ಶುಕ್ರವಾರ, ನವೆಂಬರ್ 22, 2019
21 °C
ಅಂಚಟಗೇರಿ ಗ್ರಾಮಸ್ಥರ ಆಗ್ರಹ

ಟ್ರಕ್‌ ಟರ್ಮಿನಲ್‌ ವಿರೋಧಿಸಿ ಬೃಹತ್‌ ಪ್ರತಿಭಟನೆ

Published:
Updated:
Prajavani

ಹುಬ್ಬಳ್ಳಿ: ತಾಲ್ಲೂಕಿನ ಅಂಚಟಗೇರಿ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಲಾಜಿಸ್ಟಿಕ್‌ ಟ್ರಕ್‌ ಟರ್ಮಿನಲ್‌ನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಅಂಚಟಗೇರಿ ಗ್ರಾಮದ ನೂರಾರು ನಿವಾಸಿಗಳು ಸೋಮವಾರ ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.

‘ಊರ ಜನರಿಗೆ ಪ್ರಯೋಜನವಾಗದ ಟ್ರಕ್‌ ಟರ್ಮಿನಲ್‌ ನಮಗೆ ಬೇಕಿಲ್ಲ. ಕೂಡಲೇ ಈ ಯೋಜನೆ ಕೈ ಬಿಡಬೇಕು’ ಎಂದು ಆಗ್ರಹಿಸಿ ಗ್ರಾಮೀಣ ತಹಶೀಲ್ದಾರ್‌ ಸಂಗಪ್ಪ ಬಾಡಗಿ ಅವರಿಗೆ ಮನವಿ ಸಲ್ಲಿಸಿದರು.

ಅಂಚಟಗೇರಿಯಲ್ಲಿರುವ 50 ಎಕರೆ ಜಾಗವನ್ನು ದಿ. ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಸಂಸ್ಥೆಗೆ ಸರ್ಕಾರ ಹಸ್ತಾಂತರಿಸಿ, ಟರ್ಮಿನಲ್‌ ನಿರ್ಮಿಸಲು ಅನುದಾನ ಸಹ ಬಿಡುಗಡೆ ಮಾಡಿದೆ. ಆದರೆ, ಗ್ರಾಮದ ಜನರಿಗೆ ಮೂಲ ಸೌಲಭ್ಯ ಕಲ್ಪಿಸಿಕೊಡಲು ಜಾಗ ನೀಡಬೇಕು ಎಂದು ಹತ್ತಾರು ಬಾರಿ ವಿನಂತಿಸಿದರೂ ಯಾರೂ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸಪ್ಪ ಬಿಡ್ನಾಳ ಮಾತನಾಡಿ, ‘ಒಂಬತ್ತು ಸಾವಿರ ಜನಸಂಖ್ಯೆ ಹೊಂದಿರುವ ನಮ್ಮ ಗ್ರಾಮದಲ್ಲಿ ಸ್ಮಶಾನಕ್ಕೆ ಸರಿಯಾದ ಜಾಗವಿಲ್ಲ. ಶಾಲಾ ವಿದ್ಯಾರ್ಥಿಗಳಿಗೆ ಆಡಲು ಆಟದ ಮೈದಾನವಿಲ್ಲ. ಬಡವರೇ ಹೆಚ್ಚಾಗಿ ವಾಸಿಸುವ ಇಲ್ಲಿನ ಜನರಿಗೆ ಸರಿಯಾದ ಮನೆ ಹಾಗೂ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲವಾಗಿದೆ. ಇವುಗಳ ನಿರ್ಮಾಣಕ್ಕೆ ಆ ಜಾಗ ಬಳಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ಒಂದು ವೇಳೆ ಟ್ರಕ್‌ ಟರ್ಮಿನಲ್‌ ನಿರ್ಮಾಣವಾದರೆ ಮುಂಬರುವ ದಿನಗಳಲ್ಲಿ ಪರಿಸರ ಮಾಲಿನ್ಯವಾಗುತ್ತದೆ.  ಅಪರಾಧ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಿಸಬಾರದು ಎಂದು ಆಗ್ರಹಿಸಿದರು.

ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಪಕ್ಕಣ್ಣ ಗಾಣಿಗೇರ, ತಿಪ್ಪಣ್ಣ ಮಾಳಗಿ, ವಾಸುದೇವ ಉಧೋಜಿ, ಭೀಮಣ್ಣ ಮೊರಬದ, ಕಲ್ಲಪ್ಪ ಅಮರಗೋಳ, ಲಕ್ಷ್ಮಿ ಶಿವಳ್ಳಿ, ಸೋಮಣ್ಣ ವಾಲ್ಮೀಕಿ ಹಾಗೂ ಗ್ರಾಮದ ಮಹಿಳಾ, ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)