ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸುಗಮ ಸಂಚಾರಕ್ಕೆ ಹಲವು ಸವಾಲು

ಸ್ಮಾರ್ಟ್‌ ಸಿಟಿ ಸೇರಿದಂತೆ ವಿವಿಧ ಕಾಮಗಾರಿಗಳಿಂದ ಸಂಚಾರಕ್ಕೆ ತೊಡಕು
Last Updated 29 ಮಾರ್ಚ್ 2022, 20:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ವೇಗವಾಗಿ ಬೆಳೆಯುತ್ತಿರುವಂತೆಯೇ, ವಾಹನಗಳ ಸಂಚಾರ ಸಮಸ್ಯೆಯೂ ಬೆಳೆಯುತ್ತಿದೆ. ಸಂಚಾರ ದಟ್ಟಣೆ ವಾಹನ ಸವಾರರು ಹಾಗೂ ಟ್ರಾಫಿಕ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ನಗರದ ಪ್ರಮುಖ ವೃತ್ತವಾದ ಚನ್ನಮ್ಮ ಸರ್ಕಲ್‌ ಮೂಲಕ ನಿತ್ಯ ಅಂದಾಜು 2 ಲಕ್ಷ ವಾಹನಗಳು ಸಂಚರಿಸುತ್ತವೆ ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಚೆಗೆ ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ. ದಿನದಿಂದ ದಿನಕ್ಕೆ ಸಂಚಾರದ ಒತ್ತಡ ಹೆಚ್ಚಾಗುತ್ತಿದೆ. ಆದರೆ, ರಸ್ತೆಗಳು ಮಾತ್ರ ವಿಸ್ತರಣೆಯಾಗಿಲ್ಲ. ಟ್ರಾಫಿಕ್‌ ಸಿಬ್ಬಂದಿಯ ಕೊರತೆಯೂ ಇದೆ. ಇವುಗಳೆಲ್ಲವುದರ ಪರಿಣಾಮ ಸಂಚಾರ ಪ್ರಯಾಸದಾಯಕವಾಗಿದೆ.

ನಗರದ ಪ್ರಮುಖ ಭಾಗವಾದ ಚನ್ನಮ್ಮ ವೃತ್ತದಲ್ಲಿ ದಿನಕ್ಕೆ ಅಂದಾಜು 2 ಲಕ್ಷ ವಾಹನಗಳು ಸಂಚರಿಸುತ್ತವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಚೆಗೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಕಾಮಗಾರಿಗಳ ವಿಳಂಬ: ಸ್ಮಾರ್ಟ್‍ಸಿಟಿ ಸೇರಿದಂತೆ ವಿವಿಧ ಯೋಜನೆಗಳಡಿಒಂದಿಲ್ಲೊಂದು ಕಾಮಗಾರಿ ನಡೆಯುತ್ತಲೇ ಇವೆ. ಆದರೆ, ಅವುಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದಿರುವುದರಿಂದ ಸಂಚಾರಕ್ಕೆ ಸಂಚಕಾರ ಎದುರಾಗಿದೆ.

ಕೊಪ್ಪಿಕರ್ ರಸ್ತೆ, ಜೆ.ಸಿ. ರಸ್ತೆ, ಮರಾಠ ಗಲ್ಲಿ, ಸಿಬಿಟಿ, ದಾಜಿಬಾನ್ ಪೇಟೆಯಲ್ಲಿ ರಸ್ತೆ ಕಾಮಗಾರಿ, ಹೊಸೂರು ಮೇಲ್ಸೇತುವೆ ಕಾಮಗಾರಿ, ಮೀನು ಮಾರುಕಟ್ಟೆ, ಜನತಾ ಬಜಾರ್‌, ಬೆಂಗೇರಿ, ಉಣಕಲ್‌ ಬಳಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧೆಡೆ ಕಾಮಗಾರಿಗಳು ನಡೆಯುತ್ತಿವೆ.

ಸಿಗ್ನಲ್ ಸಮಸ್ಯೆ: ಸಂಚಾರ ದಟ್ಟಣೆ ನಿಯಂತ್ರಿಸಲೆಂದೇ ನಗರದ 15 ಕಡೆಗಳಲ್ಲಿ ಸಿಗ್ನಲ್ ಅಳವಡಿಸಲಾಗಿದೆ. ಆದರೆ, ಕಾಮಗಾರಿ ಕಾರಣ ಹಾಗೂ ತಾಂತ್ರಿಕ ತೊಂದರೆಯಿಂದ ಆಗಾಗ್ಗೆ ಸಿಗ್ನಲ್‍ಗಳು ಕೈಕೊಡುತ್ತಿವೆ. ಸಿಗ್ನಲ್‍ ನಿಷ್ಕ್ರಿಯಗೊಂಡ ಕಡೆ ಸಂಚಾರ ಪೊಲೀಸರು ನಿಂತು ದಟ್ಟಣೆ ನಿಯಂತ್ರಣಕ್ಕೆ ಮುಂದಾದರೂ ಸಮಸ್ಯೆ ತಪ್ಪಿದ್ದಲ್ಲ. 11 ಸಿಗ್ನಲ್‍ಗಳು ಸಕ್ರಿಯವಾಗಿದ್ದು, ನಾಲ್ಕು ನಿಷ್ಕ್ರಿಯವಾಗಿವೆ. ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಸರಿಪಡಿಸಲಾಗುತ್ತಿದೆ ಎಂಬುದು ಸಂಚಾರ ಪೊಲೀಸ್‌ ವಿಭಾಗದ ಹೇಳಿಕೆ.

ಭಾರಿ ಗಾತ್ರದ ವಾಹನಗಳ ಹಾವಳಿ: ನಗರದೊಳಗೆ ಭಾರಿ ಗಾತ್ರದ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರೂ, ಪ್ರಮುಖ ಮಾರುಕಟ್ಟೆ ಪ್ರದೇಶಗಳಿಗೆ ಸರಕು ಹೊತ್ತ ವಾಹನಗಳು ಬರುತ್ತಲೇ ಇವೆ. ಸರಕುಗಳನ್ನು ಇಳಿಸುವಾಗ ಹಾಗೂ ಇತರೆಡೆಗೆ ಸಾಗಿಸಲು ಲೋಡ್ ಮಾಡುವಾಗ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ನಗರದ ಹೊರ ವಲಯದಲ್ಲಿ ರಿಂಗ್‍ ರಸ್ತೆ ನಿರ್ಮಾಣದಿಂದಾಗಿ ಮೊದಲಿಗಿಂತ ಈಗ ಭಾರಿ ಗಾತ್ರದ ವಾಹನಗಳ ಸಂಚಾರ ತಗ್ಗಿದೆಯಾದರೂ ಪೂರ್ಣವಾಗಿ ನಿಂತಿಲ್ಲ.

ಪ್ರಮುಖ ರಸ್ತೆಗಳ ಹೊರತಾಗಿ ಒಳರಸ್ತೆಗಳಲ್ಲಿ ಹಲವು ಸವಾರರು ಸಂಚರಿಸುತ್ತಿದ್ದು, ಇಕ್ಕಟ್ಟಾದ ಹದಗೆಟ್ಟ ರಸ್ತೆಗಳು, ದೊಡ್ಡ ವಾಹನಗಳ ಸಂಚಾರ, ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸುವುದು, ರಸ್ತೆ, ಚರಂಡಿ ಸೇರಿದಂತೆ ಕಟ್ಟಡಗಳ ನಿರ್ಮಾಣ ಅಥವಾ ದುರಸ್ತಿ ಕಾಮಗಾರಿ ಸೇರಿದಂತೆ ಹಲವು ಕಾರಣಗಳಿಂದ ಅಲ್ಲಿಯೂ ಸಮಸ್ಯೆ ಬೇರೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT