ಗುರುವಾರ , ಅಕ್ಟೋಬರ್ 1, 2020
21 °C
ಕ್ಯಾನ್ಸರ್‌ ರೋಗಿಗಳ ‘ಅಂತಿಮ ತಾಣ’ ಸೋಂಕಿತರ ಚಿಕಿತ್ಸೆಗೆ ಮೀಸಲು

14ರಂದು ಕೋವಿಡ್ ಆರೋಗ್ಯ ಕೇಂದ್ರ ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮಜೇಥಿಯಾ ಫೌಂಡೇಷನ್‌ ನವನಗರದ ಕ್ಯಾನ್ಸರ್ ಆಸ್ಪತ್ರೆ ಆವರಣದಲ್ಲಿ ‘ಹಾಸ್ಪೈಸ್‌; ರಮಿಲಾ ಪ್ರಶಾಂತಿ ಮಂದಿರ’ ನಿರ್ಮಿಸಿ, ಇದನ್ನು 60 ಹಾಸಿಗೆಗಳ ಕೋವಿಡ್‌ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಿದೆ. ಇದನ್ನು ಫೌಂಡೇಷನ್‌ ಆ. 14ರಂದು ಮಧ್ಯಾಹ್ನ 12 ಗಂಟೆಗೆ ಕ್ಯಾನ್ಸರ್‌ ಆಸ್ಪತ್ರೆಗೆ ಹಸ್ತಾಂತರಿಸಲಿದೆ. ಆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೀಶ್‌ ಪಾಟೀಲ ಪಾಲ್ಗೊಳ್ಳಲಿದ್ದಾರೆ.

ಕ್ಯಾನ್ಸರ್ ಆಸ್ಪತ್ರೆಯ ಮುಖ್ಯಸ್ಥ ಡಾ. ಬಿ.ಆರ್‌. ಪಾಟೀಲ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಜಿಲ್ಲೆಯಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಧ್ಯಮ ಸೋಂಕಿನ ಲಕ್ಷಣಗಳನ್ನು ಹೊಂದಿ, ಬೇರೆ ಆರೋಗ್ಯ ಸಮಸ್ಯೆಯಿಂದಲೂ ಬಳಲುತ್ತಿರುವವರಿಗೆ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅವರಿಗೆ ಮಜೇಥಿಯಾ ಫೌಂಡೇಷನ್‌ ಇಸ್ಕಾನ್‌ ಮೂಲಕ ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆ ಮಾಡಿದೆ’ ಎಂದರು.

’ಕ್ಯಾನ್ಸರ್‌ನ ಕೊನೆಯ ಘಟ್ಟದಲ್ಲಿರುವ ಬಹಳಷ್ಟು ರೋಗಿಗಳು ಮನೆಯಲ್ಲಿರಲು ಬಯಸುವುದಿಲ್ಲ. ಆದ್ದರಿಂದ ಅವರು ತಮ್ಮ ಅಂತಿಮ ದಿನಗಳನ್ನು ತಮ್ಮಿಷ್ಟದಂತೆ ಕಳೆಯಲು ಫೌಂಡೇಷನ್‌ ಹಾಸ್ಪೈಸ್‌ ನಿರ್ಮಿಸಿದೆ. ಈಗ ಸೋಂಕು ಇರುವ ಕಾರಣ ಕೋವಿಡ್‌ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಇದರಿಂದ ಕಿಮ್ಸ್‌ ಮತ್ತು ಎಸ್‌ಡಿಎಂ ಆಸ್ಪತ್ರೆಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ’ ಎಂದರು.

ಫೌಂಡೇಷನ್‌ ಚೇರ್ಮನ್‌ ಜಿತೇಂದ್ರ ಮಜೇಥೀಯಾ ಮಾತನಾಡಿ ’ಆರೋಗ್ಯ ಕೇಂದ್ರದಲ್ಲಿ ದಿನಪೂರ್ತಿ ವೈದ್ಯರು ಸೇವೆಗೆ ಲಭ್ಯರಿರುತ್ತಾರೆ. ಮೂರು ಪಾಳಿಯಲ್ಲಿ ವೈದ್ಯಕೀಯ ಸಿಬ್ಬಂದಿ ಕೆಲಸ ನಿರ್ಮಿಸಲಿದ್ದು, ಹತ್ತು ದಿನಗಳ ಕೆಲಸದ ಬಳಿಕ ಅವರನ್ನು ಏಳು ದಿನ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಸೋಂಕಿತರ ಚಿಕಿತ್ಸೆಗೆ ಬರುವ ವೈದ್ಯಕೀಯ ಸಿಬ್ಬಂದಿಗೆ ಪ್ರತ್ಯೇಕ ಪ್ರವೇಶ ದ್ವಾರ ಕಲ್ಪಿಸಲಾಗುವುದು. ಬೇರೆ ಆಸ್ಪತ್ರೆಗಳಿಗಿಂತಲೂ ಕಡಿಮೆ ಹಣ ಪಡೆಯಲಾಗುವುದು’ ಎಂದರು.

ಹಾಸ್ಪೈಸ್‌ ಆಡಳಿತ ನಿರ್ದೇಶಕ ಡಾ. ಕೆ. ರಮೇಶಬಾಬು ಮಾತನಾಡಿ ’ಕೊರೊನಾಕ್ಕೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದಷ್ಟೇ ಹಣ ಪಡೆಯಬೇಕು. ಕೆಲ ಆಸ್ಪತ್ರೆಗಳು ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಸರ್ಕಾರ ಹೇಳಿದ ಮೇಲೂ ಈ ರೀತಿ ಮಾಡುವುದು ಸರಿಯಲ್ಲ’ ಎಂದರು.

ಮಜೇಥಿಯಾ ಫೌಂಡೇಷನ್‌ ಅಧ್ಯಕ್ಷೆ ನಂದಿನಿ ಕಶ್ಯಪ್‌, ಹಾಸ್ಪೈಸ್‌ ನಿರ್ದೇಶಕರಾದ ಡಾ. ವಿ.ಬಿ. ನಿಟಾಲಿ, ಅಮರೇಶ ಹಿಪ್ಪರಗಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.