ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಭಾಷೆ ಸಮೃದ್ಧಿಗೆ ಕಾರಣವಾದ ಅನುವಾದ

Last Updated 15 ಆಗಸ್ಟ್ 2019, 14:45 IST
ಅಕ್ಷರ ಗಾತ್ರ

ಧಾರವಾಡ: ‘ಅನುವಾದ ಸಾಹಿತ್ಯ ಕನ್ನಡ ಭಾಷೆಯ ಸಮೃದ್ಧಿಗೆ ಕಾರಣವಾಗಿದೆ. ನಾವು ಅದ್ಭುತ ಕೃತಿಗಳೆಲ್ಲವನ್ನು ಅನುವಾದದ ಮೂಲಕವೇ ಓದಿದ್ದೇವೆ’ ಎಂದು ಹಿರಿಯ ಪತ್ರಕರ್ತ ಜೋಗಿ ಅಭಿಪ್ರಾಯಪಟ್ಟರು.

ಇಲ್ಲಿನ ಸಾಂಸ್ಕೃತಿಕ ಸಮುಚ್ಚಯದಲ್ಲಿ ಮನೋಹರ ಗ್ರಂಥಮಾಲೆ ಆಯೋಜಿಸಿದ್ದ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಮಹಾಗ್ರಂಥಗಳಾದ ರಾಮಾಯಣ, ಮಹಾಭಾರತ, ಏಟ್ಸ್‌ ಕವಿಯ ಕವಿತೆಗಳು, ಶೇಕ್ಸ್‌ಪೀಯರ್‌ನ ನಾಟಕಗಳು ಹೀಗೆ ಬಹುತೇಕ ಉತ್ಕೃಷ್ಠ ಸಾಹಿತ್ಯವನ್ನು ಅನುವಾದದ ಮೂಲಕವೇ ನಮ್ಮದಾಗಿಸಿಕೊಂಡಿದ್ದೇವೆ’ ಎಂದರು.

‘ಅನುವಾದ ಸರಳ ಕೆಲಸವಲ್ಲ. ಅದು ಅಪೂರ್ವವಾದ ಸಹಾನುಭೂತಿ ಅಪೇಕ್ಷಿಸುತ್ತದೆ. ಅನನ್ಯವಾದ ಬೆರಗು ಮತ್ತು ಕ್ರಿಯಾಶೀಲತೆಯನ್ನು ಅನುವಾದ ಉಳಿಸಿಕೊಳ್ಳಬೇಕಾಗುತ್ತದೆ. ಮನೋಹರ ಗ್ರಂಥಮಾಲೆ ಹೊರತಂದಿರುವ ನಾಲ್ಕು ಕೃತಿಗಳ ಪೈಕಿ ಎರಡು ಅನುವಾದಗಳಾದರೆ, ಇನ್ನೆರಡು ಕೃತಿಗಳು ಸ್ವತಂತ್ರ ಕೃತಿಗಳಾದರೂ ಭಾವನಾತ್ಮಕ ಅನುವಾದಗಳಾಗಿವೆ. ಪ್ರಸ್ತುತ ಹೊರಬಂದಿರುವ ನಾಲ್ಕು ಕೃತಿಗಳು ವೈವಿಧ್ಯತೆ, ಗುಣಾತ್ಮಕತೆ ಹೊಂದಿರುವುದು ವಿಶೇಷತೆ’ ಎಂದರು.

‘ಪ್ರಸ್ತುತ ಗುಣಮಟ್ಟದ ಪ್ರಕಾಶನ ಇಲ್ಲವಾಗುತ್ತಿದೆ. ಬಹಳಷ್ಟು ಪ್ರಕಾಶಕರು ಸಿಗುತ್ತಾರೆ. ಆದರೆ ಪ್ರಕಾಶಕರಿಗೆ ಓದುವ ಅಭ್ಯಾಸವಿಲ್ಲ. ಮಾರುವ ತಂತ್ರಗಳು ಗೊತ್ತಿವೆ. ಪುಸ್ತಕ ಓದಿ, ಲೇಖಕರಿಗೆ ಸಲಹೆ ನೀಡಿದಾಗ ಉತ್ತಮ ಪುಸ್ತಕಗಳು ಹೊರಬರಲು ಸಾಧ್ಯ. ಪ್ರತಿಭಾಶೀಲ ಸಲಹಾ ಸಮಿತಿಯಿಂದ ಲೇಖಕರು ವಂಚಿತರಾಗಿದ್ದಾರೆ. ಆದರೆ ಮನೋಹರ ಗ್ರಂಥಮಾಲೆ ಕೃತಿಗಳನ್ನು ಪ್ರಕಟಿಸುವ ಮೊದಲು ಸಲಹಾ ಸಮಿತಿ ಪರಿಶೀಲನೆಗೆ ಒಳಪಡುತ್ತದೆ. ಡಾ.ಕೀರ್ತಿನಾಥ ಕುರ್ತಕೋಟಿ, ಡಾ.ಗಿರೀಶ ಕಾರ್ನಾಡರು ಸಲಹಾ ಸಮಿತಿ ಮೂಲಕ ಉತ್ತಮ ಪರಂಪರೆ, ಮಾರ್ಗವೊಂದನ್ನು ಹಾಕಿಕೊಟ್ಟಿದ್ದಾರೆ’ ಎಂದು ಹೇಳಿದರು.

‘ಬದಲಾದ ಸಂದರ್ಭದಲ್ಲಿ ಪ್ರಕಾಶನ ಸ್ಪಂದನಶೀಲತೆ ಕಳೆದುಕೊಂಡಿದೆ. ಲೇಖಕ ಅನಾಥಪ್ರಜ್ಞೆ ಅನುಭವಿಸುತ್ತಿದ್ದಾನೆ. ಕೃತಿಬದ್ಧವಾದ ಟೀಕೆಗಳು ಸಾಧ್ಯವಾಗುತ್ತಿಲ್ಲ. ವಿಮರ್ಶೆಯ ಔದಾರ್ಯದಿಂದಾಗಿ ಉತ್ತಮ ಕೃತಿಗಳು ಬರುತ್ತಿಲ್ಲ. ವಿಕೃತಿ ಸೃಷ್ಟಿಯಾಗುತ್ತಿವೆ. ನಿಜವಾದ ಓದುಗ ಒಂದು ಪರಂಪರೆಯ ಮುಂದುವರಿಕೆಯಾಗಿ ಕೃತಿಯನ್ನು ಓದುತ್ತಾನೆ. ಅಂಥ ಓದುಗ ಬಳಗ ಸೃಷ್ಟಿಸುವ ಅನಿವಾರ್ಯತೆ ಇದೆ. ಪ್ರತಿಯೊಂದು ಮಾಧ್ಯಮಗಳು ಹೊಸತನ ಕಂಡುಕೊಳ್ಳುತ್ತಿರುವ ಸಂದರ್ಭದಲ್ಲಿ ಓದುವ ವರ್ಗ ಬೆಳೆಸಲು ಹೊಸತನ ಹುಡುಕಬೇಕಿದೆ’ ಎಂದು ಜೋಗಿ ಸಲಹೆ ನೀಡಿದರು.

‘ಪ್ರತಿ ವರ್ಷ ಕನ್ನಡದಲ್ಲಿ 6 ರಿಂದ 7 ಸಾವಿರ ಕೃತಿಗಳು ಪ್ರಕಟಗೊಳ್ಳುತ್ತಿವೆ. ಅವು ಎಷ್ಟು ಜನಕ್ಕೆ ತಲುಪುತ್ತಿವೆ? ತಲುಪಿಸುವ ಬಗೆ ಹೇಗೆ? ಇಂಥ ಹಲವು ಸವಾಲುಗಳನ್ನು ಇಂದು ಪ್ರಕಾಶಕರು, ಲೇಖಕರು ಸೇರಿದಂತೆ ಒಟ್ಟೂ ಸಾಹಿತ್ಯ ವಲಯ ಎದುರಿಸುತ್ತಿದೆ. ಈ ಸವಾಲುಗಳನ್ನು ಮೆಟ್ಟಿ ನಿಂತು ಓದುವ ಪ್ರೀತಿ ಬೆಳೆಸುವ ಅಗತ್ಯವಿದೆ’ ಎಂದರು.

ಕಾರ್ಯಕ್ರಮದಲ್ಲಿ ಡಾ.ಗುರುರಾಜ ಕರ್ಜಗಿ ಅನುವಾದಿಸಿದ ಓ ಹೆನ್ರಿಯ ಕಥೆಗಳು, ಕಮಲಾ ಹೆಮ್ಮಿಗೆ ಅನುವಾದಿಸಿದ ಮಲಯಾಳಂ ಕತೆಗಳ ಸಂಕಲನ ‘ಕೇರಳ ಕಾಂತಾಸಮ್ಮಿತ’, ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ ಅವರ ‘ಸಾವಿನ ಸೆರಗಿನಲ್ಲಿ’, ಮತ್ತು ಡಾ.ಲೋಹಿತ ನಾಯ್ಕರ್‌ ಅವರ ಕಾದಂಬರಿ ‘ಉಮೇದುವಾರರು’ ಬಿಡುಗಡೆಗೊಂಡವು.

ಕಾರ್ಯಕ್ರಮದಲ್ಲಿ ಆನಂದ ಝುಂಜರವಾಡ್, ಡಾ.ರಮಾಕಾಂತ ಜೋಶಿ, ಸಮೀರ ಜೋಶಿ, ಡಾ.ಹಾ.ವೆಂ.ಕಾಖಂಡಕಿ, ಆನಂದ ಪಾಟೀಲ ಸೇರಿದಂತೆ ಸಾಹಿತ್ಯಾಸಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT