ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದಲ್ಲಿ ಅರಳಿದ ತ್ರಿವರ್ಣದ ಬ್ಯಾಡ್ಜ್‌

ಜನರ ಗಮನ ಸೆಳೆದ ಸಗಣಿಯಿಂದ ತಯಾರಿಸಿದ ಕರಕುಶಲ ವಸ್ತುಗಳು
Last Updated 16 ಜನವರಿ 2023, 6:19 IST
ಅಕ್ಷರ ಗಾತ್ರ

ಧಾರವಾಡ: ಅರಳಿದ ಹೂವಂತೆ ಕಾಣುವ ಭತ್ತದ ಕಾಳು ಬಳಸಿ ತಯಾರಿಸಿದ ತ್ರಿವರ್ಣ ಧ್ವಜ ಹೋಲುವ ಬ್ಯಾಡ್ಜ್‌ ನೋಡುಗರ ಗಮನ ಸೆಳೆಯಿತು.

26 ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಧಾರವಾಡದ ಕೆಸಿಡಿ ಮೈದಾನದಲ್ಲಿ ಆಯೋಜಿಸಿದ್ದ ‘ಯುವಕೃತಿ’ ಮೇಳದಲ್ಲಿ ಛತ್ತಿಸ್‌ಗಢನ ಶೌರ್ಯ ಯುವ ಸಂಘಟನೆಯ ಸದಸ್ಯರು ತಯಾರಿಸಿದ ಬ್ಯಾಡ್ಜ್‌ಗಳು ಮುಖ್ಯವಾಗಿ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸಿದವು. ಪಾಲಕರು ಸಹ ಬ್ಯಾಡ್ಜ್‌ ಖರೀದಿಯಲ್ಲಿ ಉತ್ಸುಕರಾಗಿದ್ದರು.

‘ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು, ಅದರ ಅಂಗವಾಗಿಯೇ ನೂತನ ಪ್ರಯತ್ನ ಮಾಡಿದ್ದೇವೆ. ವೃತ್ತಾಕಾರದಲ್ಲಿ ಕಾರ್ಡ್‌ಬೋರ್ಡ್‌ ಅನ್ನು ಕತ್ತರಿಸಿ, ಅದರ ಮೇಲೆ ಗಮ್‌ ಹಾಕಿ ಹೂವಿನ ಪಕಳೆಗಳಂತೆ ಭತ್ತದ ಕಾಳುಗಳನ್ನು ಜೋಡಿಸಲಾಗುವುದು ನಂತರ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣ ಬಳೆದು, ಅದರ ಕೆಳಗಡೆ ಸ್ಯಾಟಿನ್‌ ರಿಬ್ಬನ್‌ಗಳನ್ನು ಉದ್ದಕೆ ಬಿಡಲಾಗಿದೆ’ ಎಂದು ಸಂಘಟನೆಯ ಪ್ರತಿನಿಧಿ ಆದಿತ್ಯಕುಮಾರ್ ಮಾಹಿತಿ ನೀಡಿದರು.

‘ದೇಶದಲ್ಲೇ ಛತ್ತಿಸ್‌ಗಢನಲ್ಲಿ ಮಾತ್ರ ತಯಾರಿಸಲಾಗುತ್ತಿದ್ದು, ಒಂದಕ್ಕೆ ₹ 30ರಂತೆ ಲಭ್ಯವಾಗುವ ಇವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆನ್‌ಲೈನ್‌ ಮೂಲಕವೂ ಮಾರಾಟ ಮಾಡಲಾಗುತ್ತಿದ್ದು, ಹೆಚ್ಚು ಕಾಲ ಬಾಳಿಕೆ ಬರುತ್ತವೆ’ ಎಂದು ತಿಳಿಸಿದರು.

‘ಗೋವು ಪೂಜಿಸುವ ನಾಡಿನಲ್ಲಿ ಸಗಣಿಗೂ ಮಹತ್ವದ ಸ್ಥಾನವಿದೆ. ಹಾಗಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಮಾರಾಟದ ಪ್ರಮಾಣವೂ ಹೆಚ್ಚಾಗಿದೆ’ ಎಂದು ಅವರು ಹೇಳಿದರು.

ಸಗಣಿಯಿಂದ ತಯಾರಿಸಿದ ಬಾಲಕೃಷ್ಣನ ಪಾದದ ಹೆಜ್ಜೆ, ಘಮ್ಮೆನ್ನುವ ಅಗರಬತ್ತಿ, ಶುಭ–ಲಾಭ (ಸ್ಟಿಕರ್‌), ಬಣ್ಣ ಬಣ್ಣದ ಹಾಗೂ ಬಣ್ಣರಹಿತ ದೀಪಗಳು ಜೊತೆಗೆ ಭತ್ತದಿಂದಲೇ ತಯಾರಿಸಿದ ಜುಮರ್‌ಗಳು ಇಲ್ಲಿ ಲಭ್ಯವಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿವೆ.

ಗಾತ್ರಕ್ಕನುಗುಣವಾಗಿ 8 ದೀಪಗಳ ಸೆಟ್‌ಗೆ ₹ 50 ರಿಂದ ₹ 100 ದರ ನಿಗದಿಪಡಿಸಲಾಗಿದೆ. ಹಾಗೂ ಭತ್ತದ ಜುಮರ್‌ ಒಂದಕ್ಕೆ ₹ 100 ರಂತೆ ಹಾಗೂ ಉಳಿದ ವಸ್ತುಗಳು ₹ 20 ಕ್ಕೆ ಮಾರಾಟ ಮಾಡಲಾಗುತ್ತಿತ್ತು.

ಕಡಿಮೆ ದರದಲ್ಲಿ ಉತ್ತಮ ವಸ್ತುಗಳು ಸಿಕ್ಕಿವೆ ಜೊತೆಗೆ ವಿವಿಧ ರಾಜ್ಯಗಳ ವಿಭಿನ್ನ ಕಲೆ,ಕರಕುಶಲ ವಸ್ತುಗಳನ್ನು ನೋಡುವ ಅವಕಾಶವೂ ದೊರೆಕಿದೆ
ಅಮೃತಾ, ಧಾರವಾಡ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT