ಸೋಮವಾರ, ಆಗಸ್ಟ್ 26, 2019
27 °C

ತ್ರಿವಳಿ ತಲಾಕ್‌: ಕೇಂದ್ರದ ನಿರ್ಧಾರಕ್ಕೆ ಶಾಕೀರ್ ಸನದಿ ಟೀಕೆ

Published:
Updated:
Prajavani

ಹುಬ್ಬಳ್ಳಿ: ಮುಸ್ಲಿಂ ಮಹಿಳೆಯರ ವಿವಾಹ ಹಕ್ಕುಗಳ ರಕ್ಷಣೆಗೆ ಕೇಂದ್ರ ಸರ್ಕಾರ ಅಂಗೀಕರಿಸಿರುವ ತ್ರಿವಳಿ ತಲಾಖ್‌ ಮಸೂದೆಗೆ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶಾಕೀರ್ ಸನದಿ ವಿರೋಧ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಭಾರತದ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಮತ್ತು ಹಕ್ಕುಗಳನ್ನು ನೀಡಿದೆ. ತ್ರಿವಳಿ ತಲಾಖ್‌ ಜಾರಿ ನಿರ್ಧಾರದಿಂದ ಸಾಕಷ್ಟು ಮುಸ್ಲಿಮರಿಗೆ ಅಸುರಕ್ಷತೆ ಕಾಡುತ್ತಿದೆ. ಒತ್ತಾಯ ಪೂರ್ವಕವಾಗಿ ಇದನ್ನು ಹೇರಲಾಗುತ್ತಿದೆ. ಇದು ಸಂವಿಧಾನದ ಬಗ್ಗೆ ನಂಬಿಕೆ ಹೊಂದಿರುವ ದೇಶದ ಬಹುಸಂಖ್ಯಾತರ ಆಶಯಕ್ಕೆ ವಿರುದ್ಧವಾಗಿದೆ’ ಎಂದು ದೂರಿದ್ದಾರೆ.

‘ಜಾತಿ, ಮತಗಳ ಹಂಗಿಲ್ಲದೇ ಎಲ್ಲರೂ ಸಮಾನರು ಎಂದು ಸಂವಿಧಾನವೇ ಹೇಳಿದೆ. ಪ್ರತಿಯೊಬ್ಬರಿಗೂ ಅವರ ಧರ್ಮ ಮತ್ತು ಸಂಪ್ರದಾಯಗಳನ್ನು ಪಾಲಿಸುವ ಹಕ್ಕು ನೀಡಿದೆ. ಸಂವಿಧಾನದ 15ನೇ ವಿಧಿ ಯಾವುದೇ ರಾಜ್ಯವು ಲಿಂಗ, ಜನಾಂಗ, ಧರ್ಮದ ವಿರುದ್ಧ ತಾರತಮ್ಯ ಮಾಡಬಾರದು ಎಂದು ಹೇಳುತ್ತದೆ. 21ನೇ ವಿಧಿ ಜೀವನ ಎಂಬುದು ಹಕ್ಕು ಎಂದಿದೆ. 25ರಿಂದ 28ನೇ ವಿಧಿಗಳವರೆಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳನ್ನು ಕೊಡಲಾಗಿದೆ. ಆದರೆ, ಕೇಂದ್ರ ಸರ್ಕಾರ ತ್ರಿವಳಿ ತಲಾಖ್‌ ಮಸೂದೆ ಜಾರಿಗೆ ತರುವ ಮೂಲಕ ಸಂವಿಧಾನದ ಕಲ್ಪನೆಯನ್ನೇ ನಾಶಪಡಿಸಿದೆ. ಇದನ್ನೇ ಮುಂದುವರಿಸಿದರೆ ಸಂವಿಧಾನ ತನ್ನ ಮಹತ್ವ ಕಳೆದುಕೊಳ್ಳುತ್ತದೆ’ ಎಂದು ದೂರಿದ್ದಾರೆ.

‘ಕೇಂದ್ರ ಸರ್ಕಾರ ಜನರ ಮೂಲಭೂತ ಹಕ್ಕುಗಳನ್ನೇ ಕಸಿದುಕೊಳ್ಳುತ್ತಿದೆ. ಜನರಿಂದ ಆಯ್ಕೆಯಾದ ಸರ್ಕಾರ ಜನಪರವಾಗಿ ಇಲ್ಲ. ಷರಿಯಾದಲ್ಲೇ ತ್ರಿವಳಿ ತಲಾಖ್‌ ಅನ್ನು ನಿಷೇಧಿಸಲಾಗಿದೆ. ಸರ್ಕಾರ ಇದರ ಬಗ್ಗೆ ಸಮಾಜದ ಜನರಲ್ಲಿ ಅರಿವು ಮೂಡಿಸಿ, ಅಭಿಪ್ರಾಯ ಪಡೆದು ಮಸೂದೆ ರೂಪಿಸಬೇಕಿತ್ತು. ಇದರ ಬದಲು ಅತಿರೇಕತನದಿಂದ ನಡೆದುಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮುಂದೆ ಹೊಸ ಸರ್ಕಾರ ಬಂದರೆ ಅದು ಹಿಂದೂ, ಕ್ರಿಶ್ಚಿಯನ್‌ ಅಥವಾ ಇತರ ಯಾವುದೇ ಧಾರ್ಮಿಕ ಆಚರಣೆಯನ್ನು ನಿಷೇಧಿಸಬೇಕು ಎನ್ನುವ ಕಾನೂನು ಜಾರಿಗೆ ತರುತ್ತದೆ ಎಂದು ಭಾವಿಸೋಣ; ಆಗ ಏನಾಗುತ್ತದೆ? ಇದನ್ನು ಯಾರೂ ಒಪ್ಪುವುದಿಲ್ಲ. ಏಕೆಂದರೆ, ಇದು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯ. ಪರಂಪರಾಗತವಾಗಿ ನಡೆದುಕೊಂಡು ಬಂದಿದ್ದನ್ನು ರಾತ್ರೋ ರಾತ್ರಿ ಬದಲಿಸಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

Post Comments (+)