ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ತಿಂಗಳ ಬಳಿಕ ಬಂತು ಲೋಹದ ಹಕ್ಕಿ

ವಿಮಾನ ನಿಲ್ದಾಣದಲ್ಲಿ ಸುರಕ್ಷಾ ಕ್ರಮಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ
Last Updated 25 ಮೇ 2020, 14:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವ ಭೀತಿಯಿಂದ ಸರಿಯಾಗಿ ಎರಡು ತಿಂಗಳ ಹಿಂದೆ ರದ್ದಾಗಿದ್ದ ವಿಮಾನಗಳ ಹಾರಾಟ ಸೋಮವಾರ ಪುನರಾರಂಭಗೊಂಡಿತು. ಮಧ್ಯಾಹ್ನ 1.30ರ ಸುಮಾರಿಗೆ ಬೆಂಗಳೂರಿಂದ ಸ್ಟಾರ್‌ ಏರ್‌ ವಿಮಾನವು ಇಲ್ಲಿಗೆ ಬಂದಿತು.

ಸ್ಟಾರ್‌ ಏರ್‌ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಹಿಂಡನ್‌ಗೆ (ದೆಹಲಿ ಹೊರವಲಯದ ಪ್ರದೇಶ) ಸೇವೆಯನ್ನು ಆರಂಭಿಸಿದೆ. ಈ ವಿಮಾನ ಸಂಸ್ಥೆಯು ವಾಣಿಜ್ಯ ನಗರಿಯಿಂದ ಏಳು ಊರುಗಳಿಗೆ ಸೌಲಭ್ಯ ಹೊಂದಿದ್ದು, ಸದ್ಯಕ್ಕೆ ಎರಡು ಊರುಗಳಿಗಷ್ಟೇ ಸಂಚಾರ ನಡೆಸುತ್ತಿದೆ.

ಇಲ್ಲಿಂದ ಬೆಂಗಳೂರು ಮತ್ತು ಹಿಂಡನ್‌ಗೆ ತೆರಳಿದ ಪ್ರಯಾಣಿಕರು ಮಾಸ್ಕ್‌ ಧರಿಸಿದ್ದರು. ಅವರಿಗೆ ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು. ಸರತಿಯಲ್ಲೇ ಬರಬೇಕು. ಥರ್ಮಲ್ ಸ್ಕ್ಯಾನಿಂಗ್‌ ಪರೀಕ್ಷೆಗೆ ಒಳಪಡಬೇಕು ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಹೇಳುತ್ತಿದ್ದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹೋಗಲು ಮತ್ತು ಬರಲು ಪ್ರತ್ಯೇಕ ಕೌಂಟರ್‌ಗಳನ್ನು ಆರಂಭಿಸಲಾಗಿದೆ. ಬೇರೆ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಸರತಿಯಲ್ಲಿ ಬರಲು ಮಾರ್ಕಿಂಗ್‌ ಕೂಡ ಮಾಡಲಾಗಿತ್ತು.

ಪರಿಶೀಲನೆ: ಜಿಲ್ಲಾಧಿಕಾರಿ ದೀಪಾ ಚೋಳನ್‌ ವಿಮಾನ ನಿಲ್ದಾಣದಲ್ಲಿ ಸುರಕ್ಷಾ ಕ್ರಮಗಳನ್ನು ಪರಿಶೀಲಿಸಿದರು. ಬಳಿಕ ನಿಲ್ದಾಣದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ಕೊರೊನಾ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ದೇಶಕ ನೀಡಿದರು.

ಬಳಿಕ ಮಾತನಾಡಿ ದೀಪಾ ‘ಪ್ರಯಾಣಿಕರು ನಿಲ್ದಾಣಕ್ಕೆ ಬರುವಾಗ ಹಾಗೂ ಹೋಗುವಾರ ಎರಡೂ ಅವಧಿಯೊಳಗೆ ಪಡೆದ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಪರಿಶೀಲಿಸಬೇಕು. ವೈದ್ಯಕೀಯ ತಪಾಸಣೆ ವೇಳೆ ಸುರಕ್ಷಿತ ಅಂತರ ಪಾಲಿಸಬೇಕು. ಜಿಲ್ಲೆಯ ಪ್ರಯಾಣಿಕರು ನಿಗದಿಪಡಿಸಿದ ಕ್ವಾರಂಟೈನ್ ಕೇಂದ್ರಗಳಿಗೆ ಅಥವಾ ಸ್ವಂತ ವೆಚ್ಚದಲ್ಲಿ ಹೋಟೆಲ್ ಕ್ವಾರಂಟೈನ್‌ ಸೌಲಭ್ಯ ಆಯ್ದುಕೊಳ್ಳಬಹುದು. ಹೊರ ಜಿಲ್ಲೆಗಳ ಪ್ರಯಾಣಿಕರು ತಮ್ಮ ಸ್ಥಳಗಳಿಗೆ ತೆರಳಲು ಪರಿಶೀಲನೆ ನಂತರ ಅವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬಿಆರ್‌ಟಿಎಸ್‌ನಿಂದ ಬಸ್‌ಗಳ ಸೌಲಭ್ಯ ಕಲ್ಪಿಸಲಾಗಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒ ಬಿ.ಸಿ.ಸತೀಶ, ಮಹಾನಗರಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ಎಚ್ .ರಾಮನಗೌಡರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯಶವಂತ ಮದೀನಕರ್, ಕಿಮ್ಸ್ ತಜ್ಞ ವೈದ್ಯ ಲಕ್ಷ್ಮೀಕಾಂತ ಲೋಕರೆ, ಡಿಡಿಪಿಐ ಎಂ.ಎಲ್. ಹಂಚಾಟೆ, ಹುಬ್ಬಳ್ಳಿ ನಗರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ, ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ ನಾಶಿ ಇದ್ದರು.

ಬೆಂಗಳೂರಿನಿಂದ ಬಂದವರೇ ನಾಲ್ಕೇ ಜನ!

ಸೋಮವಾರ ಇಲ್ಲಿಗೆ ಬೆಂಗಳೂರಿನಿಂದ ಬಂದ ಸ್ಟಾರ್‌ ಏರ್‌ ವಿಮಾನದಲ್ಲಿ ನಾಲ್ಕು ಜನ ಪ್ರಯಾಣಿಕರಷ್ಟೇ ಇದ್ದರು. ಅದರಲ್ಲಿ ಒಬ್ಬ ಪ್ರಯಾಣಿಕ ಚೆನ್ನೈನಿಂದ ಬೆಂಗಳೂರಿಗೆ ಬಂದು ಹುಬ್ಬಳ್ಳಿಗೆ ಬಂದರು. ಅವರನ್ನು ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಉಳಿದ ಮೂವರಿಗೆ ಹೋಮ್‌ ಕ್ವಾರಂಟೈನ್‌ ಮುದ್ರೆ ಹಾಕಲಾಯಿತು.

ಹುಬ್ಬಳ್ಳಿಯಿಂದ ಹಿಂಡನ್‌ಗೆ ತೆರಳಿದ ವಿಮಾನದಲ್ಲಿ 30 ಜನ ಪ್ರಯಾಣಿಕರಿದ್ದರು. ಹಿಂಡನ್‌ನಿಂದ ಬಂದ ವಿಮಾನದಲ್ಲಿ 17 ಪ್ರಯಾಣಿಕರು ಇದ್ದರು ಎಂದು ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್ ಠಾಕ್ರೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT