ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಇನ್ನೆರೆಡು ವರ್ಷದಲ್ಲಿ ಕಾಮಗಾರಿ ಪೂರ್ಣ’

ಒಟ್ಟು 54 ಯೋಜನೆಗಳಲ್ಲಿ ಆರು ಪೂರ್ಣ: ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್‌ ಅಹ್ಮದ್‌
Last Updated 25 ಜೂನ್ 2019, 15:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಅಡಿ ಕೈಗೊಂಡ ಒಟ್ಟು 54 ಯೋಜನೆಗಳ ಪೈಕಿ ಆರು ಪೂರ್ಣಗೊಂಡಿದ್ದು, ಇನ್ನುಳಿದ 48 ಕಾಮಗಾರಿಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್‌ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್‌ ಅಹ್ಮದ್‌ ತಿಳಿಸಿದರು.

ಸ್ಮಾರ್ಟ್‌ ಸಿಟಿ ವೆಬ್‌ಸೈಟ್‌ ಆರಂಭಿಸಲು ಮತ್ತು ನಿರ್ವಹಣೆಗೆ ₹ 15 ಲಕ್ಷ, ಇ–ಟಾಯ್ಲೆಟ್‌ಗಳಿಗೆ ₹ 1.01 ಕೋಟಿ, ಹುಬ್ಬಳ್ಳಿ ಉತ್ತರ ಹಾಗೂ ದಕ್ಷಿಣದಲ್ಲಿ ನಾಲಾಗಳ ನಿರ್ಜಲೀಕರಣಕ್ಕೆ ₹ 91.7 ಲಕ್ಷ, ಸ್ಯಾನಿಟರಿ ನ್ಯಾಪ್‌ಕಿನ್‌ ವೆಂಡಿಂಗ್‌ ಯಂತ್ರಗಳಿಗೆ ₹ 13 ಲಕ್ಷ ಮತ್ತು ಮಳೆ ನೀರು ಸಂಗ್ರಹ ಯೋಜನೆಗೆ ₹ 37 ಲಕ್ಷ ವೆಚ್ಚ ಮಾಡಲಾಗಿದೆ. ಈ ಆರೂ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನಕ್ಕೆ ಆರಂಭದಲ್ಲಿ ಕೆಲ ಅಡೆತಡೆ ಎದುರಾದವು. ಸ್ಥಳೀಯವಾಗಿದ್ದ ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ಇನ್ನು ಮುಂದೆ ಕಾಮಗಾರಿಗಳು ವೇಗ ಪಡೆದುಕೊಳ್ಳುತ್ತವೆ. ಗುತ್ತಿಗೆದಾರರು ಕೂಡ ಉತ್ಸುಕರಾಗಿದ್ದಾರೆ. ಎರಡು ವರ್ಷದಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ’ ಎಂದರು.

‘ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಒಟ್ಟು ನಾಲ್ಕು ಯೋಜನೆಗಳಿಗೆ ₹ 164.85 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಲಾಗಿದೆ. ಇದರಲ್ಲಿ ₹ 50 ಕೋಟಿ ವೆಚ್ಚದಲ್ಲಿ ಬಹುಮಹಡಿಗಳ ವಾಹನ ನಿಲ್ದಾಣ ಕಾಮಗಾರಿ ಕಾರ್ಯಾದೇಶ ನೀಡಲಾಗಿದೆ. ಇನ್ನುಳಿದ ಮೂರು ಯೋಜನೆಗಳಾದ ಸ್ಮಾರ್ಟ್‌ ಪೋಲ್‌ (₹ 48 ಕೋಟಿ), ಎಲ್‌ಇಡಿ ಬೀದಿ ದೀಪ ಅಳವಡಿಸಲು (₹ 64.51 ಕೋಟಿ) ಮತ್ತು ಸೋಲಾರ್ ರೂಫ್‌–ಟಾಪ್‌ ಅಳವಡಿಕೆಗೆ (₹ 2.31 ಕೋಟಿ) ಮರು ಟೆಂಡರ್‌ ಕರೆಯಲಾಗಿದೆ’ ಎಂದು ತಿಳಿಸಿದರು.

‘ತೋಳನಕೆರೆ ಪುನರ್‌ ಅಭಿವೃದ್ಧಿಗೆ ₹ 15.57 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದ್ದು, 2020ರ ಮೇ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಈಜುಕೊಳ ಪುನರ್‌ ಅಭಿವೃದ್ಧಿಗೆ ₹ 2.41 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಆರು ತಿಂಗಳಲ್ಲಿ ಕೆಲಸ ಮುಗಿಸುವಂತೆ ಸೂಚಿಸಲಾಗಿದೆ. ಎಂ.ಜಿ. ಪಾರ್ಕ್‌ ಒಂದು ವರ್ಷದಲ್ಲಿ ₹ 12.103 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸುವಂತೆ ಹೇಳಲಾಗಿದೆ. ₹ 1.17 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ ಶಾಲೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ’ ಎಂದರು.

ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಕೌಲಗಿ, ವಿಶೇಷ ಅಧಿಕಾರಿ ಎಸ್‌.ಎಚ್‌. ನರೇಗಲ್‌, ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ. ನಾರಾಯಣ ಇದ್ದರು.

ಇ–ಟಾಯ್ಲೆಟ್‌: 3,000 ಜನರಿಂದ ದುರ್ಬಳಕೆ!
ನಗರದ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಸ್ಪಾರ್ಟ್‌ ಸಿಟಿ ಯೋಜನೆ ಅಡಿ ನಗರದ ಏಳು ಕಡೆ ಆರಂಭಿಸಲಾದ ಒಟ್ಟು 15 ಇ–ಟಾಯ್ಲೆಟ್‌ಗಳಲ್ಲಿ ದುರ್ಬಳಕೆಯೇ ಹೆಚ್ಚಾಗಿದೆ!

ಇ–ಟಾಯ್ಲೆಟ್‌ ಬಳಕೆಯಿಂದ ಇದುವರೆಗೂ ಒಟ್ಟು ₹ 18 ಸಾವಿರ ಸಂಗ್ರಹವಾಗಿದೆ. ಶೇ 40ರಷ್ಟು ಮಹಿಳೆಯರು ಇದರ ಸೌಲಭ್ಯ ಬಳಸಿಕೊಂಡಿದ್ದಾರೆ. ಆದರೆ, ಮೂರು ಸಾವಿರ ಜನ ಇದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಒಂದೇ ಕ್ವಾಯಿನ್‌ ಹಾಕಿ ಮೂರ್ನಾಲ್ಕು ಜನ ಟಾಯ್ಲೆಟ್‌ ಬಳಸಿದ್ದರಿಂದ ಶೌಚಾಲಯಗಳ ಸ್ವಚ್ಛತೆ ಹಾಳಾಗಿದೆ.

‘ಜನರ ಅನುಕೂಲಕ್ಕಾಗಿ ಇ–ಟಾಯ್ಲೆಟ್‌ ಮಾಡಲಾಗಿದೆ. ಅವರೇ ದುರ್ಬಳಕೆ ಮಾಡಿಕೊಂಡರೆ ಸ್ಮಾರ್ಟ್‌ ಸಿಟಿ ಯೋಜನೆಯ ಉದ್ದೇಶವೇ ಹಾಳಾಗುತ್ತದೆ. ಆದ್ದರಿಂದ ಜನ ಕೂಡ ತಮ್ಮ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಯೋಜನೆ ಯಶಸ್ಸಿನಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ’ ಎಂದು ಶಕೀಲ್‌ ಅಹ್ಮದ್‌ ಹೇಳಿದರು.

₹ 380 ಕೋಟಿಯಲ್ಲಿ ಖರ್ಚಾಗಿದ್ದು ₹ 24 ಕೋಟಿ
ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನಕ್ಕೆ 2015–16ರಿಂದ 2019ರ ಅವಧಿಯಲ್ಲಿ ಒಟ್ಟು ₹ 380 ಕೋಟಿ ಅನುದಾನ ಬಂದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಲಾ ₹ 190 ಕೋಟಿ ನೀಡಿವೆ. ಇದರಲ್ಲಿ ವೆಚ್ಚವಾಗಿದ್ದು ₹ 24.17 ಕೋಟಿ!

ಯೋಜನೆಗಳಿಗೆ ₹ 12.304 ಕೋಟಿ, ಸಮಾಲೋಚನಾ ಸಂಸ್ಥೆಗೆ ₹ 5.26 ಕೋಟಿ, ಆಡಳಿತ ಮತ್ತು ಸಿಬ್ಬಂದಿ ವೆಚ್ಚ ₹ 6.60 ಕೋಟಿ ಖರ್ಚಾಗಿದೆ ಎಂದು ಶಕೀಲ್‌ ಅಹ್ಮದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT