ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಹಿಳೆಯರ ತ್ವಚೆ ರಕ್ಷಣೆಗೆ ಸುಧಾರಿತ ಏಪ್ರಾನ್‌

ಕೃಷಿ ವಿಶ್ವವಿದ್ಯಾಲಯ ಸಮುದಾಯ ವಿಜ್ಞಾನ ಕಾಲೇಜಿನ ಜವಳಿ ವಿಭಾಗದ ಆವಿಷ್ಕಾರ
Last Updated 4 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಧಾರವಾಡ: ಕೃಷಿಯ ಬೆನ್ನೆಲುಬಾದ ರೈತ ಮಹಿಳೆಯರ ಆರೋಗ್ಯ ಹಾಗೂ ತ್ವಚೆಯ ರಕ್ಷಣೆಗೆ ಪೂರಕವಾದ ಏಪ್ರಾನ್‌ ಅನ್ನು ಕೃಷಿ ವಿಶ್ವವಿದ್ಯಾಲಯದ ಸಮುದಾಯ ವಿಜ್ಞಾನ ಕಾಲೇಜಿನ ಜವಳಿ ಹಾಗೂ ವಸ್ತ್ರ ವಿಭಾಗದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಸೂರ್ಯನ ಅತಿನೇರಳೆ ಕಿರಣಗಳಿಂದ ತ್ವಚೆಯನ್ನು ರಕ್ಷಿಸುವುದು ಇದರ ವಿಶೇಷ.

ನಿತ್ಯ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಬಿಸಿಲಿನಲ್ಲೇ ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಅತಿ ನೇರಳೆ ಕಿರಣ ಹಾಗೂ ಬೆಳೆಗಳಿಗೆ ಸಿಂಪಡಿಸುವ ರಾಸಾಯನಿಕಗಳು ಸಾಕಷ್ಟು ಬಾಧಿಸುತ್ತವೆ. ಹೀಗಾಗಿ ಇವರಿಗೊಂದು ರಕ್ಷಾ ಕವಚ ನೀಡುವ ಉದ್ದೇಶದಿಂದಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆಯ ಭಾಗವಾಗಿ ಕೃಷಿ ನಿರತ ಮಹಿಳೆ ಯೋಜನೆಯ ಮುಖ್ಯಸ್ಥೆ ಡಾ. ಕೆ.ಜೆ.ಸಣ್ಣಪಾಪಮ್ಮ ಅವರ ನೇತೃತ್ವದಲ್ಲಿ ಈ ವಿಶೇಷ ಏಪ್ರಾನ್ ಸಿದ್ಧಗೊಂಡಿದೆ. ಇವರೊಂದಿಗೆ ಕಿರಿಯ ಸಂಶೋಧನಾ ವಿದ್ಯಾರ್ಥಿನಿ ದೀಪಾ ಭೈರಪ್ಪನವರ ಸಂಶೋಧನೆಯಲ್ಲಿ ತೊಡಗಿದ್ದಾರೆ.

ಹತ್ತಿ ಬಟ್ಟೆಯಿಂದ ಸಿದ್ಧಗೊಂಡ ಈ ಏಪ್ರಾನ್‌ಗೆ ನಿಸರ್ಗದತ್ತವಾಗಿ ಲಭ್ಯವಿರುವ ದ್ರಾವಣಗಳನ್ನು ಸಿಂಪಡಿಸಿ ಅತಿನೇರಳೆ ಕಿರಣ ಹಾಗೂ ಹಾನಿಕಾರಕ ರಾಸಾಯನಿಕದಿಂದ ರಕ್ಷಣೆ ಸಿಗುವಂತೆ ಅಭಿವೃದ್ಧಿಪಡಿಸಲಾಗಿದೆ. ಹೀಗೆ ಸಿದ್ಧಗೊಂಡ ಏಪ್ರಾನ್‌ಗಳನ್ನು ಕೃಷಿ ವಿಶ್ವವಿದ್ಯಾಲಯದ ಪ್ರಾಯೋಗಿಕ ತಾಕುಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ನೀಡಿ, ಅವರ ಅಭಿಪ್ರಾಯಗಳನ್ನು ವಿಭಾಗ ಸಂಗ್ರಹಿಸಿ, ದಾಖಲಿಸುತ್ತಿದೆ.

ಈ ಕುರಿತು ಮಾಹಿತಿ ನೀಡಿದ ಡಾ. ಸಣ್ಣಪಾಪಮ್ಮ, ‘ಬೀಜ ಬಿತ್ತನೆಯಿಂದ ಹಿಡಿದು ಕೊಯ್ಲು ಹಾಗೂ ಸಂಸ್ಕರಣೆ ಸೇರಿದಂತೆ ಎಲ್ಲಾ ರೀತಿಯ ಕೃಷಿ ಕಾಯಕದಲ್ಲೂ ಮಹಿಳೆಯರ ಶ್ರಮ ದೊಡ್ಡದು. ವಿಪರೀತ ಹವಾಮಾನ ಪರಿಸ್ಥಿತಿಗೆ ಒಡ್ಡಿಕೊಳ್ಳುವ, ದೀರ್ಘಕಾಲದವರೆಗೆ ಬಿಸಿಲಿನ ಪ್ರಕರತೆಯಲ್ಲಿ ಕೆಲಸ ಮಾಡುವ, ದೂಳು, ಹೊಟ್ಟು ಹಾಗೂ ರಾಸಾಯನಿಕಗಳ ಬಳಕೆಯಿಂದ ಕೃಷಿ ಮಹಿಳೆಯರ ಆರೋಗ್ಯವೂ ಸಮಸ್ಯೆಗೀಡಾಗುತ್ತಿದೆ. ಅದರಲ್ಲೂ ಅವರ ತ್ವಚೆ ಕಂದು ಬಣ್ಣಕ್ಕೆ ತಿರುಗುವುದು, ದೀರ್ಘ ಕಾಲದಲ್ಲಿ ಚರ್ಮದ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವೂ ಇದೆ. ಇವೆಲ್ಲದಕ್ಕೂ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ನಡೆಸಲಾದ ಸಂಶೋಧನೆ ಫಲ ನೀಡಿದೆ’ ಎಂದರು.

‘ಬಹಳಷ್ಟು ಕಡೆ ಮಹಿಳೆಯರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಪುರುಷರ ಅಂಗಿಗಳನ್ನು ಧರಿಸುವುದನ್ನು ನೋಡಿದ್ದೇವೆ. ಅದೇ ಶರ್ಟ್ ಮಾದರಿಯಲ್ಲಿರುವ ಈ ಏಪ್ರಾನ್‌, ಅತಿ ನೇರಳೆ ಕಿರಣಗಳಿಂದ ತ್ವಚೆಯನ್ನು ರಕ್ಷಿಸುತ್ತದೆ. ಜತೆಗೆ ಅವುಗಳಲ್ಲಿ ತಮಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಉಪಕರಣಗಳನ್ನು ಇಟ್ಟುಕೊಳ್ಳಲು ಸಾಕಷ್ಟು ಸ್ಥಳಾವಕಾಶಗಳನ್ನು ಕಲ್ಪಿಸಲಾಗಿದೆ. ಇದು ದೇಹಕ್ಕೆ ಮಾತ್ರವಲ್ಲದೇ, ದೂಳು ಮತ್ತು ರಾಸಾಯನಿಕದಿಂದತಲೆ ಕೂದಲನ್ನೂ ರಕ್ಷಿಸುವಂತೆ ವಿನ್ಯಾಸ ಮಾಡಲಾಗಿದೆ’ ಎಂದು ವಿವರಿಸಿದರು.

‘ಸಂಶೋಧನಾ ಹಂತದಲ್ಲಿ ಹಲವು ರೀತಿಯಲ್ಲಿ ಬಳಸಲಾಗುತ್ತಿರುವ ಈ ಏಪ್ರಾನ್ 50 ಒಗೆತದ ನಂತರವೂ ತನ್ನ ಅತಿ ನೇರಳೆ ಕಿರಣ ರಕ್ಷಣಾ ಗುಣವನ್ನು ಕಳೆದುಕೊಂಡಿಲ್ಲ ಎನ್ನುವುದು ಇದರ ಗುಣಾತ್ಮಕ ಅಂಶ. ಇಂಥ ಒಂದು ಏಪ್ರಾನ್‌ಗೆ ಸುಮಾರು ₹300ರಿಂದ ₹400ವರೆಗೂ ದರ ನಿಗದಿಪಡಿಸಬಹುದು ಎಂದು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ’ ಎಂದು ಡಾ.ಸಣ್ಣಪಾಪಮ್ಮ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT