ಭಾನುವಾರ, ನವೆಂಬರ್ 17, 2019
21 °C
ಹುಬ್ಬಳ್ಳಿ–ಧಾರವಾಡ ಮೆಟ್ರೊ

ದೀಪಗಳ ಬೆಳಗುವನವ ಉದ್ಯಮಿಗಳ ಸಂತೆ

Published:
Updated:
Prajavani

ಮಣ್ಣಿನಿಂದ ತಯಾರಿಸಿರುವ ದೀಪಗಳು ಆಕರ್ಷಕವಾಗಿವೆ. ಗಣೇಶ, ಲಿಂಗು ಒಳಗೊಂಡಿರುವ ವಿಭಿನ್ನ ದೊಡ್ಡ ಹಣತೆಗಳು ಟೆರ್ರಾಕೋಟ ಕಲೆಯಲ್ಲಿ ಸುಂದರವಾಗಿ ಅರವಳಿವೆ. ಆರತಿ ತಟ್ಟೆಯಲ್ಲಿ ಪೂರ್ಣಕುಂಭದ ಸುತ್ತದ ಪಣತೆಗಳು ವಿವಿಧ ಬಣ್ಣಗಳಲ್ಲಿ ಲಭ್ಯ ಇವೆ.

ಚೀನಿ ಮಣ್ಣು, ಬಿದಿರು, ಕಬ್ಬಿಣದಿಂದ ತಯಾರಿಸಿರುವ ವಿಭಿನ್ನ ಆಕಾರದ ಆಕಾಶಬುಟ್ಟಿಗಳು ದೀಪಾವಳಿಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಪ್ಲಾಸ್ಟಿಕ್‌ನಿಂದ ತಯಾರಿಸಿದ ಆಕಾಶಬುಟ್ಟಿಗಳಿಗಿಂತ ವಿಭಿನ್ನವಾಗಿವೆ. ಕಣ್ಮೆರೆಯಾಗಿರುವ ಕಂದೀಲುಗಳೂ ಹೊಸ ರೂಪದಲ್ಲಿ ಕಾಣಿಸಿಕೊಂಡಿವೆ. ಕರಕುಶಲ ಕಲೆಯ ಶ್ರೀಮಂತಿಕೆಯನ್ನು ಅವುಗಳು ಬೆಳಗುತ್ತಿವೆ.

ಕಸೂತಿ ಸೀರೆಗಳು, ಬ್ಲೌಸ್‌ಗಳು, ಚೂಡಿದಾರಗಳಿವೆ. ರೇಷ್ಮೆ ಸೀರೆ, ಕಾಟನ್‌ ಸೀರೆ, ಇಳಕಲ್‌ ಸೀರೆಗಳು ನೀರೆಯರನ್ನು ಸೆಳೆಯುತ್ತಿವೆ. ರೇಷ್ಮೆ ಹಾಗೂ ಸಿಲ್ಕ್‌ ಬಟ್ಟೆಗಳಲ್ಲಿ ಮಕ್ಕಳಿಗಾಗಿ ಸಿದ್ಧಪಡಿಸಿದ ಷರ್ಟ್, ಲುಂಗಿ, ಲಂಗ, ಬ್ಲೌಸ್‌ಗಳಿವೆ. ಬಟ್ಟೆಗಳಷ್ಟೇ ಅಲ್ಲದೆ ಗೋಕಾಕಿನ ಕರದಂಟು, ಬೆಳಗಾವಿಯ ಕುಂದಾ, ಐನಾಪುರದ ಬಾಳು ಮಾಮಾ ಪೇಢಾ, ಧಾರವಾಡ ಪೇಢಾದ ಸವಿಯನ್ನೂ ಸವಿಯಬಹುದಾಗಿದೆ.

‘ಟೆರ್ರಾಕೋಟ ಕಲೆಯಲ್ಲಿ ಮಣ್ಣಿನಿಂದ ಹಣತೆ, ಗಣೇಶ ಮೂರ್ತಿ, ಆಲಂಕಾರಿಕ ವಸ್ತುಗಳನ್ನು ತಯಾರಿಸುತ್ತೇವೆ. ಅವುಗಳನ್ನು ವಿವಿಧೆಡೆ ನಡೆಯುವ ಪ್ರದರ್ಶನ ಹಾಗೂ ಮಾರಾಟ ಮೇಳಗಳಲ್ಲಿ ಮಾರಾಟ ಮಾಡುತ್ತೇವೆ. ಈಗಲೂ ಮಣ್ಣಿನಿಂದ ತಯಾರಿಸಿದ ವಸ್ತುಗಳಿಗೆ ಬೇಡಿಕೆ ಇದೆ’ ಎಂದು ಶಿವಮೊಗ್ಗ ಜಿಲ್ಲೆಯ ಸಂಕೇದೇವನಕೊಪ್ಪದ ಬಸವರಾಜಪ್ಪ ಹೇಳಿದರು.

‘ಕುಸುಗಲ್‌ನಲ್ಲಿ ವೀರಭದ್ರೇಶ್ವರ ಗಾರ್ಮೆಂಟ್ಸ್‌ ಹೆಸರಿನಲ್ಲಿ ಸಣ್ಣ ಉದ್ಯಮ ಆರಂಭಿಸಿದ್ದು, ಶರ್ಟ್‌ಗಳನ್ನು ಸಿದ್ಧಪಡಿಸುತ್ತೇವೆ. ನಲವತ್ತು ಜನರು ಕೆಲಸ ಮಾಡುತ್ತಿದ್ದಾರೆ. ಮಾರುಕಟ್ಟೆ ಕಂಡುಕೊಳ್ಳುವುದೇ ಸವಾಲು. ಇಂತಹ ಮೇಳಗಳಲ್ಲಿ ಉತ್ತಮ ವ್ಯಾಪಾರವಾಗುವುದರಿಂದ ಯಾವುದೇ ತೊಂದರೆಯಾಗುತ್ತಿಲ್ಲ’ ಎನ್ನುತ್ತಾರೆ ಗಾರ್ಮೆಂಟ್ಸ್‌ ಮಾಲೀಕ ಶಿವಯೋಗಿ.

‘ಆರು ವರ್ಷಗಳಿಂದ ಡಾಲ್‌ ತಯಾರಿಕೆ, ಜೂಲಾ ಮೀರರ್‌, ಬ್ಲೌಸ್‌, ಮದುವೆಯ ಆಭರಣಗಳನ್ನು ತಯಾರಿಸುತ್ತೇವೆ. ಉತ್ತಮ ಬೇಡಿಕೆ ಇದೆ. ರಾಜ್ಯದ ವಿವಿಧೆಡೆ ನಡೆಯುವ ಮೇಳಗಳೇ ನಮ್ಮ ವ್ಯಾಪಾರದ ಕೇಂದ್ರಗಳಾಗಿವೆ’ ಎನ್ನುತ್ತಾರೆ ಅಶ್ವಿನಿ ಲೇಡಿಸ್‌ ಕಾರ್ನರ್‌ನ ಸರೋಜಾ ಚೇಗರಡ್ಡಿ.

ಶಿವಮೊಗ್ಗ, ಧಾರವಾಡ, ಗದಗ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಸಣ್ಣ ಉದ್ಯಮಿಗಳು ಭಾಗವಹಿಸಿದ್ದಾರೆ. ಗೋಕಾಕ, ದೇಶಪಾಂಡೆ ಫೌಂಡೇಷನ್‌ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿರುವ ನವೋದ್ಯಮಿ ಮೆಗಾ ಉತ್ಸವವು ಗ್ರಾಹಕರು ಹಾಗೂ ಚಿಕ್ಕ ಉದ್ಯಮಿಗಳ ನಡುವೆ ಸಂಪರ್ಕ ಕೊಂಡಿಯಾಗಿದೆ. ಆ.21ರ ವರೆಗೆ ಉತ್ಸವ ನಡೆಯಲಿದೆ.

ಪ್ರತಿಕ್ರಿಯಿಸಿ (+)