ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಬರಡು ಭೂಮಿಯಲ್ಲಿ ಸಮೃದ್ಧ ಬೆಳೆ

ಗುಡ್ಡ ಸಮತಟ್ಟು ಮಾಡಿ ತೋಟಗಾರಿಕೆಯಲ್ಲಿ ಯಶಸ್ಸು ಕಂಡ ರೈತ ಉಳವಪ್ಪ
Last Updated 16 ಸೆಪ್ಟೆಂಬರ್ 2022, 4:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಈ ಗುಡ್ಡದಲ್ಲೇನಿದೆ. ಇದನ್ನೇಕೆ ಖರೀದಿಸಿದೆ. ಇಲ್ಲಿ ಕೃಷಿ ಮಾಡಲು ಸಾಧ್ಯವೇ? ಎಂದು ಹಲವರು ಪ್ರಶ್ನಿಸಿದರು. ಇದನ್ನೇ ಸವಾಲಾಗಿ ಸ್ವೀಕರಿಸಿ, ಅದೇ ಜಾಗದಲ್ಲಿ ತೋಟಗಾರಿಕೆ ಬೆಳೆ ಬೆಳೆದೆ. ಈಗ ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದ್ದೇನೆ...’

ತಾಲ್ಲೂಕಿನ ಅಮರಗೋಳದ ರೈತ ಉಳವಪ್ಪ ತಿಪ್ಪಣ್ಣ ದಾಸನೂರ ಅವರ ವಿಶ್ವಾಸದ ನುಡಿಗಳಿವು. ಕುಂದಗೋಳ ತಾಲ್ಲೂಕಿನ ಮತ್ತಿಕಟ್ಟೆ ಬಳಿ 16 ಎಕರೆ ಗುಡ್ಡ ಪ್ರದೇಶವನ್ನು ಅವರೀಗ ಲಕ್ಷಾಂತರ ರೂಪಾಯಿ ಆದಾಯ ತರುವ ಭೂಮಿಯಾಗಿ ಪರಿವರ್ತಿಸಿದ್ದಾರೆ. ಕುರಿ ಸಾಕಣೆಯೊಂದಿಗೆ ಹೈನುಗಾರಿಕೆ ಮಾಡುತ್ತಾ, ಸಮಗ್ರ ಕೃಷಿಗೆ ಮಾದರಿಯಾಗಿದ್ದಾರೆ.

‘ಕೃಷಿ ಕುಟುಂಬ ಹಿನ್ನೆಲೆಯಿಂದ ಬಂದ ನಾನು ವ್ಯಾಪಾರದತ್ತ ಮುಖ ಮಾಡಿದರೂ, ಮೂಲ ಕಾಯಕ ಬಿಡಲಿಲ್ಲ. ಅಮರಗೋಳದಲ್ಲಿ ಸಹೋದರರ ಜೊತೆಗೂಡಿ 50 ಎಕರೆ ಭೂಮಿಯಲ್ಲಿ ಸೊಯಾಬೀನ್, ಹೆಸರು, ಉದ್ದು, ಹತ್ತಿ, ಸೂರ್ಯಕಾಂತಿ, ಜೋಳ, ಕಡಲೆ, ಶೇಂಗಾ ಬೆಳೆಯುತ್ತೇನೆ. ಒಂಬತ್ತು ವರ್ಷಗಳ ಹಿಂದೆ ಮತ್ತಿಕಟ್ಟೆ ಬಳಿ 16 ಎಕರೆ ಗುಡ್ಡದ ಜಮೀನು ಖರೀದಿಸಿ, ಅಲ್ಲಿದ್ದ ಕಲ್ಲುಗಳನ್ನು ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಸಾಗಿಸಿದೆ. ಗುಡ್ಡ ಸಮತಟ್ಟುಗೊಳಿಸಿ ಎರಡು ವರ್ಷದ ಬಳಿಕ ಕೃಷಿ ಸಂಶೋಧಕರ ಸಲಹೆಯಂತೆ ಮಾವು ಬೆಳೆದು ಉತ್ತಮ ಇಳುವರಿ ಪಡೆದೆ’ ಎಂದು ಉಳವಪ್ಪ ತಮ್ಮ ಸಾಧನೆಯ ಹಾದಿಯನ್ನು ಬಿಚ್ಚಿಟ್ಟರು.

‘ಸದ್ಯ 2 ಸಾವಿರ ಹೆಬ್ಬೇವು, 1,800 ಗಾಳಿ ಗಿಡ, 500 ಸಿಲ್ವರ್ ಓಕ್‌, 1,080 ಮಾವು, 700 ಗೋಡಂಬಿ ಗಿಡಗಳಿವೆ. ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದೇನೆ. ಕೃಷಿ ಹೊಂಡ ಇರುವುದರಿಂದ ನೀರಿಗೆ ಸಮಸ್ಯೆ ಇಲ್ಲ. ವರ್ಷಕ್ಕೆ 7 ಲಕ್ಷ ಆದಾಯ ಬರುತ್ತಿದೆ’ ಎನ್ನುತ್ತಾರೆ ಅವರು.

ಕೃಷಿ ಕ್ಷೇತ್ರದಲ್ಲಿ ಉಳ್ಳವಪ್ಪ ಅವರ ಸಾಧನೆ ಗುರುತಿಸಿ, 2017ರಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯವು ಉತ್ತಮ ತೋಟಗಾರಿಕಾ ಕೃಷಿಕ ಪ್ರಶಸ್ತಿ, 2018ರಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ಕೃಷಿ ಇಲಾಖೆಯು ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT