ಭಕ್ತರ ಹರ್ಷೋದ್ಘಾರಗಳ ನಡುವೆ ಜರುಗಿದ ಚೆನ್ನಬಸವೇಶ್ವರರ ಜಾತ್ರೆ

7

ಭಕ್ತರ ಹರ್ಷೋದ್ಘಾರಗಳ ನಡುವೆ ಜರುಗಿದ ಚೆನ್ನಬಸವೇಶ್ವರರ ಜಾತ್ರೆ

Published:
Updated:
Deccan Herald

ಧಾರವಾಡ: ಹರಹರ... ಮಹಾದೇವ... ಅಡಕೇಶ್ವರ... ಮಡಕೇಶ್ವರ... ಉಳವಿ ಚೆನ್ನಬಸವೇಶ್ವರ ಹರಹರ ಮಹಾದೇವ...! ಹೀಗೆ ಭಕ್ತರ ಹರ್ಷೋದ್ಗಾರಗಳ ನಡುವೆ ತ್ರಿಕಾಲಜ್ಞಾನಿ ಉಳವಿ ಚೆನ್ನಬಸವೇಶ್ವರ ತೇರನ್ನು ಭಕ್ತರು ಧನ್ಯತಾಭಾವದಿಂದ ಎಳೆದು ಸಂಭ್ರಮಿಸಿದರು.

ಶ್ರಾವಣದ ಕೊನೆಯ ಸೋಮವಾರ ಜರುಗುವ ಚೆನ್ನಬಸವೇಶ್ವರರ ಜಾತ್ರೆಯ ತೇರಿಗೆ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಪ್ರಮುಖ ಬೀದಿಗಳಲ್ಲಿ ಸಾಗಿದ ರಥವು ಹಿಂದಿ ಪ್ರಚಾರ ಸಭಾ ವೃತ್ತದವರೆಗೂ ಸಾಗಿ ದೇವಸ್ಥಾನಕ್ಕೆ ಹಿಂದಿರುಗಿತು. ರಥೋತ್ಸವದ ಉದ್ದಕ್ಕೂ ಪುರವಂತಿಕೆ ಹಾಗೂ ವೀರಗಾಸೆ ನೃತ್ಯ ಗಮನ ಸೆಳೆದವು. ಭಕ್ತರು ತೇರನ್ನು ಎಳೆದು ಧನ್ಯರಾದರು.

ರಥದ ಎರಡು ಬದಿಗಳಲ್ಲಿ ನಿಂತಿದ್ದ ಭಕ್ತರು ರಥಕ್ಕೆ ಉತ್ತುತ್ತೆ, ಬೆಲ್ಲ, ಬಾಳೆಹಣ್ಣು ಎಸೆಯುವ ಮೂಲಕ ಇಷ್ಟಾರ್ಥಗಳನ್ನು ಈಡೇರಿಸುವಂತೆ ಮನದಲ್ಲಿ ಸಂಕಲ್ಪ ಮಾಡಿಕೊಂಡರು. ಅಲ್ಲದೇ, ಕುಟುಂಬದ ಸದಸ್ಯರ ಜತೆಗೆ ಶ್ರದ್ಧಾಭಕ್ತಿಯಿಂದ ತೇರನ್ನು ಎಳೆದು ಪುನಿತರಾದರು. ಡೊಳ್ಳು ಕುಣಿತ, ಜಾಂಝ್‌ ಮೇಳ, ಜಗ್ಗಲಗಿ ಮೇಳ ಜಾತ್ರೆಯ ಕಳೆ ಹೆಚ್ಚಿಸಿತ್ತು. ಗೊಂಬೆ ಕುಣಿಗಳನ್ನು ಕಂಡು ಮಕ್ಕಳು ಪುಳಕಿತರಾದರು.

ಉಳವಿ ಬಸವೇಶ್ವರ ಧರ್ಮ ಫಂಡ್ ಸಂಸ್ಥೆ ಅಧ್ಯಕ್ಷ ಸಣ್ಣಬಸಪ್ಪ ಪಟ್ಟಣಶೆಟ್ಟಿ, ಕಾರ್ಯದರ್ಶಿ ಬಿ.ಸಿ.ರಾಯಪ್ಪನವರ, ಉಪಾಧ್ಯಕ್ಷ ಈರಬಸಪ್ಪ ಭಾವಿಕಟ್ಟಿ, ಎಂ.ಎಲ್‌.ಹಿರೇಗೌಡರ, ಎಸ್‌.ಬಿ.ಪಾಗದ, ಎಸ್‌.ಎಸ್‌.ನಟೇಗಲ್‌ ಮುಂತಾದವರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವವನ್ನು ‘ಮಿರ್ಚಿ ಜಾತ್ರೆ’ ಎಂದೂ ಕರೆಯುವುದುಂಟು. ಹೀಗಾಗಿ ಜಾತ್ರೆಗೆ ಬಂದವರೆಲ್ಲರೂ ಮಿರ್ಚಿ ಹಾಗೂ ಗಿರ್ಮಿಟ್ಟು ತಿಂದು ಜಾತ್ರೆಯನ್ನು ಸಂಪನ್ನಗೊಳಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಉಳವಿ ಚೆನ್ನಬಸವೇಶ್ವರ ಜಾತ್ರೆಗೆ ಧಾರವಾಡ ನಿವಾಸಿಗಳು ಮಾತ್ರವಲ್ಲ, ಸುತ್ತಮುತ್ತಲಿನ ಗ್ರಾಮಗಳ ರೈತರು, ವಿವಿಧ ಕಲಾ ತಂಡಗಳು ಮತ್ತು ಜಾನಪದ ಕಲಾ ಮೇಳಗಳು ಕೂಡ ಪಾಲ್ಗೊಂಡಿದ್ದವು. ಈ ವರ್ಷವೂಹಳ್ಳಿಗಳಿಂದ ಬಂದ ಸಾಕಷ್ಟು ಜನರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ಈ ಎಲ್ಲ ಕಾರ್ಯಕ್ರಮಗಳ ಜೊತೆಗೆ ಬಂದ ಭಕ್ತರಿಗೆ ದಾಸೋಹ ಪರಂಪರೆಯಂತೆ ಪ್ರಸಾದದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !