ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು: ಕೇಂದ್ರ ಸಚಿವ ಜೋಶಿ

Last Updated 20 ಆಗಸ್ಟ್ 2022, 4:51 IST
ಅಕ್ಷರ ಗಾತ್ರ

ಧಾರವಾಡ: ‘ಯಾವುದೇ ನಾಯಕರ ಮೇಲೆ ಮೊಟ್ಟೆ ಎಸೆಯುವುದು, ಕಪ್ಪು ಬಾವುಟ ಪ್ರದರ್ಶಿಸುವುದು ತಪ್ಪು. ನಾನು ಇದರ ಪರವಾಗಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಕೃತ್ಯ ಸಮರ್ಥನೀಯವಲ್ಲ. ಅವರು ಸಾವರ್ಕರ್ ಕುರಿತು ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ, ಸಾವರ್ಕರ್ ಕುರಿತು ವಿಶ್ವಾಸ ಹೊಂದಿರುವವರಿಗೆ ಅಪಮಾನ ಆಗುವ ರೀತಿಯಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು ಸರಿಯಲ್ಲ’ ಎಂದರು.

‘ಸ್ವತಃ ಇಂದಿರಾ ಗಾಂಧಿ ಅವರು ಸಾವರ್ಕರ್ ಬಗ್ಗೆ ಪತ್ರ ಬರೆದು, ‘ಭಾರತದ ಸುಪುತ್ರ’ ಎಂದು ಹೊಗಳಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ದೊಡ್ಡದಿದೆ. ಮಹಾತ್ಮ ಗಾಂಧಿ ಕೂಡ ಅವರ ಹೋರಾಟವನ್ನು ಸ್ಮರಿಸಿದ್ದರು. ಆಗ ಕಾಂಗ್ರೆಸ್ ನಾಯಕರಲ್ಲಿ ಸೈದ್ಧಾಂತಿಕ ಭೇದವಿದ್ದರೂ, ಇತರರ ಬಗ್ಗೆ ಗೌರವ ಹೊಂದಿದ್ದರು. ಆದರೆ, ಇಂದಿನ ಕಾಂಗ್ರೆಸ್ ನಾಯಕರಲ್ಲಿ ಅದು ಕಾಣಿಸುತ್ತಿಲ್ಲ’ ಎಂದರು.

‘ಸಿದ್ದರಾಮಯ್ಯ ಅವರು ಈ ಹಿಂದೆ ಸೋನಿಯಾ, ರಾಹುಲ್ ಗಾಂಧಿ ಅವರನ್ನು ಬೈದಿರುವುದನ್ನು ನೆನಪು ಮಾಡಿಕೊಳ್ಳಲಿ. ಈಗ ಅವರೇ ನಕಲಿ ಕಾಂಗ್ರೆಸ್‌ನ ನಕಲಿ ಗಾಂಧಿಗಳನ್ನು ಮೆಚ್ಚಿಸಲು ಹೊರಟಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಅವರು ‘ತಿರುಕನ ಕನಸು’ ಕಾಣುವುದರಲ್ಲಿ ತಪ್ಪೇನಿಲ್ಲ’ ಎಂದು ವ್ಯಂಗ್ಯವಾಡಿದರು.

ಹುಬ್ಬಳ್ಳಿ ವರದಿ: ‘ಇಂಥ ಚಟುವಟಿಕೆಗಳಿಗೆ ಬಿಜೆಪಿ ಎಂದಿಗೂ ಪ್ರೋತ್ಸಾಹ ನೀಡುವುದಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

‘ಪ್ರತಿಭಟನೆ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಇರಬೇಕು. ಯಾರೂ ಲಕ್ಷ್ಮಣ ರೇಖೆ ದಾಟಬಾರದು. ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸಿದ್ದರಾಮಯ್ಯ ಅವರೂ ಇಂಥ ಕೃತ್ಯಗಳಿಗೆ ಪ್ರಚೋದನೆ ನೀಡುವುದನ್ನು ನಿಲ್ಲಿಸಬೇಕು’ ಎಂದು ಶುಕ್ರವಾರ ಇಲ್ಲಿ ಪ್ರತಿಕ್ರಿಯಿಸಿದರು.

‘ವೀರ ಸಾವರ್ಕರ್‌ ಅವರನ್ನು ಟೀಕಿಸಿದರೆ, ಅವಹೇಳನಕಾರಿಯಾಗಿ ಮಾತನಾಡಿದರೆ ಮುಸ್ಲಿಮರ ಮತಗಳು ಸಿಗುತ್ತವೆ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ತೇಲುತ್ತಿದ್ದಾರೆ. ಅಲ್ಲದೇ, ನಕಲಿ ಗಾಂಧಿಗಳನ್ನು ಮೆಚ್ಚಿಸಲು ಅವರು ಸಾವರ್ಕರ್‌ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ’ ಎಂದು ದೂರಿದರು.

ಹೇಡಿತನದ ಲಕ್ಷಣ: ಆಕ್ರೋಶ
ಹುಬ್ಬಳ್ಳಿ: ‘ಕೊಡಗಿನಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿದ್ದು ಹೇಡಿತನದ ಲಕ್ಷಣ’ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ವೇದವ್ಯಾಸ ಕೌಲಗಿ ಕಿಡಿಕಾರಿದ್ದಾರೆ.

‘ಕೊಡಗಿನ ಸಂಘ ಪರಿವಾರ ಹಾಗೂ ಬಿಜೆಪಿಯವರು ಗೂಂಡಾ ಸಂಸ್ಕೃತಿ ತೋರಿಸಿದ್ದು, ಇದಕ್ಕೆ ಸ್ಥಳೀಯ ಪೊಲೀಸರೂ ಸಾಥ್‌ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮೊಟ್ಟೆ ಎಸೆಯುವಂತಹ ಅನಾಗರಿಕ ಕೃತ್ಯವನ್ನು ಸಂಸದ ಪ್ರತಾಪ್‌ ಸಿಂಹ ಸಮರ್ಥಿಸಿಕೊಂಡದ್ದು ನಾಚಿಕೆಗೇಡು. ಗೃಹ ಸಚಿವರು ಕೊಡಗಿನ ಘಟನೆ ಬಗ್ಗೆ ಕ್ಷಮೆಯಾಚಿಸಬೇಕು’ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

‘ಗೃಹ ಸಚಿವ ರಾಜೀನಾಮೆ ನೀಡಲಿ’
ಕುಂದಗೋಳ: ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಆಗ್ರಹಿಸಿದ್ದಾರೆ.

ಆಗಸ್ಟ್ 26ರಂದು ಕೊಡಗಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾದ ಜಿಲ್ಲಾಡಳಿತ, ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಪ್ರಕರಣದ ನೈತಿಕ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಭಾವಚಿತ್ರಕ್ಕೆ ಬೆಂಕಿ: ಮೇಯರ್ ಖಂಡನೆ
ಧಾರವಾಡ: ‘ಕಾಂಗ್ರೆಸ್‌ ಧರಣಿ ನಡೆಸಿದ ಸಂದರ್ಭದಲ್ಲಿ ಸಾವರ್ಕರ್‌ ಭಾವಚಿತ್ರ ಸುಟ್ಟುಹಾಕಿರುವುದು ಖಂಡನೀಯ’ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ‘ಈ ಪ್ರತಿಭಟನೆ ಮೂಲಕ ಕಾಂಗ್ರೆಸಿಗರು, ರಾಷ್ಟ್ರಕ್ಕಾಗಿ ಹೋರಾಡಿದ ಮಹನೀಯರನ್ನು ಅವಮಾನಿಸಿರುವುದು ಎದ್ದು ಕಾಣುತ್ತದೆ. ತಮ್ಮ ಜೀವನದುದ್ದಕ್ಕೂ ಭಾರತಮಾತೆಗೆ ಸೇವೆ ಸಲ್ಲಿಸಿದ ವೀರಸಾವರ್ಕರ್‌ ಸೇವೆ ಅಜರಾಮರ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT