ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯಕ್ಕೆ ತಕ್ಕಂತೆ ಬದಲಾಗದ ಶಿಕ್ಷಣ ಪದ್ಧತಿ: ಕುಲಪತಿ ಜಯರಾಜ ಬೇಸರ

ರಾಷ್ಟ್ರೀಯ ವಿಚಾರ ಸಂಕಿರಣ
Last Updated 29 ಫೆಬ್ರುವರಿ 2020, 10:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಗತ್ತಿನಲ್ಲಿ ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸುಧಾರಣೆಗಳಾಗಿವೆ. ಆದರೆ, ನಮ್ಮ ಶಿಕ್ಷಣ ವ್ಯವಸ್ಥೆ ಮಾತ್ರ ಹಿರಿಯರು ಹಾಕಿದ ಆಲದ ಮರಕ್ಕೆ ಜೋತು ಬಿದ್ದಂತಿದೆ. ಕಾಲದ ಅಗತ್ಯತೆಗೆ ತಕ್ಕಂತೆ ಬದಲಾಗದ ಹೊರತು ಯಶಸ್ಸು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರದ ಅಹಮದ್‌ನಗರದ ಪ್ರವರ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಡೀಮ್ಡ್‌ ವಿಶ್ವವಿದ್ಯಾಲಯದ ಕುಲಪತಿ ಡಾ. ವೈ.ಎಂ. ಜಯರಾಜ ಅಭಿಪ್ರಾಯಪಟ್ಟರು.

ಮೂರುಸಾವಿರ ಮಠದ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆರಂಭವಾದ ನ್ಯಾಕ್‌ ಪ್ರಾಯೋಜಿತ ಎರಡು ದಿನಗಳ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯುಎಸಿ) ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು, 'ಗುಣಮಟ್ಟದ ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ವರ್ಧನೆ; ಸವಾಲುಗಳು ಮತ್ತು ಜವಾಬ್ದಾರಿಗಳು’ ವಿಷಯದ ಕುರಿತು ಉಪನ್ಯಾಸ ನೀಡಿದರು.

‘ಔದ್ಯೋಗಿಕ, ಜಾಗತಿಕ ಮತ್ತು ತಂತ್ರಜ್ಞಾನದ ಕ್ರಾಂತಿ ಜಗತ್ತಿನಲ್ಲಿ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಮೊದಲು ವರ್ಷದಲ್ಲಿ ಸಾಧಿಸಬಹುದಾಗಿದ್ದನ್ನು ಈಗ ಒಂದೇ ದಿನದಲ್ಲಿ ಮಾಡಬಹುದು. ಒಂದು ದಿನದಲ್ಲಿ ಮಾಡಬಹುದಾಗಿದ್ದ ಕೆಲಸವನ್ನು ಈಗ ಒಂದೇ ನಿಮಿಷದಲ್ಲಿ ಮಾಡಲು ಸಾಧ್ಯವಿದೆ. ತಂತ್ರಜ್ಞಾನ ಅಷ್ಟೊಂದು ಅಭಿವೃದ್ಧಿ ಕಂಡಿದ್ದರೂ ನಮ್ಮ ದೇಶದ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ಓಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳ ಇಂದಿನ ಅಗತ್ಯತೆಗೆ ತಕ್ಕಂತೆ ಶಿಕ್ಷಕರು ತರಬೇತುಗೊಂಡಿಲ್ಲ. ಅಂಗೈಯಲ್ಲಿಯೇ ಮೊಬೈಲ್‌ ಹಿಡಿದು ಜಗತ್ತಿನ ಎಲ್ಲ ವಿಷಯಗಳನ್ನೂ ತಿಳಿದುಕೊಳ್ಳುವಷ್ಟು ನಾವು ಚಾಣಾಕ್ಷರಿದ್ದೇವೆ. ಅದನ್ನು ಶೈಕ್ಷಣಿಕ ಅಭಿವೃದ್ಧಿಗೆ ಸಂಪೂರ್ಣವಾಗಿ ಬಳಸಿಕೊಳ್ಳದೇ ವಿದ್ಯಾರ್ಥಿಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. 21ನೇ ಶತಮಾನದಲ್ಲಿದ್ದರೂ ನಮ್ಮ ಗ್ರಂಥಾಲಯಗಳು 19ನೇ ಶತಮಾನದಲ್ಲಿದ್ದಂತಿವೆ. ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡು ಶಿಕ್ಷಣದ ಕ್ರಾಂತಿಗೆ ಹೊಸ ದಿಕ್ಸೂಚಿ ಬರೆಯಬೇಕಾಗಿದೆ’ ಎಂದರು.

‘ಹರೆಯದ ವಯಸ್ಸಿನಲ್ಲಿ ಹಾರ್ಮೊನ್‌ಗಳ ಬದಲಾವಣೆಯಿಂದ ಪ್ರೀತಿ, ಪ್ರೇಮದ ಬಲೆಗೆ ಬೀಳುತ್ತೀರಿ. ಮೌಲ್ಯಗಳನ್ನು ಗಾಳಿಗೆ ತೂರಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದೀರಿ. ಈ ಎಲ್ಲ ಸೂಕ್ಷ್ಮಗಳನ್ನು ಅರಿತು ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳಿಗೆ ಒತ್ತು ಕೊಡಬೇಕು’ ಎಂದು ಸಲಹೆ ನೀಡಿದರು.

ಮೊದಲ ದಿನ ವಿವಿಧ ತಾಂತ್ರಿಕ ವಿಷಯಗಳ ಕುರಿತು ವಿಷಯ ತಜ್ಞರು ಉಪನ್ಯಾಸ ನೀಡಿದರು. ಶನಿವಾರ ಮಧ್ಯಾಹ್ನ 4 ಗಂಟೆಗೆ ಸಮಾರೋಪ ಜರುಗಲಿದೆ.

ಎಸ್‌ಜೆಎಂವಿ ಸಂಘದ ಚೇರ್ಮನ್‌ ಅರವಿಂದ ಕುಬಸದ, ಸದಸ್ಯ ಡಾ. ಸಿ.ಆರ್‌. ಹಿರೇಮಠ, ನ್ಯಾಕ್‌ ತಂಡದ ಸಹಾಯಕ ಸಲಹೆಗಾರ ಡಾ. ಡಿ.ಕೆ. ಕಾಂಬ್ಳೆ, ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನ ಪ್ರಾಚಾರ್ಯ ಡಾ. ಸ್ನೇಹಲತಾ ಜಿ. ನಾಡಿಗೇರ, ಲಿಂಗರಾಜ ಅಂಗಡಿ, ಅಶ್ವಿನಿ ಇಂದರಗಿ, ಎಚ್‌. ತಾಯಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT